ಯಡಿಯೂರು ಕೆರೆಗೆ 59 ದೇಶಗಳ ಪಕ್ಷಿ ಪ್ರಭೇದ ವಲಸೆ: ಬಿಬಿಎಂಪಿ ಮೇಯರ್ ಗಂಗಾಂಬಿಕೆ

Update: 2018-12-08 16:20 GMT

ಬೆಂಗಳೂರು, ಡಿ.8: ಯಡಿಯೂರು ಕೆರೆ ಪಕ್ಷಿಧಾಮವಾಗಿದ್ದು, 59 ದೇಶಗಳ 141ಕ್ಕೂ ಅಧಿಕ ವಿವಿಧ ಪ್ರಭೇದಗಳ ಪಕ್ಷಿಗಳು ಬರುತ್ತವೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಶನಿವಾರ ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಯಡಿಯೂರು ವಾರ್ಡ್‌ನ ಯಡಿಯೂರು ಕೆರೆಯಲ್ಲಿ ಶಾಂತಲಾ ದೋಣಿ ವಿಹಾರ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗುಬ್ಬಚ್ಚಿಗಳು ಸೇರಿದಂತೆ ಹಲವಾರು ಪಕ್ಷಿ ಪ್ರಭೇದಗಳು ಕಣ್ಮರೆಯಾಗುತ್ತಿರುವ ಈ ಕೆರೆಯಲ್ಲಿ ಇಷ್ಟೊಂದು ಪ್ರಭೇದದ ಪಕ್ಷಿಗಳಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಯಡಿಯೂರು ಕೆರೆ ಸುಂದರವಾದ ಪ್ರವಾಸಿ ತಾಣವಾಗಿದ್ದು, ಬಾನಾಡಿ ಮರಳಿ ಬಾ ಗೂಡಿಗೆ ಹೆಸರಿನ ಯೋಜನೆಯನ್ನು ಯಡಿಯೂರಿನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಅತ್ಯುತ್ತಮ ಪಾರ್ಕ್ ಹಾಗೂ ದೋಣಿ ವಿಹಾರ ಕೇಂದ್ರದಿಂದಾಗಿ ಪ್ರವಾಸಿಗರ ತಾಣವಾದಂತಾಗಿದೆ. ಹೀಗಾಗಿ, ನಗರಕ್ಕೆ ಬರುವವರನ್ನು ಇಲ್ಲಿನ ಉದ್ಯಾನವನ ಆಕರ್ಷಿಸುತ್ತದೆ ಎಂದು ಹೇಳಿದರು.

ವಾರ್ಡ್ ಸದಸ್ಯೆ ಪೂರ್ಣಿಮಾ ರಮೇಶ್‌ರವರು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಮಾದರಿ ವಾರ್ಡ್ ಮಾಡಿದ್ದಾರೆ. ಸಾರ್ವಜನಿಕರು ದೋಣಿ ವಿಹಾರ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಉಪಮೇಯರ್ ಭದ್ರೇಗೌಡ ಮಾತನಾಡಿ, ಪಕ್ಷಿಗಳಿಗೆ ತೊಂದರೆ ಆಗಬಾರದೆಂಬ ದೃಷ್ಟಿಯಿಂದ ಶಾಂತಲಾ ದೋಣಿ ವಿಹಾರ ಕೇಂದ್ರದಲ್ಲಿ ಪೆಡಲ್ ಬೋರ್ಟ್ ಅಳವಡಿಸಲಾಗಿದೆ. ಬೆಂಗಳೂರಿನ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಸಾರ್ವಜನಿಕರು ಕೆರೆಗಳನ್ನು ಉಳಿಸಿ, ಬೆಳೆಸಬೇಕು ಎಂದರು.

ಕೆರೆಗೆ 910 ವರ್ಷ: ನಗರದ ಹಳೆಯ ಕೆರೆಗಳಲ್ಲಿ ಯಡಿಯೂರು ಕೆರೆಯೂ ಒಂದಾಗಿದ್ದು, 910 ವರ್ಷಗಳ ಇತಿಹಾಸ ಹೊಂದಿದೆ. ಕೆರೆ 1.5 ಕಿ.ಮೀ ವ್ಯಾಪ್ತಿ ಹೊಂದಿದ್ದು, ಕೆರೆ ಸುತ್ತಲು ಉದ್ಯಾನ, ವ್ಯಾಯಾಮ ಶಾಲೆ ನಿರ್ಮಿಸಲಾಗಿದೆ. 8 ಪೆಡಲ್ ಬೋಟ್‌ಗಳಿಗೆ ಹೊಯ್ಸಳ ರಾಜವಂಶದ ಬಿಟ್ಟಿದೇವ, ಶಾಂತಲಾ, ಒಂದನೇ ಬಲ್ಲಾಳ, ಒಂದನೇ ನರಸಿಂಹ, ಸೋಮೇಶ್ವರ, ಎರಡನೇ ಬಲ್ಲಾಳ, ಎರಡನೇ ನರಸಿಂಹ ಮುಂತಾದ ಹೆಸರುಗಳನ್ನಿಡಲಾಗಿದೆ ಎಂದು ಆಡಳಿತ ಪಕ್ಷದ ಮಾಜಿ ಅಧ್ಯಕ್ಷ ಎನ್.ಆರ್.ರಮೇಶ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಯಡಿಯೂರು ವಾರ್ಡ್‌ನ ನಾಗರಿಕರು ಸೇರಿ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News