ಸಿ.ಟಿ.ರವಿ ಮಾತುಗಳು ಬಾಲಿಶವಾಗಿವೆ: ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್
ಬೆಂಗಳೂರು, ಡಿ.8: ಬಿಜೆಪಿ ಶಾಸಕ ಸಿ.ಟಿ.ರವಿಯವರ ಮಾತುಗಳು ಬಾಲಿಶವಾಗಿ ಕೂಡಿದ್ದು, ಕನಿಷ್ಠ ಆಡಳಿತದ ಅನುಭವ ಇರುವ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಅವರ ಜತೆಯಲ್ಲಾದರೂ ಮಾತುಕತೆ ನಡೆಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಮೇಲೆ ಆರೋಪ ಮಾಡಬೇಕಿತ್ತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್.ಸುದರ್ಶನ್ ಹೇಳಿದ್ದಾರೆ.
ಶನಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷೀಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 35 ಸಾವಿರ ಕೋಟಿ ಹಣ ದುರುಪಯೋಗವಾಗಿದೆ ಎಂದು ಬಿಜೆಪಿ ಶಾಸಕರಾದ ಸಿ.ಟಿ.ರವಿ ಆರೋಪ ಮಾಡಿದ್ದು, ಆರೋಪ ಮಾಡುವ ಮೊದಲು ಅಧ್ಯಯನ ಮಾಡಬೇಕಿತ್ತು ಎಂದು ಸಲಹೆ ಮಾಡಿದರು. ಇದ್ಯಾವುದನ್ನೂ ಮಾಡದೆ ಅನನುಭವಿಗಳಂತೆ ಬಿಜೆಪಿ ಶಾಸಕರು ಸಿಎಜಿ ವರದಿ ಆಧರಿಸಿ ಪುಸ್ತಕ ಬಿಡುಗಡೆ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಪ್ರತೀ ವರ್ಷ ಆಡಳಿತದ ರೂಢಿಯಲ್ಲಿ ಕೆಲವು ಹೊಂದಾಣಿಕೆಗಳು ನಡೆಯುತ್ತವೆ. ಖರ್ಚು, ವೆಚ್ಚಕ್ಕೆ ಅನುಪಾಲನಾ ವರದಿಯನ್ನು ನೀಡುವುದು ವಿಳಂಬವಾಗುತ್ತದೆ. 2001ರಿಂದಲೂ ಈ ರೀತಿ ಬಹಳಷ್ಟು ಅನುಪಾಲನಾ ವರದಿಗಳು ಸಲ್ಲಿಕೆಯಾಗಿಲ್ಲ. ಅದರಲ್ಲೂ ಬಿಜೆಪಿ ಆಡಳಿತವಿದ್ದ ಅವಧಿಯಲ್ಲಿಯೇ ಹೆಚ್ಚು ವರದಿಗಳು ಸಲ್ಲಿಕೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ಇನ್ನು, ಲೆಕ್ಕ ಹೊಂದಾಣಿಕೆಯಾಗದ ಸಾಕಷ್ಟು ವಿಷಯಗಳು ಪ್ರತಿ ವರ್ಷವೂ ಇದ್ದೇ ಇರುತ್ತದೆ. ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಸರಾಸರಿ ಶೇ.42ರಷ್ಟು ಖರ್ಚು, ವೆಚ್ಚಗಳ ಲೆಕ್ಕ ಹೊಂದಾಣಿಕೆಯಾಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಮೇಲೆ ಅದರ ಪ್ರಮಾಣ ಶೇ.19ರಷ್ಟಾಗಿದೆ ಎಂದರು.
ಖರ್ಚು ಮಾಡಿದ ವೆಚ್ಚಗಳ ಬಗ್ಗೆ ಅಧಿಕಾರಿಗಳು ಆಯಾ ಹಣಕಾಸಿನ ವರ್ಷದಲ್ಲೇ ವರದಿ ಸಲ್ಲಿಸದೇ ಇರುವುದರಿಂದ ಈ ರೀತಿಯ ವ್ಯತ್ಯಾಸಗಳಾಗುತ್ತವೆ. ಅದು ಯಾವುದೇ ಹಗರಣ, ಭ್ರಷ್ಟಾಚಾರವೂ ಅಲ್ಲ, ಆರೋಪ ಮಾಡಿರುವ ಬಿಜೆಪಿ ಶಾಸಕರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ, ಬಾಲಿಶ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಅಶೋಕ್‌ಗೆ ಅವಮಾನ
ಸರಕಾರದಲ್ಲಿ ಯಾವುದೇ ಹಣ ದುರುಪಯೋಗವಾದರೂ ಅದರ ಅಧ್ಯಯನಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಿದೆ. ಬಿಜೆಪಿಯ ಆರ್.ಅಶೋಕ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಬದಲಾಗಿ ಆ ಸಮಿತಿ ಇದ್ದರೂ ಮತ್ತೊಂದು ಸದನ ಸಮಿತಿಗೆ ಬಿಜೆಪಿ ನಾಯಕರು ಆಗ್ರಹ ಮಾಡುವ ಮೂಲಕ, ಅವರ ಪಕ್ಷದ ನಾಯಕರಾದ ಅಶೋಕ್ ಅವರ ಸಾಮರ್ಥ್ಯವನ್ನು ಅವರೇ ಅವಮಾನಿಸುತ್ತಿದ್ದಾರೆ.
-ವಿ.ಆರ್.ಸುದರ್ಶನ್, ಕಾಂಗ್ರೆಸ್ ಉಪಾಧ್ಯಕ್ಷ