ವಿಜಯಾ ದಬ್ಬೆ ಸ್ತ್ರೀವಾದಿ ಚಳವಳಿಗೆ ವೇದಿಕೆ ಕಲ್ಪಿಸಿದ ಪ್ರಥಮ ಮಹಿಳೆ: ಪತ್ರಕರ್ತೆ ಭಾರತಿ ಹೆಗಡೆ
ಬೆಂಗಳೂರು, ಡಿ.8: ಲೇಖಕಿ ವಿಜಯಾ ದಬ್ಬೆ ಅವರು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಹಿಳಾ ಚಿಂತನೆ, ಸ್ತ್ರೀವಾದಿ ಚಳವಳಿಗೆ ವೇದಿಕೆ ಕಲ್ಪಿಸಿದವರಾಗಿದ್ದಾರೆ ಎಂದು ಪತ್ರಕರ್ತೆ ಭಾರತಿ ಹೆಗಡೆ ಹೇಳಿದರು.
ಶನಿವಾರ ನಗರದ ಕೆಪಿಟಿಸಿಎಲ್‌ನ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಆಯೋಜಿಸಿದ್ದ ವಿಜಯಾ ದಬ್ಬೆ ಬದುಕು ಮತ್ತು ಬರಹ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 70-80 ರ ದಶಕದಲ್ಲಿ ಕರ್ನಾಟಕದಲ್ಲಿ ದಲಿತ, ರೈತರ ಚಳವಳಿ ತೀವ್ರಗತಿಯನ್ನು ಪಡೆದುಕೊಂಡಿತ್ತು. ಆ ಸಂದರ್ಭದಲ್ಲಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದಂತಹ ದಿಟ್ಟ ಮಹಿಳೆ ವಿಜಯಾ ದಬ್ಬೆಯಾಗಿದ್ದಾರೆ ಎಂದರು.
ವಿಜಯಾ ದಬ್ಬೆ ಅಂದಿನ ಕಾಲದಲ್ಲಿನ ಮಹಿಳೆಯರ ಮೇಲಿನ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ ಎಲ್ಲವನ್ನೂ ಎದುರಿಸಿದ್ದರು. ಆದುದರಿಂದಲೇ ಮಹಿಳೆಯರ ನಡುವೆ ಜಾಗೃತಿ ಮೂಡಿಸುವ ಉದ್ದೇಶದಿಂದ 1971 ರಲ್ಲಿ ಸಮತಾ ಮಹಿಳಾ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿದ್ದರು. ಅನಂತರದ ದಿನಗಳಲ್ಲಿ ಸಂತ್ರಸ್ಥರಿಗೆ ಬೆಂಬಲ ನೀಡಲು, ಸಾಂತ್ವನ ಹೇಳುವ ಉದ್ದೇಶದಿಂದ ಸಮತಾ ವೇದಿಕೆಯನ್ನು ಸ್ಥಾಪಿಸಿದರು. ಇದರ ಮೂಲಕ ಮಹಿಳೆಯರ ಪರವಾಗಿ ಹೋರಾಟವನ್ನು ಮುನ್ನಡೆಸಿದರು ಎಂದು ಅವರು ಹೇಳಿದರು.
ಮಹಿಳೆಯರು ಅಡುಗೆ ಮನೆಗೆ ಸೀಮಿತವಾದವರು ಎಂಬ ಮನಸ್ಥಿತಿಯಿದ್ದ ಕಾಲದಲ್ಲಿಯೂ ಎಲ್ಲವನ್ನೂ ಎದುರಿಸಿ ಉನ್ನತ ಶಿಕ್ಷಣ ಪಡೆದರು. ಅಲ್ಲದೆ, ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿದರು. ಅದರ ಜತೆಗೆ ಹಲವು ಪುಸ್ತಕಗಳನ್ನು, ಕವಿತೆಗಳನ್ನೂ ರಚಿಸಿದ್ದಾರೆ. ನಿರ್ಲಕ್ಷಕ್ಕೆ ಒಳಗಾಗಿದ್ದ ಲೇಖಕಿಯರನ್ನು ದಾಖಲಿಸುವ, ಸಮಾಜಕ್ಕೆ ಪರಿಚಯಿಸುವ ಕೆಲಸ ಮಾಡಿದ್ದಾರೆ. ಆದರೆ, ವಿಜಯಾ ದಬ್ಬೆ ಅವರನ್ನು ಯಾರೂ ಗುರುತಿಸದಿರುವುದು ನೋವಿನ ಸಂಗತಿ ಎಂದು ನುಡಿದರು.
ಸ್ತ್ರೀವಾದ ಎಂಬುದು ಪಾಶ್ಚಿಮಾತ್ಯರಿಂದ ಪಡೆದಿರುವುದು ಅಲ್ಲ. ಹಾಗೆಯೇ ಅದು ಪುರುಷ ವಿರೋಧಿಯೂ ಅಲ್ಲ. ತಲೆ ತಲಾಂತರಗಳಿಂದ ಭಾರತದಲ್ಲಿಯೇ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಅನೇಕ ಮಹಿಳೆಯರು ಧ್ವನಿ ಎತ್ತಿದ್ದಾರೆ. ಆದರೆ, ದೇಶದೊಳಗಿನ ಮಹಿಳೆಯರ ಬಂಡಾಯವನ್ನು ಯಾರೂ ದಾಖಲಿಸಿಲ್ಲ. ಅದರಿಂದಾಗಿ ಸ್ತ್ರೀವಾದ ಎಂಬುದು ವಿದೇಶಗಳ ಚಿಂತನೆ ಎಂಬಂತೆ ಬಿಂಬಿತವಾಗುತ್ತಿದೆ ಎಂದು ಹೇಳಿದರು.
ಭಾರತೀಯ ಮಹಿಳೆಯರಲ್ಲಿ ಅಪಾರವಾದ ಜ್ಞಾನದ ಸಂಪತ್ತು ಇತ್ತು. ಅದನ್ನು ದಾಖಲಿಸಿದ್ದರೆ ಇಂದು ರೈತರ ಆತ್ಮಹತ್ಯೆಗಳು ಆಗುತ್ತಿರಲಿಲ್ಲ ಹಾಗೂ ಕೃಷಿ ಪದ್ಧತಿ ನಾಶವಾಗುತ್ತಿರಲಿಲ್ಲ. ಹಿಂದಿನ ದಿನಗಳಲ್ಲಿ ರೈತ ಮಹಿಳೆಯರು ಬೀಜಗಳ ಸಂರಕ್ಷಣೆ, ಸಂಸ್ಕರಣೆ ಹಾಗೂ ವಿನಿಮಯ ಮಾಡಿಕೊಳ್ಳುವ ಪದ್ಧತಿ ರೂಢಿಸಿಕೊಂಡಿದ್ದರು. ಇದೀಗ ಎಲ್ಲವೂ ಕಣ್ಮರೆಯಾಗಿದೆ. ಆದರೆ, ವಿದೇಶಿಯರು ಎಲ್ಲವನ್ನೂ ದಾಖಲಿಸಿರುವುದರಿಂದ ಅವರಿಂದ ನಾವು ಎರವಲು ಪಡೆಯುತ್ತಿದ್ದೇವೆ ಎಂದು ತಿಳಿಸಿದರು.
ದೇಶದಲ್ಲಿ 70-80 ರ ದಶಕದಲ್ಲಿ ಮಹಿಳೆಯರಿಗೆ ಸಮಾನತೆ ನೀಡಬೇಕು ಎಂದು ಎಲ್ಲ ಕಡೆಯೂ ಚರ್ಚೆಗಳು, ಚಳವಳಿಗಳು ನಡೆಯುತ್ತಿದ್ದವು. ಅಲ್ಲದೆ, ಮಹಿಳೆಯು ಎಲ್ಲಿ ಬೇಕಾದರೂ ಸ್ವತಂತ್ರವಾಗಿ, ನಿರ್ಭಯವಾಗಿ ಸಂಚರಿಸಬಹುದಿತ್ತು. ಆದರೆ, ಇಂದು ಮಹಿಳೆಯರಿಗೆ ಸಮಾನತೆ ಎಂಬುದು ಮರೀಚಿಕೆಯಾಗಿದೆ. ಜತೆಗೆ, ಇಂದು ಎಲ್ಲಿ ನೋಡಿದರೂ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಇದನ್ನು ನೋಡಿದರೆ ಭಯವಾಗುತ್ತದೆ ಎಂದ ಅವರು, ಈ ದೇಶದಲ್ಲಿ ಮಹಿಳಾ ಪರವಾದ ಕಾನೂನು ರೂಪಗೊಂಡಿದ್ದರೆ, ಅದು ಮಹಿಳಾ ಚಳವಳಿಯಿಂದ ಅಷ್ಟೇ ಸಾಧ್ಯ ಎಂದು ಹೇಳಿದರು.