​ಅಡಿಲೇಡ್ ಟೆಸ್ಟ್: ರಹಾನೆ ಅರ್ಧಶತಕ, ಭಾರತ ಸುಭದ್ರ

Update: 2018-12-09 03:47 GMT

ಅಡಿಲೇಡ್, ಡಿ. 9: ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಅವರ ತಾಳ್ಮೆಯ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಭಾರತ ಸುಭದ್ರ ಸ್ಥಿತಿಗೆ ತಲುಪಿದೆ.

ಇತ್ತೀಚಿನ ವರದಿಗಳು ಬಂದಾಗ ಭಾರತ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿದ್ದು, ಒಟ್ಟಾರೆ 297 ರನ್‌ಗಳ ಮುನ್ನಡೆಯಲ್ಲಿದೆ. 61 ರನ್ ಗಳಿಸಿ ಕ್ರೀಸ್‌ನಲ್ಲಿರುವ ರಹಾನೆಗೆ ರಿಷಬ್ ಪಂತ್ ಸಾಥ್ ನೀಡಿದ್ದಾರೆ. ಪಂಥ್ ಕೇವಲ 15 ಎಸೆತಗಳಲ್ಲಿ 28 ರನ್ ಗಳಿಸಿ ಆಡುತ್ತಿದ್ದಾರೆ. ಭಾರತದ ಮೂರು ವಿಕೆಟ್ ಕಬಳಿಸಿದ ನ್ಯಾಥನ್ ಲಿಯಾನ್ ಅವರ ಒಂದೇ ಓವರ್‌ನಲ್ಲಿ 18 ರನ್ ಕೊಳ್ಳೆಹೊಡೆದ ಪಂತ್, ಟೆಸ್ಟ್ ಪಂದ್ಯಕ್ಕೆ ಟಿ-20ಯ ಲಯ ಒದಗಿಸಿದರು.

ಇದಕ್ಕೂ ಮುನ್ನ ಭಾರತ 71 ರನ್ ಗಳಿಸಿದ ಚೇತೇಶ್ವರ ಪೂಜಾರ ಅವರ ವಿಕೆಟ್ ಕಳೆದುಕೊಂಡಿತು. ಆರನೆಯವರಾಗಿ ಕ್ರೀಸ್‌ಗೆ ಬಂದ ರೋಹಿತ್ ಶರ್ಮಾ (1) ನಿರಾಸೆ ಮಾಡಿದರು.

ಇದಕ್ಕೂ ಮುನ್ನ ಸೊಗಸಾದ ಬ್ಯಾಟಿಂಗ್ ಪ್ರದರ್ಶಿಸಿದ ರಹಾನೆ ವಿದೇಶಿ ಪಿಚ್‌ನಲ್ಲಿ 12ನೇ ಅರ್ಧಶತಕ ಬಾರಿಸಿದರು. ರಹಾನೆಗೆ ಇದು ಒಟ್ಟಾರೆ 16ನೇ ಅರ್ಧಶತಕ. ಪೂಜಾರ ಹಾಗೂ ರಹಾನೆ 87 ರನ್‌ಗಳ ಜತೆಯಾಟದೊಂದಿಗೆ ಭಾರತದ ಮೊತ್ತವನ್ನು 200ರ ಗಡಿ ದಾಟಿಸಿದರು.

ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ನಾಲ್ಕನೇ ಇನಿಂಗ್ಸ್‌ನಲ್ಲಿ 200ಕ್ಕಿಂತ ಹೆಚ್ಚು ರನ್ ಬೆನ್ನಟ್ಟಿ ಜಯ ಸಾಧಿಸಿರುವ ಕೊನೆಯ ನಿದರ್ಶನ ಇರುವುದು 1902ರಲ್ಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News