ಹಣಕಾಸಿಗೆ ಸಂಬಂಧಿಸಿದಂತೆ ಈ 5 ಕೆಲಸಗಳನ್ನು ಡಿಸೆಂಬರ್‌ನೊಳಗೆ ಮುಗಿಸಿಕೊಳ್ಳಿ

Update: 2018-12-09 11:23 GMT

ಹೊಸ ವರ್ಷವು ನಿಮ್ಮ ಪಾಲಿಗೆ ಸುಗಮವಾಗಿ ಆರಂಭಗೊಳ್ಳುವಂತಾಗಲು ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಕಾರ್ಯಗಳನ್ನು ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಮಾಡಬೇಕಿದೆ. ಇಲ್ಲಿವೆ ಈ ಐದು ಕೆಲಸಗಳು......

ವಿಳಂಬಿತ ಆದಾಯ ತೆರಿಗೆ ರಿಟರ್ನ್‌ಗಳು

ಸಕಾಲದಲ್ಲಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ವಿಫಲಗೊಂಡವರಲ್ಲಿ ನೀವೂ ಒಬ್ಬರಾಗಿದ್ದರೆ 2018,ಡಿ.31 ಅಥವಾ ಅದರ ಮೊದಲು ಅವುಗಳನ್ನು ಸಲ್ಲಿಸಿ ಕೈತೊಳೆದುಕೊಳ್ಳಿ. ಏಕೆಂದರೆ ನೂತನ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್‌ರಡಿ ನಿಗದಿತ ಗಡುವಿನ ನಂತರ ತಮ್ಮ ಆದಾಯ ರಿಟರ್ನ್‌ಗಳನ್ನು ಸಲ್ಲಿಸುವವರು ವಿಳಂಬ ದಂಡವನ್ನು ಪಾವತಿಸಬೇಕಾಗುತ್ತದೆ.

ಹಾಲಿ ಕಾನೂನಿನಂತೆ ನಿಗದಿಯಾಗಿದ್ದ ಗಡುವಿನ ನಂತರ,ಆದರೆ 2018,ಡಿ.31ಕ್ಕೆ ಅಥವಾ ಅದಕ್ಕೂ ಮುನ್ನ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು 5,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಈ ಆದಾಯ ತೆರಿಗೆ ರಿಟರ್ನ್‌ಗಳನ್ನು 2019,ಜ.1 ಮತ್ತು 2019,ಮಾ.31ರ ನಡುವೆ ಪಾವತಿಸಿದರೆ 10,000 ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಹೀಗಾಗಿ ಹೆಚ್ಚಿನ ದಂಡವನ್ನು ತಪ್ಪಿಸಿಕೊಳ್ಳಲು ವಿಳಂಬವಾಗಿರುವ ನಿಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಡಿ.31ರೊಳಗೆ ಸಲ್ಲಿಸಿ. ನೆನಪಿಡಿ,ವಾರ್ಷಿಕ ಆದಾಯ ಐದು ಲ.ರೂ.ಗೂ ಕಡಿಮೆಯಿರುವರಿಗೆ ಗರಿಷ್ಠ 1,000 ರೂ.ದಂಡವನ್ನು ವಿಧಿಸಲಾಗುತ್ತದೆ.

ಇಎಂವಿ ಚಿಪ್ ಇರುವ ಡೆಬಿಟ್/ಕ್ರೆಡಿಟ್ ಕಾರ್ಡ್

2015,ಆ.27ರ ಆರ್‌ಬಿಐ ಸುತ್ತೋಲೆಯಂತೆ ಬ್ಯಾಂಕುಗಳು ತಮ್ಮ ಗ್ರಾಹಕರ ಬಳಿಯಿರುವ ಮ್ಯಾಗ್ನೆಟಿಕ್ ಸ್ಟ್ರಿಪ್ ಹೊಂದಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಬದಲಾಗಿ ಇಎಂವಿ(ಯುರೋಪೇ,ಮಾಸ್ಟರ್ ಕಾರ್ಡ್ ಮತ್ತು ವೀಸಾ) ಚಿಪ್ ಆಧರಿತ ಕಾರ್ಡ್‌ಗಳನ್ನು ನೀಡಬೇಕಾಗಿದೆ. ಈ ನಿರ್ದೇಶವನ್ನು ಪಾಲಿಸಲು 2018,ಡಿ.31 ಕೊನೆಯ ದಿನಾಂಕವಾಗಿದೆ. ಈ ಗಡುವಿನೊಳಗೆ ನೀವು ನಿಮ್ಮ ಮ್ಯಾಗ್ನೆಟಿಕ್ ಸ್ಟ್ರಿಪ್ ಕಾರ್ಡ್‌ಗಳನ್ನು ಬದಲಿಸಿಕೊಳ್ಳದಿದ್ದರೆ 2019,ಜ.1ರಿಂದ ಅವು ನಿಷ್ಕ್ರಿಯಗೊಳ್ಳುತ್ತವೆ. ನೂತನ ಇಎಂವಿ ಚಿಪ್ ಕಾರ್ಡ್‌ಗಳನ್ನು ಬ್ಯಾಂಕುಗಳು ಉಚಿತವಾಗಿ ನೀಡುತ್ತವೆ ಎನ್ನುವುದು ನಿಮಗೆ ಗೊತ್ತಿರಲಿ. ನಿಮ್ಮ ಬಳಿಯಿರುವ ಕಾರ್ಡ್‌ನ ಮೇಲ್ಮೈನ ಎಡಭಾಗದಲ್ಲಿ ಚಿಪ್ ಇದ್ದರೆ ಅದು ಇಎಂವಿ ಕಾರ್ಡ್ ಆಗಿರುತ್ತದೆ ಮತ್ತು ನೀವು ಆತಂಕ ಪಟ್ಟುಕೊಳ್ಳಬೇಕಿಲ್ಲ.

ಸಿಟಿಎಸ್ ರಹಿತ ಚೆಕ್‌ಗಳು

ಆರ್‌ಬಿಐ ಮಾರ್ಗಸೂಚಿಗಳಂತೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸಿಟಿಎಸ್-2010ಕ್ಕೆ ಅನುಗುಣವಾದ ಚೆಕ್ ಪುಸ್ತಕಗಳನ್ನು ನೀಡಬೇಕಾಗಿದೆ. ಸಿಟಿಎಸ್ ರಹಿತ ಚೆಕ್‌ಗಳನ್ನು ನಗದೀಕರಣಕ್ಕಾಗಿ ಬ್ಯಾಂಕುಗಳಿಗೆ ಸಲ್ಲಿಸಿದರೆ ಕ್ಲಿಯರಿಂಗ್ ವಿಳಂಬಗೊಳ್ಳುತ್ತದೆ. 2018,ಸೆ.1ರಿಂದ ಜಾರಿಗೊಂಡಿರುವ ಆರ್‌ಬಿಐ ನಿರ್ದೇಶದಂತೆ ಸಿಟಿಎಸ್ ರಹಿತ ಚೆಕ್‌ಗಳ ಕ್ಲಿಯರಿಂಗ್‌ನ್ನು ತಿಂಗಳಿಗೆ ಒಂದು ಬಾರಿ, ಅಂದರೆ ಪ್ರತಿ ತಿಂಗಳಿನ ಎರಡನೇ ಬುಧವಾರ ಮಾತ್ರ ಮಾಡಲಾಗುತ್ತಿದೆ. ಆದರೆ,2018,ಡಿ.31ರ ಬಳಿಕ ಸಿಎಸ್‌ಟಿ ರಹಿತ ಚೆಕ್‌ಗಳನ್ನು ಕ್ಲಿಯರಿಂಗ್‌ಗೆ ಸ್ವೀಕರಿಸಲಾಗುವುದಿಲ್ಲ.

ಆದ್ದರಿಂದ ಈ ಗಡುವಿನ ಬಳಿಕ ನೀವು ಯಾರಿಗೂ ಸಿಎಸ್‌ಟಿ ರಹಿತ ಚೆಕ್‌ಗಳನ್ನು ವಿತರಿಸದಂತೆ ನೋಡಿಕೊಳ್ಳಿ. ನಿಮ್ಮ ಬಳಿ ಸಿಎಸ್‌ಟಿ ರಹಿತ ಚೆಕ್‌ ಪುಸ್ತಕವಿದ್ದರೆ ತಕ್ಷಣ ನಿಮ್ಮ ಬ್ಯಾಂಕ್ ಶಾಖೆಗೆ ತೆರಳಿ ಸಿಎಸ್‌ಟಿ-2010ಕ್ಕೆ ಅನುಗಣವಾಗಿರುವ ಹೊಸ ಚೆಕ್‌ಪುಸ್ತಕವನ್ನು ಪಡೆದುಕೊಳ್ಳಿ. ಹೊಸ ಚೆಕ್‌ಗಳಲ್ಲಿ ಹಾಳೆಯ ಎಡಭಾಗದಲ್ಲಿ ಸಿಟಿಎಸ್-2010 ಎಂದು ಮುದ್ರಿತವಾಗಿರುತ್ತದೆ. ನಿಮ್ಮ ಬಳಿಯಿರುವ ಚೆಕ್‌ಗಳಲ್ಲಿ ಹೀಗಿದೆಯೇ ಎನ್ನುವುದನ್ನು ಪರಿಶೀಲಿಸಿ.

ಎಸ್‌ಬಿಐ ನೆಟ್ ಬ್ಯಾಂಕಿಂಗ್

ನೀವು ಎಸ್‌ಬಿಐ ಗ್ರಾಹಕರಾಗಿದ್ದರೆ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಯನ್ನು ಪಡೆದುಕೊಂಡಿದ್ದರೆ ಅದು ಈಗಲೂ ಕ್ರಿಯಾಶೀಲವಾಗಿದೆಯೇ ಎನ್ನುವುದನ್ನು ಪರಿಶೀಲಿಸಿಕೊಳ್ಳಿ. ತಮ್ಮ ಮೊಬೈಲ್ ನಂಬರ್‌ಗಳನ್ನು ಬ್ಯಾಂಕ್‌ನಲ್ಲಿ ನೋಂದಣಿ ಮಾಡಿಸಿರದ ಗ್ರಾಹಕರ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಯನ್ನು 2018,ಡಿ.1ರಿಂದ ಎಸ್‌ಬಿಐ ಸ್ಥಗಿತಗೊಳಿಸಿದೆ. ತಮ್ಮ ನೆಟ್ ಬ್ಯಾಂಕಿಂಗ್ ಸೇವೆ ವ್ಯತ್ಯಯಗೊಳ್ಳದಿರಲು ಬ್ಯಾಂಕ್ ಶಾಖೆಯಲ್ಲಿ ತಮ್ಮ ಮೊಬೈಲ್ ನಂಬರ್‌ಗಳನ್ನು ನೋಂದಣಿ ಮಾಡಿಸಿಕೊಳ್ಳುವಂತೆ ಬ್ಯಾಂಕು ತನ್ನ ‘ಆನ್‌ ಲೈನ್ ಎಸ್‌ ಬಿಐ‘ ವೆಬ್‌ಸೈಟ್‌ನಲ್ಲಿ ಗ್ರಾಹಕರಿಗೆ ಸೂಚಿಸಿತ್ತು. ನಿಮಗೆ ನೆಟ್ ಬ್ಯಾಂಕಿಂಗ್ ನಡೆಸಲು ಸಾಧ್ಯವಾಗುತ್ತಿಲ್ಲವಾದರೆ ನಿಮ್ಮ ಶಾಖೆಯನ್ನು ಅಥವಾ ನಿಮಗೆ ಸಮೀಪದ ಯಾವುದೇ ಎಸ್‌ಬಿಐ ಖಾತೆಗೆ ಭೇಟಿ ನೀಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಜೋಡಣೆಗೊಳಿಸಿಕೊಳ್ಳಿ.

ಎಸ್‌ಬಿಐ ಬಡಿ ಆ್ಯಪ್

ಎಸ್‌ಬಿಐ ತನ್ನ ಮೊಬೈಲ್ ವ್ಯಾಲೆಟ್ ಆ್ಯಪ್‌ನ್ನು 2018,ನ.30ರಿಂದ ಸ್ಥಗಿತಗೊಳಿಸಿದೆ. ಈ ಮೊಬೈಲ್ ವ್ಯಾಲೆಟ್ ಆ್ಯಪ್ ಬಿಲ್ ಪಾವತಿಗಳು, ರೀಚಾರ್ಜ್‌ಗಳು ಮತ್ತು ಹಣ ವರ್ಗಾವಣೆಯಂತಹ ಸೇವೆಗಳನ್ನು ಒದಗಿಸುತ್ತಿತ್ತು. ನೀವು ಈ ಆ್ಯಪ್‌ನ ಬಳಕೆದಾರರಾಗಿದ್ದರೆ ಮತ್ತು ನಿಮ್ಮ ಹಣವು ಈಗಲೂ ವ್ಯಾಲೆಟ್‌ನಲ್ಲಿ ಉಳಿದುಕೊಂಡಿದ್ದರೆ ನೀವು ನಿಮ್ಮ ಸಮೀಪದ ಎಸ್‌ಬಿಐ ಶಾಖೆಯನ್ನು ಸಂಪರ್ಕಿಸಿ ನಿಮ್ಮ ಹಣದ ಮರುಪಾವತಿಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News