ಡಿ.18ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

Update: 2018-12-09 12:33 GMT

ಬೆಂಗಳೂರು, ಡಿ. 9: ಕಾಂಗ್ರೆಸ್ ಶಾಸಕರ ಅಸಮಾಧಾನ ಶಮನಗೊಳಿಸಲು ಈ ಹಿಂದೆ ನಿಗದಿಯಾಗಿದ್ದ ಶಾಸಕಾಂಗ ಸಭೆ ಡಿ.18ಕ್ಕೆ ಬೆಳಗಾವಿ ಸುವರ್ಣ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ.

ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಕಾಂಗ್ರೆಸ್ ಶಾಸಕರು ಭಾಗವಹಿಸಲಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಲ್ಕು ದಿನಗಳ ಕಾಲ ವಿದೇಶ ಪ್ರವಾಸಕ್ಕೆ ತೆರಳಲಿದ್ದು, ಡಿ.17ಕ್ಕೆ ಸ್ವದೇಶಕ್ಕೆ ಹಿಂದಿರುಗಲಿದ್ದಾರೆ. ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ ಶಾಸಕರ ವಿಷಯದಲ್ಲಿ ತಾರತಮ್ಯವಾಗುತ್ತಿದೆ. ಸಿಎಂ ಸೇರಿದಂತೆ ಸಚಿವರು ಕೈಗೆ ಸಿಗುತ್ತಿಲ್ಲ. ಶಾಸಕರಿಗೆ ಅನಾಥ ಪ್ರಜ್ಞೆ ಕಾಡುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಡಿ.18ಕ್ಕೆ ಶಾಸಕಾಂಗ ಸಭೆ ನಡೆಯಲಿದೆ.

ಮಂತ್ರಿ ಮಂಡಲ ವಿಸ್ತರಣೆ, ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಸೇರಿದಂತೆ ಸರಕಾರ ವಿಚಾರದಲ್ಲಿ ಶಾಸಕರಲ್ಲಿನ ಅಸಮಾಧಾನ ನಿವಾರಣೆಗೆ ಕಾಂಗ್ರೆಸ್ ಮುಖಂಡರು ಸಿಎಂ ಕುಮಾರಸ್ವಾಮಿ ಅವರನ್ನು ಕರೆಸಿ ಚರ್ಚಿಸಲಾಗುತ್ತಿದೆ. ನಿಮ್ಮ ಸಮಸ್ಯೆಗಳನ್ನು ಅಲ್ಲಿ ಹೇಳಿಕೊಳ್ಳಿ ಎಂದು ಸೂಚಿಸಲಾಗಿದೆ.

ಶಾಸಕಾಂಗ ಸಭೆ ಎಂದರೆ ಆಯಾ ಪಕ್ಷಗಳ ಪ್ರಮುಖರು, ಶಾಸಕರು, ಸಂಸದರು, ಸಚಿವರು ಪಾಲ್ಗೊಳ್ಳುವುದು ಸಾಮಾನ್ಯ. ಆದರೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಎಚ್‌ಡಿಕೆ ಹಾಜರಾಗುತ್ತಿದ್ದಾರೆ. ಮೈತ್ರಿ ಸರಕಾರದ ಸಿಎಂ ಜತೆ ‘ಕೈ’ ಶಾಸಕರು ಚರ್ಚಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕುಂಡುಕೊಳ್ಳಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News