×
Ad

ರಾಜಧಾನಿಯಲ್ಲಿ ಕೇವಲ ಎರಡು ಮಹಿಳಾ ಪೊಲೀಸ್ ಠಾಣೆ: ನಾಗಲಕ್ಷ್ಮಿಬಾಯಿ

Update: 2018-12-09 22:41 IST

ಬೆಂಗಳೂರು, ಡಿ. 9: ರಾಜ್ಯ ರಾಜಧಾನಿಯಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದು, ಅರ್ಧದಷ್ಟು ಮಹಿಳೆಯರಿದ್ದಾರೆ. ಆದರೂ ಕೇವಲ ಎರಡು ಮಹಿಳಾ ಪೊಲೀಸ್ ಠಾಣೆಗಳಿರುವುದು ಶೋಚನೀಯವಾದದ್ದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಬೇಸರಪಟ್ಟಿದ್ದಾರೆ.

ರವಿವಾರ ವಿಧಾನಸೌಧದ ಮುಂಭಾಗ ನಡೆದ ರಾಜ್ಯ ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸೈಕಲ್ ಜಾಥಾದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಗರದಲ್ಲಿ ಜನಸಂಖ್ಯೆಕ್ಕೆ ಅನುಗುಣವಾಗಿ ಮಹಿಳಾ ಪೊಲೀಸ್ ಠಾಣೆಗಳಿಲ್ಲ. ಕನಿಷ್ಠ 10 ಮಹಿಳಾ ಪೊಲೀಸ್ ಠಾಣೆಗಳನ್ನಾದರೂ ತೆರೆಯಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಮಹಿಳಾ ಪೊಲೀಸ್ ಠಾಣೆಗಳ ಪ್ರಮಾಣವನ್ನು ಕನಿಷ್ಠ ಹತ್ತಕ್ಕಾದರೂ ಹೆಚ್ಚಳ ಮಾಡಬೇಕು ಹಾಗೂ ಠಾಣೆಗಳಲ್ಲಿ ಎಲ್ಲ ರೀತಿಯ ಮೂಲ ಸೌಲಭ್ಯ ಒದಗಿಸಬೇಕು. ಅಲ್ಲದೆ, ಮಹಿಳಾ ಪೊಲೀಸರು ಸೇರಿದಂತೆ ಮಹಿಳೆಯರು ತಮ್ಮ ಸಮಸ್ಯೆಗಳ ಬಗ್ಗೆ ಆಯೋಗಕ್ಕೆ ದೂರು ನೀಡಿದರೆ ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ತಿಳಿಸಿದರು.

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಮಾತನಾಡಿ, ಮಹಿಳೆಯರು ಅಬಲೆಯರಲ್ಲ, ಸಬಲೆಯರು ಎಂದು ನಿರೂಪಿಸುವ ಕಾಲ ಬಂದಿದೆ. ಇದನ್ನು ಕೇವಲ ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು, ಕೃತಿ ರೂಪದಲ್ಲಿ ಬರುವಂತಾಗಬೇಕು. ಗ್ರಾಮೀಣ ಭಾಗದ ಮಹಿಳೆಯರನ್ನು ಜಾಗೃತಗೊಳಿಸಬೇಕಾಗಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಮಾತನಾಡಿ, ಒಲಂಪಿಕ್ ಸಂಸ್ಥೆಯಿಂದ 25 ಸೈಕಲ್‌ಗಳನ್ನು ನೀಡಲಾಗುವುದು. ಅಲ್ಲದೆ, 25 ಲಕ್ಷ ರೂ.ವರೆಗೂ ವಿಶೇಷ ಅನುದಾನ ಪಡೆಯುವ ಅವಕಾಶವಿದ್ದು ಸದ್ಧಳಕೆ ಮಾಡಿಕೊಳ್ಳಬೇಕು ಹಾಗೂ ಪೊಲೀಸ್ ಇಲಾಖೆ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.

ಬೆಳಗಾವಿಯಿಂದ ಆಗಮಿಸಿದ ಸೈಕಲ್ ಜಾಥಾವನ್ನು ಕೆಎಸ್‌ಆರ್ಪಿ ವಿಭಾಗದ ಎಡಿಜಿಪಿ ಭಾಸ್ಕರ್‌ರಾವ್, ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಸೇರಿದಂತೆ ಹಿರಿಯ ಆಧಿಕಾರಿಗಳು ಹಾಗೂ ಗಣ್ಯರು ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News