ಡಿ.12ಕ್ಕೆ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ

Update: 2018-12-09 17:41 GMT

► ಡಿ.10 ರಂದು ಜೆಡಿಎಸ್-ಕಾಂಗ್ರೆಸ್ ವರಿಷ್ಠರ ಸಭೆ

ಬೆಂಗಳೂರು, ಡಿ.9: ಇಂದಿನಿಂದ ಕುಂದಾನಗರಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್ತಿನ ಹಂಗಾಮಿ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಸವರಾಜಹೊರಟ್ಟಿ ಸ್ಥಾನಕ್ಕೆ ಡಿ.12 ರಂದು ಚುನಾವಣೆ ನಡೆಯಲಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರದಲ್ಲಿ ಮೇಲ್ಮನೆಯ ಹಂಗಾಮಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಜೆಡಿಎಸ್‌ನ ಬಸವರಾಜ ಹೊರಟ್ಟಿಯು ಈ ಅಧಿವೇಶನದಿಂದಲೇ ಪೂರ್ಣ ಪ್ರಮಾಣದ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಾರೆಯೇ ಎಂಬುದು ಕುತೂಹಲ ಕೆರಳಿಸಿದೆ.

ಮೈತ್ರಿ ಸರಕಾರದಲ್ಲಿ ಒಪ್ಪಂದದ ಪ್ರಕಾರ ವಿಧಾನಸಭಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಹೀಗಾಗಿ, ವಿಧಾನಪರಿಷತ್ ಸ್ಥಾನವನ್ನು ಜೆಡಿಎಸ್‌ಗೆ ನೀಡಬೇಕು. ಆದರೆ, ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಪರಿಷತ್ ಸ್ಥಾನವೂ ನಮಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಸಭಾಪತಿ ಸ್ಥಾನದ ಕುರಿತು ತೀವ್ರ ಕುತೂಹಲ ಮೂಡಿಸಿದ್ದು, ಸೋಮವಾರ ಸಂಜೆ ಬೆಳಗಾವಿಯಲ್ಲಿ ನಡೆಯಲಿರುವ ಎರಡೂ ಪಕ್ಷಗಳ ವರಿಷ್ಠರ ಸಭೆಯಲ್ಲಿ ವಿಧಾನಪರಿಷತ್ ಸಭಾಪತಿ ಸ್ಥಾನ ಆಯ್ಕೆ ಸಂಬಂಧ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದು, ಸಭಾಪತಿ ಸ್ಥಾನವನ್ನು ನಮಗೆ ನೀಡಬೇಕು ಎಂದು ಜೆಡಿಎಸ್ ಮುಖಂಡರು ಕಾಂಗ್ರೆಸ್‌ಗೆ ಮನವಿ ಮಾಡುವ ಸಾಧ್ಯತೆ ಇದೆ. ಅಲ್ಲದೆ, ಸಭೆಯಲ್ಲಿ ಕಾಂಗ್ರೆಸ್ ಒಪ್ಪಂದಕ್ಕೆ ವಿರುದ್ಧವಾಗಿ ನಡೆದುಕೊಂಡಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಹೈ ಕಮಾಂಡ್ ಮೊರೆ ಹೋಗಲಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ಹಂಗಾಮಿ ಸಭಾಪತಿಯಾಗಿ ಬಸವರಾಜಹೊರಟ್ಟಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಆದುದರಿಂದಾಗಿ ಅವರೇ ಪೂರ್ಣ ಪ್ರಮಾಣದ ಸಭಾಪತಿಯಾಗಿರಲಿ ಎಂದು ಅನೇಕ ಪರಿಷತ್ತು ಸದಸ್ಯರು ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ಬೆಳಗಾವಿ ಅಧಿವೇಶನದಲ್ಲಿಯೂ ಅವರೇ ಮುಂದುವರಿಯಲಿದ್ದಾರೆ. ಡಿ.12ರಂದು ಚುನಾವಣೆ ನಡೆಯಲಿದ್ದು, ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆಗೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಆದರೆ, ಜೆಡಿಎಸ್ ವರಿಷ್ಠರಿಂದ ಯಾವುದೇ ಸೂಚನೆ ಬಾರದ ಹಿನ್ನೆಲೆಯಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಹೊರಟ್ಟಿ ರಾಜೀನಾಮೆ ಸಲ್ಲಿಸಿದರೆ ಮೇಲ್ಮನೆಯ ಸಭಾಪತಿ ಸ್ಥಾನ ಖಾಲಿಯಾಗಿಯೇ ಉಳಿಯಲಿದ್ದು, ಸಾಂವಿಧಾನಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News