ಮೆಟ್ರೋ ಪರಿಶೀಲನೆಯ ಅಧಿಕಾರಿಗಳ ಕಾರು ಬಾಡಿಗೆ 50 ಲಕ್ಷ ರೂ.

Update: 2018-12-09 18:15 GMT

ಬೆಂಗಳೂರು, ಡಿ.9: ನಗರದಲ್ಲಿ ಎರಡನೇ ಹಂತದ ಮೆಟ್ರೋ ಕಾಮಗಾರಿ ಭರದಿಂದ ಸಾಗುತ್ತಿದೆ. ಆದರೆ, ಕಾಮಗಾರಿ ಪರಿಶೀಲನೆಗಾಗಿ ತೆರಳುವ ಅಧಿಕಾರಿಗಳು ಬಳಕೆ ಮಾಡಿರುವ ಕಾರುಗಳಿಗೆ 50 ಲಕ್ಷ ರೂ.ಗಳಷ್ಟು ಬಾಡಿಗೆ ನಿಡಬೇಕಾಗಿ ಬಂದಿದೆ.

ರಾಜಧಾನಿಯ ಸಂಚಾರ ದಟ್ಟಣೆಯ ನಡುವೆ ಮೆಟ್ರೋ ಸೇವೆಯು ಅತ್ಯಂತ ಪ್ರಯೋಜನಕಾರಿಯಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಜನರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ ಎರಡನೆ ಹಂತದ ಯೋಜನೆ ಕೈಗೆತ್ತಿಕೊಂಡಿದೆ. ಈ ಕಾಮಗಾರಿಗಳನ್ನು ಪರಿಶೀಲನೆ ಮಾಡಲು ನಗರದ ವಿವಿಧ ಭಾಗಗಳಿಗೆ ಅಧಿಕಾರಿಗಳು ತೆರಳಲು ಬಾಡಿಗೆ ಕಾರನ್ನು ಬಳಕೆ ಮಾಡಿದ್ದಾರೆ. ಇದೀಗ ಅದಕ್ಕೆ ತಿಂಗಳಿಗೆ ಬರೋಬ್ಬರಿ 50 ಲಕ್ಷ ರೂ.ಗಳು ಬಾಡಿಗೆ ಶುಲ್ಕ ಪಾವತಿ ಮಾಡಬೇಕಾಗಿ ಬಂದಿದೆ.

ಬೆಂಗಳೂರು ನಗರದಲ್ಲಿ ಎರಡನೇ ಹಂತದ ಕಾಮಗಾರಿ ನಾಲ್ಕು ದಿಕ್ಕುಗಳಲ್ಲಿಯೂ ನಡೆಯುತ್ತಿದ್ದು, ಕಾಮಗಾರಿ ವೀಕ್ಷಿಸಲು, ಪರಿಶೀಲನೆ ಮಾಡಲು ಹಾಗೂ ವರದಿ ಸಲ್ಲಿಸಲು ವಿವಿಧ ಹಂತದ ಅಧಿಕಾರಿಗಳು ಪ್ರತಿದಿನ ಸಂಚರಿಸುತ್ತಾರೆ. ಆದರೆ, ಬಿಎಂಆರ್‌ಸಿಎಲ್ ಬಳಿ ಸ್ವಂತ ವಾಹನಗಳಿಲ್ಲದ ಹಿನ್ನೆಲೆಯಲ್ಲಿ ಹತ್ತಾರು ಬಾಡಿಗೆ ಕಾರುಗಳನ್ನು ಬಳಸಿಕೊಂಡಿದ್ದಾರೆ. ಅದರ ಮಾಸಿಕ ಬಾಡಿಗೆ ಶುಲ್ಕ 50 ಲಕ್ಷಗಳಾಷ್ಟಾಗಿದೆ.

ಬಿಎಂಆರ್‌ಸಿಎಲ್‌ನ ಯೋಜನಾ ವಿಭಾಗದಲ್ಲಿ 608 ಅಧಿಕಾರಿಗಳು ಮತ್ತು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಕಾರ್ಯಾಚರಣೆ ನಿರ್ವಹಣೆ ವಿಭಾಗದಲ್ಲಿ 1486 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಬಹುತೇಕ ಅಧಿಕಾರಿಗಳು ಕೆಲಸದ ಸ್ಥಳಕ್ಕೆ ಕಡ್ಡಾಯವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕಿದೆ. ಇದರಿಂದಲೇ ಬಾಡಿಗೆ ಕಾರುಗಳನ್ನು ಬಳಸಿಕೊಳ್ಳಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News