ಬೀದರ್ ಜಿಲ್ಲೆಯ ರಸ್ತೆಗಳ ನಿರ್ಮಾಣ ವಿಚಾರ: ಮಾಹಿತಿ ಒದಗಿಸಲು ಸರಕಾರಕ್ಕೆ ಹೆಕೋರ್ಟ್ ಸೂಚನೆ

Update: 2018-12-09 18:16 GMT

ಬೆಂಗಳೂರು, ಡಿ.9: ಬೀದರ್ ಜಿಲ್ಲೆಯಾದ್ಯಂತ ರಸ್ತೆಗಳ ನಿರ್ಮಾಣ ಹಾಗೂ ಗುಂಡಿಗಳ ಮುಚ್ಚುವಿಕೆಗೆ ಸಂಬಂಧಿಸಿದಂತೆ ಏನೆಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ಒದಗಿಸಿ ಎಂದು ಹೈಕೋರ್ಟ್ ಸರಕಾರದ ಪರ ವಕೀಲರಿಗೆ ಸೂಚಿಸಿದೆ.

ಈ ಕುರಿತಂತೆ ಔರಾದ ನಿವಾಸಿಯಾದ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್.ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲೆ ಸರಸ್ವತಿ ಜಿಲ್ಲೆಯ ರಸ್ತೆಗಳ ಪರಿಸ್ಥಿತಿಯನ್ನು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮಾಹಿತಿ ಒದಗಿಸುವಂತೆ ಸರಕಾರಿ ವಕೀಲರಿಗೆ ಸೂಚಿಸಿದೆ.

ಬೀರ್ ಜಿಲ್ಲೆ ಸಂಪರ್ಕಿಸುವ ಎಲ್ಲ ರಾಜ್ಯ ಹೆದ್ದಾರಿಗಳೂ ಸೇರಿದಂತೆ, ಜಿಲ್ಲೆಯಾದ್ಯಂತ ಬಹಳಷ್ಟು ಕಡೆ ರಸ್ತೆಗಳು ವಿಪರೀತ ಹದಗೆಟ್ಟು ಹೋಗಿವೆ. ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿದ್ದು ವಾಹನ ಸಂಚಾರಕ್ಕೆ, ವಿಶೇಷವಾಗಿ ಶಾಲಾ ಮಕ್ಕಳು ಸಂಚರಿಸುವುದಕ್ಕೆ ಭಾರಿ ಅಡಚಣೆಯಾಗಿದೆ ಎಂಬುದು ಅರ್ಜಿದಾರರ ಆಕ್ಷೇಪ.

ರಸ್ತೆಗಳ ರಿಪೇರಿ ಮಾಡಲು ರಾಜ್ಯ ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದ ಮನವಿಗಳು ನಿಷ್ಪ್ರಯೋಜಕವಾಗಿವೆ. ಸಾರ್ವಜನಿಕರ ಸಂಚಾರಕ್ಕೆ ಯೋಗ್ಯ ರಸ್ತೆಗಳನ್ನು ನಿರ್ಮಿಸುವುದು ಸರಕಾರದ ಸಾಂವಿಧಾನಿಕ ಕರ್ತವ್ಯ. ಹೀಗಾಗಿ, ಸಂಬಂಧಿಸಿದ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆಗೆ ಈ ದಿಸೆಯಲ್ಲಿ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.

ಪ್ರಕರಣದಲ್ಲಿ ಮುಖ್ಯಮಂತ್ರಿ, ಸರಕಾರದ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News