ಅಂಗವಿಕಲರ ಬಗ್ಗೆ ಅರಿವು ಮೂಡಿಸಲು ವಾಕಥಾನ್ ಹೆಜ್ಜೆ

Update: 2018-12-09 18:24 GMT

ಬೆಂಗಳೂರು, ಡಿ.9: ಅಂಗವಿಕಲರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಮರ್ಥನಂ ಸಂಸ್ಥೆ ಸಹಯೋಗದಲ್ಲಿ 14ನೆ ಟಿಇ ಕನೆಕ್ಟಿವಿಟಿ ಬೆಂಗಳೂರು ವಾಕಥಾನ್‌ನಲ್ಲಿ ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕಾರ್ಪೊರೇಟ್ ಸಿಬ್ಬಂದಿ, ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಯುವಕರು ಮತ್ತು ವೃದ್ಧರು, ವಿದ್ಯಾರ್ಥಿಗಳು ವಿಕಲಚೇತನರು ಸೇರಿದಂತೆ ಹಲವು ಕ್ಷೇತ್ರಗಳ ಸಾವಿರಕ್ಕೂ ಹೆಚ್ಚು ಜನರು ವಿಕಲಚೇತನರಿಗೆ ಡಿಜಿಟಲ್ ಸೇರ್ಪಡೆಯ ಉದ್ದೇಶದ ವಾಕಥಾನ್‌ನಲ್ಲಿ ಹೆಜ್ಜೆ ಹಾಕಿದರು. 

ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಮಾತನಾಡಿ, ಸಮರ್ಥನಂ ಟ್ರಸ್ಟ್ ವಿಕಲಚೇತನರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂತಹ ಕಾರ್ಯಕ್ರಮಗಳು ವಿಕಲಚೇತನರ ಜೀವನದಲ್ಲಿ ಹೊಸ ಸಾಧ್ಯತೆಗಳನ್ನು ಅನುವು ಮಾಡಿಕೊಡಲಿವೆ ಎಂದರು. ಸಮರ್ಥನಂನ ಸಂಸ್ಥಾಪಕ ವ್ಯವಸ್ಥಾಪನಾ ಟ್ರಸ್ಟಿ ಮಹಾಂತೇಶ್ ಜಿಕೆ ಮಾತನಾಡಿ, ಈ ವರ್ಷದ ವಾಕಥಾನ್‌ನ ಥೀಮ್ ಡಿಜಿಟಲ್ ಸೇರ್ಪಡೆ ಎಂಬುದನ್ನು ಘೋಷಿಸಲು ನಮಗೆ ಸಂತಸವೆನಿಸುತ್ತಿದೆ. ಈ ಡಿಜಿಟಲ್ ಕ್ಷೇತ್ರ ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿದೆ. ಈ ನಿಟ್ಟಿನಲ್ಲಿ ಸಮರ್ಥನಂ ಐಟಿ ಸಂವಹನ ಕ್ಷೇತ್ರದೊಂದಿಗೆ ಕೆಲಸ ಮಾಡುತ್ತಿದ್ದು, ಆರಂಭದಿಂದಲೇ ವಿಕಲಚೇತನರನ್ನು ಇದರಲ್ಲಿ ಸೇರ್ಪಡೆ ಮಾಡಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ರಾಮಲಿಂಗಾರೆಡ್ಡಿ, ಪಾಲಿಕೆ ಸದಸ್ಯ ನಾಗರಾಜು, ಟಿಇ ಕನೆಕ್ಟಿವಿಟಿ ಕಮ್ಯೂನಿಟಿ ನಿರ್ದೇಶಕ ಜೋಯ್‌ದೀಪ್‌ನಾಗ್ ಉಪಸ್ಥಿತರಿದ್ದರು. ವಿಕಲಚೇತನರು ಡಿಜಿಟಲ್ ಸಾಧನಗಳಾದ ಸ್ಮಾರ್ಟ್ ಫೋನ್ ಹಾಗೂ ಅವುಗಳಲ್ಲಿನ ಎಲ್ಲ ಆಪ್‌ಗಳನ್ನು ಸುಲಭವಾಗಿ ಉಪಯೋಗಿಸಲು ಅನುವು ಮಾಡಿಕೊಡುವ ಸೊಸೈಟಿ ಜನರಲ್ ಹೊರ ತಂದಿರುವ ಕನೆಕ್ಟಿಬಲ್ ಆಫ್ ಅನ್ನು ಅನಾವರಣಗೊಳಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News