ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಆರೋಪಿಗೆ ಗುಂಡೇಟು

Update: 2018-12-09 18:28 GMT

ಬೆಂಗಳೂರು, ಡಿ.9: ಮನೆಯಿಂದ ಹಣವನ್ನು ದೋಚಿ ಪರಾರಿಯಾಗಿದ್ದವರನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯೊಬ್ಬರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್ ಹಾರಿಸಿದ ಗುಂಡು ಕಾಲಿಗೆ ತಗುಲಿ ಗಾಯಗೊಂಡಿರುವ ಘಟನೆ ರವಿವಾರ ಮುಂಜಾನೆ ನಗರದಲ್ಲಿ ನಡೆದಿದೆ.

ಇಲ್ಲಿನ ಮನೆಯೊಂದರಲ್ಲಿ 50 ಲಕ್ಷದಷ್ಟು ಹಣ ದೋಚಿ ಪರಾರಿಯಾಗಲು ಯತ್ನಿಸಿ ಗುಂಡೇಟಿನಿಂದ ಗಾಯಗೊಂಡಿರುವರನ್ನು ರಾಜೇಶ್ ಎಂದು ಗುರುತಿಸಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಏನಿದು ಘಟನೆ: ಇಲ್ಲಿನ ಸ್ಥಳೀಯ ನಿವಾಸಿ ರಾಮುಗೌಡ ಎಂಬುವವರು ಪರಿಚಯಸ್ಥರಾದ ದೇವೇಂದ್ರಪ್ಪ ಎಂಬುವರಿಗೆ ಸೇರಿದ ರಾಮೋಹಳ್ಳಿ ಬಳಿಯ ಎರಡು ಎಕರೆ ಐದು ಗುಂಟೆ ಜಾಗದಲ್ಲಿದ್ದ ರೆಸಾರ್ಟ್ ಖರೀದಿ ಮಾಡುವ ಉದ್ದೇಶದಿಂದ ಕಾಮಾಕ್ಷಿಪಾಳ್ಯದ ಬ್ಯಾಂಕ್‌ವೊಂದರಲ್ಲಿ ಜು.16ರಂದು ಹಣ ಪಡೆದುಕೊಂಡಿದ್ದರು. ಅದನ್ನು ರಾಮುಗೌಡರ ಭಾವನ ಮಗಳಾದ ಭಾಗ್ಯಮ್ಮಳ ಮನೆಗೆ ಹೋಗಿ 50 ಲಕ್ಷವನ್ನಿಟ್ಟು ಭಾವನ ಮನೆಗೆ ಹಿಂದುರಿಗಿದ್ದರು.

ಮಾರನೆಯ ದಿನ ರೆಸಾರ್ಟ್ ಖರೀದಿ ಸಂಬಂಧ ಭಾಗ್ಯಮ್ಮ ಮನೆಯಲ್ಲಿ ಮಾತುಕತೆ ನಡೆಸುತ್ತಿದ್ದ ವೇಳೆ ಆರೋಪಿಗಳು ಏಕಾಏಕಿ ಮನೆಗೆ ನುಗ್ಗಿ, ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಬೀರುವಿನಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ರಾಮುಗೌಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

ಆರೋಪಿಗಳು ತನಿಖೆ ವೇಳೆ ನೀಡಿದ ಮಾಹಿತಿ ಆಧರಿಸಿ ಜ್ಞಾನಭಾರತಿ ಠಾಣೆ ಇನ್‌ಸ್ಪೆಕ್ಟರ್ ಗಿರಿರಾಜ್ ಹಾಗೂ ಅನ್ನಪೂರ್ಣೇಶ್ವರಿ ಠಾಣೆಯ ಇನ್‌ಸ್ಪೆಕ್ಟರ್ ಲಿಂಗರಾಜು ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ಅನಂತರ ವಿಶ್ವೇಶ್ವರಯ್ಯ ಲೇಔಟ್‌ನ 8ನೇ ಬ್ಲಾಕ್‌ನಲ್ಲಿರುವ ಮಾಹಿತಿ ಆಧರಿಸಿ ಸಿಬ್ಬಂದಿಯಾದ ಮಹೇಶ್‌ಕುಮಾರ್, ದೊರೆಸ್ವಾಮಿ ಹಾಗೂ ಪಿಎಸ್‌ಐ ರಾಜಶೇಖರಯ್ಯ ದಾಳಿ ಮಾಡಿ ಆರೋಪಿಯನ್ನು ಬಂಧಿಸಲು ಮುಂದಾದರು.

ಈ ಸಂದರ್ಭದಲ್ಲಿ ಆರೋಪಿ ರಾಜೇಶ್, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಆರೋಪಿಗೆ ಶರಣಾಗುವಂತೆ ಸೂಚಿಸಿದರೂ ಲೆಕ್ಕಿಸದೇ ದಾಳಿಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಗುಂಡುಹಾರಿಸಿದ್ದು, ಅದು ರಾಜೇಶ್ ಕಾಲಿಗೆ ತಗುಲಿ ಪೆಟ್ಟಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಇದೀಗ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News