ಮೊದಲ ಟೆಸ್ಟ್: ಭಾರತ ಗೆಲುವಿನ ಶುಭಾರಂಭ

Update: 2018-12-10 06:42 GMT

ಅಡಿಲೇಡ್, ಡಿ.10: ವೇಗದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಬೆಂಬಲದಿಂದ ಭಾರತ ತಂಡ ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 31 ರನ್‌ಗಳ ಅಂತರದಿಂದ ಜಯಿಸಿ ಐತಿಹಾಸಿಕ ಸಾಧನೆ ಮಾಡಿತು.

ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯಲ್ಲಿ ಇದೇ ಮೊದಲ ಬಾರಿ ಶುಭಾರಂಭ ಮಾಡಿರುವ ಭಾರತ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಭಾರತ ಅಡಿಲೇಡ್ ಓವಲ್‌ನಲ್ಲಿ 2003ರಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿತ್ತು. ಇದೀಗ ಸುಮಾರು 15 ವರ್ಷಗಳ ಬಳಿಕ ಮತ್ತೊಂದು ಪಂದ್ಯವನ್ನು ಜಯಿಸಿ ಇತಿಹಾಸ ಬರೆಯಿತು. ಆಸ್ಟ್ರೇಲಿಯ ನೆಲದಲ್ಲಿ ಆರನೇ ಬಾರಿ ಟೆಸ್ಟ್ ಪಂದ್ಯ ಜಯಿಸಿತು. 2ನೇ ಪಂದ್ಯ ಡಿ.14 ರಿಂದ ಪರ್ತ್‌ನಲ್ಲಿ ಆರಂಭವಾಗಲಿದೆ.

ಗೆಲ್ಲಲು 323 ರನ್ ಗುರಿ ಪಡೆದಿದ್ದ ಆಸ್ಟ್ರೇಲಿಯ ನಾಲ್ಕನೇ ದಿನವಾದ ಸೋಮವಾರ 4 ವಿಕೆಟ್ ನಷ್ಟಕ್ಕೆ 104 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿ 119.5 ಓವರ್‌ಗಳಲ್ಲಿ 291ಕ್ಕೆ ಆಲೌಟಾಯಿತು.

ವೇಗದ ಬೌಲರ್‌ಗಳಾದ ಮುಹಮ್ಮದ್ ಶಮಿ(3-65), ಜಸ್‌ಪ್ರಿತ್ ಬುಮ್ರಾ(3-68) ಹಾಗೂ ಸ್ಪಿನ್ನರ್ ಆರ್.ಅಶ್ವಿನ್(3-92)ತಲಾ ಮೂರು ವಿಕೆಟ್‌ಗಳನ್ನು ಕಬಳಿಸಿ ಆಸ್ಟ್ರೇಲಿಯಕ್ಕೆ ಸೋಲಿನ ಕಹಿ ಉಣಿಸಿದರು.

 ನಿನ್ನೆ ಔಟಾಗದೆ 31 ರನ್ ಗಳಿಸಿದ್ದ ಶಾನ್ ಮಾರ್ಷ್ ಇಂದು 60 ರನ್ ಗಳಿಸಿ ಬುಮ್ರಾಗೆ ವಿಕೆಟ್ ಒಪ್ಪಿಸಿದರು. ತಂಡದ ಗೆಲುವಿನ ಆಶಾಕಿರಣವಾಗಿ ಗೋಚರಿಸಿದ್ದ ಮಾರ್ಷ್ ಅಗ್ರ ಸ್ಕೋರರ್ ಎನಿಸಿಕೊಂಡರು.

 ಇನ್ನುಳಿದಂತೆ ನಾಯಕ ಟಿಮ್ ಪೈನ್(41), ಸ್ಪಿನ್ನರ್ ನಥಾನ್ ಲಿಯೊನ್(ಔಟಾಗದೆ 38), ಕಮಿನ್ಸ್(28) ಹಾಗೂ ಸ್ಟಾರ್ಕ್(28) ಎರಡಂಕೆಯ ಸ್ಕೋರ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News