ಮದ್ಯಪಾನ ನಿಷೇಧಿಸಿದ ಪ್ರಥಮ ವ್ಯಕ್ತಿ ಟಿಪ್ಪು: ನಾಡೋಜ ಪಾಟೀಲ ಪುಟ್ಟಪ್ಪ

Update: 2018-12-10 17:59 GMT

ಬೆಂಗಳೂರು, ಡಿ.10: ದೇಶದಲ್ಲಿಯೇ ಮೊತ್ತ ಮೊದಲ ಬಾರಿಗೆ ಮದ್ಯಪಾನವನ್ನು ನಿಷೇಧ ಮಾಡಿದ ರಾಜ ಟಿಪ್ಪುಸುಲ್ತಾನ್ ಎಂದು ಹಿರಿಯ ಗಾಂಧಿವಾದಿ ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ.

ಸೋಮವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಗಾಂಧಿ ಅಂಗಳದಲ್ಲಿ ಗಾಂಧಿ ಚಿಂತಕರು’ ಎಂಬ ಸಂವಾದದಲ್ಲಿ ಪಾಲ್ಗೊಂಡು ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮದ್ಯಪಾನದಿಂದ ಆರೋಗ್ಯದ ಮೇಲೆ ಅಪಾರವಾದ ದುಷ್ಪರಿಣಾಮ ಬೀರುತ್ತದೆ, ಇದರಿಂದಾಗಿ ಜೀವನವೇ ಕೆಡುತ್ತದೆ ಎಂಬ ಉದ್ದೇಶದಿಂದ ಮೊದಲ ಬಾರಿಗೆ ಮದ್ಯಪಾನಕ್ಕೆ ನಿಷೇಧ ಹೇರಿದ ವ್ಯಕ್ತಿ ಟಿಪ್ಪು ಸುಲ್ತಾನ್ ಎಂದು ತಿಳಿಸಿದರು.

ಮಹಾತ್ಮಗಾಂಧಿ ಚಿಂತನೆಯಲ್ಲಿ ಒಂದಾದ ಮದ್ಯಪಾನವನ್ನು ನಿಷೇಧ ಮಾಡಲು ಯಾರೂ ಮುಂದಾಗಿಲ್ಲ. ಆದರೆ, ಟಿಪ್ಪು ಅದನ್ನು ನಿಷೇಧಿಸಿದ. ಅಂತಹ ವ್ಯಕ್ತಿಯ ಜನ್ಮದಿನವನ್ನು ಆಚರಿಸಲು ಸರಕಾರ ಮುಂದಾದರೆ, ಅದನ್ನೂ ವಿರೋಧ ಮಾಡುವವರಿದ್ದಾರೆ. ವಿರೋಧಿಸುವವರ ಆಡಳಿತಾವಧಿಯಲ್ಲಿ ಮದ್ಯಪಾನದ ವಿರುದ್ಧ ಎಲ್ಲಿಯೂ ಧ್ವನಿ ಎತ್ತಲಿಲ್ಲ ಎಂದರು.

ಸಮಾಜದಲ್ಲಿ ಶಾಂತಿಯ ಮೂಲಕ ಜನರನ್ನು ಗೆಲ್ಲುವುದು ಅತ್ಯಂತ ತ್ರಾಸದಾಯಕ ಕೆಲಸ. ಆದರೆ, ಮಹಾತ್ಮಗಾಂಧೀಜಿ ಕಷ್ಟದ ಕೆಲಸವನ್ನೇ ಆಯ್ದುಕೊಂಡರು. ದೇಶದ ಜನರ ಹಾಗೂ ಬ್ರಿಟಿಷರ ಮನಸ್ಸು ಗೆದ್ದರು. ಶಾಂತಿ ಮಾರ್ಗದ ಮೂಲಕವೇ ಸ್ವಾತಂತ್ರ ಸಂಗ್ರಾಮವನ್ನು ನಡೆಸಿದರು ಎಂದ ಅವರು ನುಡಿದರು.

ವಕೀಲ ವೃತ್ತಿಯ ಮೂಲಕ ಜನರಿಗೆ ನ್ಯಾಯ ದೊರಕಿಸಿಕೊಡಬಹುದಿತ್ತಾ, ಅದನ್ನೇಕೆ ಬಿಟ್ಟರು ಎಂದು ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಪು, ಅಂದಿನ ಸಂದರ್ಭದಲ್ಲಿ ವಕೀಲ ವೃತ್ತಿಯನ್ನು ಮಾಡುವ ಅನೇಕರಿದ್ದರು. ಆದುದರಿಂದಾಗಿ ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಳ್ಳಲು ಸ್ವಾತಂತ್ರ ಸಂಗ್ರಾಮಕ್ಕೆ ಧುಮುಕಿದರು ಎಂದು ಹೇಳಿದರು. ಗಾಂಧಿಯನ್ನು ಗೋಡ್ಸೆ ಕೊಲ್ಲಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾತಂತ್ರ ನಂತರದ ವಿಭಜನೆಯಾದ ವೇಳೆ ಗಾಂಧಿ ವಿರುದ್ಧ ನಡೆದ ಸುಳ್ಳು ಪ್ರಚಾರದಿಂದ ಪ್ರಭಾವಿತರಾಗಿ ಕೊಲ್ಲಲು ಪ್ರೇರಣೆಯಾಯಿತು ಎಂದರು.

ಸ್ವದೇಶಿ ವಸ್ತುಗಳನ್ನು ಬಳಸಿ: ಸ್ವದೇಶಿ ವಸ್ತುಗಳನ್ನು ಖರೀದಿ ಮಾಡಿ, ಅದನ್ನು ಬಳಸುವ ಮೂಲಕ ಗ್ರಾಮೀಣ ಜನರ ಬದುಕನ್ನು ಹಸನು ಮಾಡಲು ಸಾಧ್ಯವಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ವಿದೇಶಿ ವಸ್ತುಗಳ ಮೇಲೆ ವಿಪರೀತವಾದ ವ್ಯಾಮೋಹವನ್ನು ಬೆಳೆಸಿಕೊಳ್ಳಲಾಗುತ್ತಿದೆ. ಹೀಗಾಗಿ, ಎಲ್ಲಿಯವರೆಗೂ ವಿದೇಶಿ ವಸ್ತುಗಳ ಬಳಕೆ ನಿಲ್ಲಿಸಿ ಸ್ವದೇಶಿ ವಸ್ತುಗಳನ್ನು ಬಳಕೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಬಡವ-ಶ್ರೀಮಂತರ ನಡುವಿನ ತಾರತಮ್ಯ ಕೊನೆಯಾಗುವುದಿಲ್ಲ ಎಂದು ನುಡಿದರು.

ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾದ್ಯಾಪಕ ಪ್ರೊ.ಶಾಂತಿನಾಥ ದಿಬ್ಬದ ಮಾತನಾಡಿ, ಮಹಾತ್ಮಗಾಂಧೀಜಿಯ ಆದರ್ಶ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ತಮ್ಮ ವೈಯಕ್ತಿಕ ಸ್ವಾರ್ಥವನ್ನು ಬದಿಗಿಟ್ಟು ಇಡೀ ಜೀವನವನ್ನು ದೇಶಕ್ಕಾಗಿ ಅರ್ಪಿಸಿದ ವ್ಯಕ್ತಿಯಾಗಿದ್ದಾರೆ. ಅಂತಹ ಚೇತನದ ಬಗ್ಗೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಹಾಗೂ ಅವರ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿದರು.

ದೇಶದಲ್ಲಿ ಸ್ವಾತಂತ್ರದ ನಂತರದ ತಲೆಮಾರಿನವರಿಗೆ ಸ್ವಾತಂತ್ರ ಹೋರಾಟದ ಬೆಲೆ ಗೊತ್ತಿಲ್ಲ. ಬ್ರಿಟಿಷರ ಹಿಂಸೆ, ಅವಮಾನ, ಚಳವಳಿಗಾರರು ಪಟ್ಟ ಕಷ್ಟಗಳು ಅಥರ್ವಾಗುತ್ತಿಲ್ಲ. ಅಂದು ಗಾಂಧಿ ಸೇರಿದಂತೆ ನೂರಾರು ಹೋರಾಟಗಾರರು ಸ್ವಾತಂತ್ರ ಚಳವಳಿ ನಡೆಸದೇ ಇದ್ದಿದ್ದರೆ ಇಂದು ನಮ್ಮ ಸ್ಥಿತಿಯನ್ನು ಊಹಿಸಿಕೊಳ್ಳಲು ಅಸಾಧ್ಯ ಎಂದು ತಿಳಿಸಿದರು.

ಮೌಲ್ಯಗಳನ್ನು ಸಾಹಿತ್ಯಿಕವಾಗಿ ಬರೆಯುವುದು, ವೈಯಕ್ತಿಕವಾಗಿ ಬದುಕಿನಲ್ಲಿ ಅನುಸರಿಸುವುದು ಹಾಗೂ ಸಾಮಾಜಿಕವಾಗಿ ಜಾರಿಗೆ ತರುವುದು ಗಾಂಧೀಯವರ ಚಿಂತನೆಯಾಗಿತ್ತು. ಇಂದಿನ ವಿದ್ಯಾರ್ಥಿ-ಯುವಜನರಲ್ಲಿ ರಾಷ್ಟ್ರದ, ರಾಷ್ಟ್ರ ನಾಯಕರ ಬಗ್ಗೆ ತಿಳುವಳಿಕೆ ಇಲ್ಲದಾಗಿರುವುದು ದುರಂತ. ಹೀಗಾಗಿ, ಇಂದಿನ ಯುವಜನತೆ ಇತಿಹಾಸ ಮತ್ತು ಪರಂಪರೆಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹಾಗೂ ಗಾಂಧೀವಾದಿ ಎಂ.ವಿ.ರಾಜಶೇಖರನ್, ಉಪನ್ಯಾಸಕ ಡಾ.ಲೋಹಿತ ನಾಯ್ಕ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News