ಕಸ ಗುಡಿಸಿದರೆ ಸಾಲದು, ಮನಸ್ಸನ್ನೂ ಸ್ವಚ್ಛವಾಗಿಟ್ಟುಕೊಳ್ಳಬೇಕು: ಡಾ.ಸಿದ್ದಲಿಂಗಯ್ಯ

Update: 2018-12-10 14:53 GMT

ಬೆಂಗಳೂರು, ಡಿ.10: ಕೇವಲ ಪೊರಕೆ ಹಿಡಿದು ಕಸಗುಡಿಸಿದರೆ ಸ್ವಚ್ಛತೆಯಾಗದು, ಮನಸ್ಸನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಆಗ ಮಾತ್ರ ಸ್ವಚ್ಛತೆಗೆ ಒಂದು ಅರ್ಥ ಬರುತ್ತದೆ ಎಂದು ನಾಡೋಜ ಡಾ.ಸಿದ್ದಲಿಂಗಯ್ಯ ತಿಳಿಸಿದ್ದಾರೆ.

ಸೋಮವಾರ ನಗರದ ಬೆಂಗಳೂರು ವಿಶ್ವವಿದ್ಯಾಲಯ ವೆಂಕಟಗಿರಿ ಸಭಾಂಗಣದಲ್ಲಿ ಗ್ರಾಮೀಣ ಅಭಿವೃದ್ಧಿ ಅಧ್ಯಯನ ಕೇಂದ್ರದಿಂದ ಹಮ್ಮಿಕೊಂಡಿದ್ದ, ರಾಷ್ಟ್ರೀಯ ಸಮ್ಮೇಳನ ಹಾಗೂ ಬೆಂಗಳೂರು ವಿವಿಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಬಿ.ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಸ್ವಚ್ಛತೆ ಬಗ್ಗೆ ಹೆಚ್ಚು ಆದ್ಯತೆ ನೀಡಿ, ತಂದೆ-ತಾಯಿ ಹಾಗೂ ಮನೆಯ ಸುತ್ತ ಮುತ್ತಲಿನ ನಿವಾಸಿಗಳಲ್ಲಿ ಇದರ ಬಗ್ಗೆ ಅರಿವು ಮೂಡಿಸಬೇಕೆಂದು ಸಲಹೆ ನೀಡಿದರು.

ಬಿ.ಬಸವಲಿಂಗಪ್ಪ ಅಭಿವೃದ್ಧಿ ಅಧ್ಯಯನ ಸಂಸ್ಥೆ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಗೊಂಡಿರುವುದು ಸಂತಸವಾಗಿದೆ. ದಿ.ಬಸವಲಿಂಗಪ್ಪ ಅವರು ಸಚಿವ ಸ್ಥಾನದಲ್ಲಿ ಇದ್ದಾಗ ಸ್ವಚ್ಛತೆ ಬಗ್ಗೆ ಆದ್ಯತೆ ನೀಡುತ್ತಿದ್ದರು. ಅಷ್ಟೆ ಅಲ್ಲದೆ, ರಾಜಕೀಯ ವಲಯದಲ್ಲೂ ಮೊದಲ ಆದ್ಯತೆಯನ್ನು ಸ್ವಚ್ಛತೆಗೆ ನೀಡುತ್ತಿದ್ದರು ಎಂದು ತಿಳಿಸಿದರು.

ಬಸವಲಿಂಗಪ್ಪ ಅವರು ಸಂವಿಧಾನದ ಸಂಕೇತ. ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿರುವ ಅನಿಷ್ಟ ಪದ್ದತಿಯಾದ ಜಾತಿ-ಭೇದ ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದರು.

ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ಪರಿಸರ ವಿಜ್ಞಾನಿ ಡಾ.ಆರ್.ಲಕ್ಷ್ಮೀನಾರಾಯಣ ಅವರನ್ನು ಸಂಶೋಧನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News