ಕಿಂಗ್‌ ಫಿಷರ್ ಮಾಡಿರುವ ಸಾಲ ತೀರಿಸಲು ಸಿದ್ಧ: ಯುಬಿ ಮುಚ್ಚದಂತೆ ಹೈಕೋರ್ಟ್‌ಗೆ ಮನವಿ ಮಾಡಿದ ಮಲ್ಯ ಪರ ವಕೀಲರು

Update: 2018-12-10 15:23 GMT

ಬೆಂಗಳೂರು, ಡಿ.10: ಕಿಂಗ್ ಫಿಷರ್ ಮಾಡಿರುವ ಸಾಲ ತೀರಿಸಲು ಸಿದ್ದರಿದ್ದೇವೆ. ಹೀಗಾಗಿ, ಯುನೈಟೆಡ್ ಬ್ರೆವರೀಸ್ ಹೋರ್ಡಿಂಗ್ಸ್ ಲಿಮಿಟೆಡ್(ಯುಬಿಎಚ್‌ಎಲ್) ಸಂಸ್ಥೆ ಮುಚ್ಚಿಸಬೇಡಿ ಎಂದು ವಿಜಯ್ ಮಲ್ಯ ಪರ ವಕೀಲರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಕಿಂಗ್ ಫಿಷರ್ ಸಾಲಕ್ಕಾಗಿ ಬ್ಯಾಂಕ್‌ಗಳು ದಾವೆ ಹೂಡಿರುವ ಸಂಬಂಧ ಯುಬಿಎಚ್‌ಎಲ್ ಸಂಸ್ಥೆಯನ್ನು ಮುಚ್ಚಲು ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದ್ದು, ಅದರಂತೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೋರಿ ವಿಜಯ್ ಮಲ್ಯ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಮಲ್ಯ ಪರ ವಾದಿಸಿದ ಹಿರಿಯ ವಕೀಲ ಸಜ್ಜನ್ ಪೂವಯ್ಯ, ಕಿಂಗ್ ಫಿಷರ್‌ಗಾಗಿ ಮಾಡಿರುವ ಸಾಲವನ್ನು ತೀರಿಸಲು ಯುಬಿಎಚ್‌ಎಲ್ ಸಿದ್ಧವಿದೆ. ಯುಬಿಎಚ್‌ಎಲ್ ಹೊಂದಿರುವ ಆಸ್ತಿ ಹಾಗೂ ಷೇರುಗಳ ಮೌಲ್ಯ 15 ಸಾವಿರ ಕೋಟಿ ರುಪಾಯಿ ಇದೆ. ಇವನ್ನು ಮಾರಾಟ ಮಾಡಿದರೆ ಕಿಂಗ್ ಫಿಷರ್ ಮಾಡಿರುವ ಸಾಲ ತೀರಿಸಿದ ನಂತರವೂ ಮೂರೂವರೆ ಸಾವಿರ ಕೋಟಿ ರುಪಾಯಿ ಉಳಿಯುತ್ತದೆ. ಉಳಿಯುವ ಹಣದಲ್ಲಿಯೇ ಯುಬಿಎಚ್‌ಎಲ್ ಕಂಪೆನಿ ನಡೆಸಬಹದು. ಹೀಗಾಗಿ ಯುಬಿಎಚ್‌ಎಲ್ ಕಂಪೆನಿಯನ್ನು ಮುಚ್ಚಿಸುವ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿದರು. ಜತೆಗೆ ಆಸ್ತಿ ಮಾರಾಟ ಮಾಡಿ ಬರುವ ಹಣವನ್ನು ಕೋರ್ಟ್‌ನಲ್ಲಿ ಠೇವಣಿ ಇಡಲಾಗುವುದು. ಯುಬಿಎಚ್‌ಎಲ್ ಸಾಲ ತೀರಿಸುವ ಪ್ರಕ್ರಿಯೆಯನ್ನು ಕೋರ್ಟ್ ಮೇಲ್ವಿಚಾರಣೆ ನಡೆಸಬೇಕು ಎಂದು ಮಲ್ಯ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.

ಕೆಲ ಕಾಲ ವಾದ ಆಲಿಸಿದ ಪೀಠ ಮೂಲ ಅರ್ಜಿ ಹಾಗೂ ಇದೀಗ ಸಲ್ಲಿಸಿರುವ ಮಧ್ಯಂತರ ಮನವಿಯನ್ನು ಒಟ್ಟಿಗೆ ಮುಂದಿನ ಡಿ.17 ರಂದು ನಡೆಸುವುದಾಗಿ ತಿಳಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News