'ಲಿಂಗಾಯತ ಪ್ರತ್ಯೇಕ ಧರ್ಮ' ಶಿಫಾರಸ್ಸು ತಿರಸ್ಕೃರಿಸಿದ ಕೇಂದ್ರದ ವಿರುದ್ಧ ಪ್ರತಿಭಟನೆ; ಮಾತೆ ಮಹಾದೇವಿ

Update: 2018-12-10 17:27 GMT

ಹೊಸದಿಲ್ಲಿ, ಡಿ.10: ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾನಮಾನದ ಶಿಫಾರಸನ್ನು ತಿರಸ್ಕರಿಸಿದ್ದಾಗಿ ಕರ್ನಾಟಕ ಹೈಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದ್ದು, ಇದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಲಿಂಗಾಯತ ಧರ್ಮ ಮಹಾಸಭೆ ಅಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

ಸೋಮವಾರ ನಗರದ ತಾಲ್ಕಟೋರಾ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ಲಿಂಗಾಯತ ಸಮಾವೇಶದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ ಸರಕಾರ ಕಳೆದ ವರ್ಷ ಪ್ರತ್ಯೇಕ ಧರ್ಮದ ಶಿಫಾರಸು ಮಾಡಿದೆ. ಆದರೆ, ಕೇಂದ್ರ ಸರಕಾರವು ಅದನ್ನು ತಿರಸ್ಕರಿಸಿದ್ದಾಗಿ ನವೆಂಬರ್ 13ರಂದು ರಾಜ್ಯ ಹೈಕೋರ್ಟ್‌ಗೆ ಹೇಳಿಕೆ ಸಲ್ಲಿಸಿದೆ. ಮೂರು ದಿನ ನಡೆಯಲಿರುವ ಈ ಸಮಾವೇಶವು ಪ್ರತಿಭಟನಾ ಸಮಾವೇಶ ಆಗಲಿದೆ ಎಂದು ಅವರು ತಿಳಿಸಿದರು.

ಸಿಖ್, ಜೈನ್ ಮಾತ್ರವಲ್ಲದೆ ವಿದೇಶದ ಧರ್ಮಗಳಾದ ಇಸ್ಲಾಂ, ಕ್ರೈಸ್ತ ಹಾಗೂ ಫಾರಸಿಗಳಿಗೆ ಪ್ರತ್ಯೇಕ ಸ್ಥಾನಮಾನ ನೀಡಿ ಧಾರ್ಮಿಕ ಅಲ್ಪಸಂಖ್ಯಾತ ಎಂದು ಗುರುತಿಸಿರುವ ಕೇಂದ್ರ ಲಿಂಗಾಯತದ ಮನವಿ ತಿರಸ್ಕರಿಸಿದ್ದು ಸರಿಯಲ್ಲ ಎಂದು ಅವರು ಹೇಳಿದರು. ವಿವಿಧ ಮಠಾಧೀಶರು, ಕರ್ನಾಟಕ ಹಾಗೂ ಮಹಾರಾಷ್ಟ್ರದ ಲಿಂಗಾಯತ ಸಮುದಾಯದ ನೂರಾರು ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಸಮಾವೇಶದ ಉದ್ಘಾಟನೆಗೆ ಕೇಂದ್ರದ ಸಚಿವ ಡಿ.ವಿ.ಸದಾನಂದಗೌಡ ಗೈರಾದರು. ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸೈಯದ್ ಘಯೋರಲ್ ಹಸನ್ ರಿಜ್ವಿ ಅವರು ಧ್ವಜಾರೋಹಣ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News