ನಿರ್ಭಯಾ ಅನುದಾನದ ಅಡಿ 115 ಮಹಿಳಾ ಚಾಲಕರ ತರಬೇತಿ ಕಾರ್ಯಕ್ಕೆ ಚಾಲನೆ

Update: 2018-12-10 17:51 GMT

ಬೆಂಗಳೂರು, ಡಿ.10: ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ನಿರ್ಭಯಾ ಯೋಜನೆ ಅಡಿಯಲ್ಲಿ ಮಹಿಳಾ ಚಾಲಕರ ತರಬೇತಿ ಕಾರ್ಯಕ್ಕೆ ಚಾಲನೆ ಸಿಕ್ಕಿದ್ದು, 115 ಮಹಿಳೆಯರು ತರಬೇತಿ ಪಡೆದುಕೊಂಡಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಲ್ಲಿ ನಿರ್ಭಯಾ ಅನುದಾನದ ಅಡಿಯಲ್ಲಿ ತರಬೇತಿ ನೀಡಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಯೋಜನೆ ಅಡಿ ಮಹಿಳಾ ಚಾಲಕರನ್ನು ನೇಮಕ ಮಾಡಿಕೊಳ್ಳಬೇಕು ಎಂದಿದೆ. ಆದರೆ, ಇದಕ್ಕೆ ಹಲವು ತಿಂಗಳಿನಿಂದ ಯಾವುದೇ ರೂಪ ನೀಡಿರಲಿಲ್ಲ. ಹೀಗಾಗಿ, ಕಳೆದ ತಿಂಗಳಿನಲ್ಲಿ 115 ಮಹಿಳೆಯರು ಉಚಿತ ಚಾಲನಾ ತರಬೇತಿಗೆ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಂಡು ಅದರ ಲಾಭ ಪಡೆದುಕೊಂಡಿದ್ದಾರೆ.

ನಿರ್ಭಯಾ ಅನುದಾನದ 7.5 ಕೋಟಿ ರೂ. ಹಣದಲ್ಲಿ ಒಟ್ಟು 1000 ಮಹಿಳೆಯರಿಗೆ ಬಸ್ ಮತ್ತು ಲಘು ವಾಹನಗಳ ಚಾಲನಾ ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ 103 ಲಘು ವಾಹನಗಳ ಚಾಲನಾ ತರಬೇತಿ ಹಾಗು 12 ಮಹಿಳೆಯರಿಗೆ ಭಾರೀ ವಾಹನಗಳ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗಿದೆ. ಲಘುವಾಹನಗಳ ಚಾಲನಾ ಪರವಾನಗಿ ಪಡೆದು ಒಂದು ವರ್ಷ ಪೂರೈಸಿದ ಮಹಿಳೆಯರು ಭಾರೀ ವಾಹನಗಳು ಅಂದರೆ ಬಸ್ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಲಘು ವಾಹನಗಳ ತರಬೇತಿ ಬಯಸಿ ಅರ್ಜಿ ಸಲ್ಲಿಸುವವರಿಗೆ ನಗರದ ರಸ್ತೆಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಭಾರೀ ವಾಹನಗಳ ತರಬೇತಿ ಬಯಸಿ ಅರ್ಜಿಸಲ್ಲಿಸುವವರಿಗೆ ಮಾಗಡಿ ರಸ್ತೆಯ ವಡ್ಡರಹಳ್ಳಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಈ ತರಬೇತಿ ಪೂರ್ಣಗೊಳಿಸಿದ ನಂತರ ಬಹುತೇಕ ಮಹಿಳೆಯರು ಬಿಎಂಟಿಸಿಗೆ ಸೇರ್ಪಡೆಯಾಗುವ ಆಸಕ್ತಿ ವ್ಯಕ್ತಪಡಿಸಿದ್ದಾರೆ. ತರಬೇತಿ ಪೂರ್ಣಗೊಂಡರೆ ಅವರೆಲ್ಲರಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಬಿಎಂಟಿಸಿ ಚಾಲಕರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗುವುದು. ಖಾಸಗಿ ವಾಹನ ತರಬೇತಿ ಶಾಲೆಗಿಂತ ಮಳೆಯರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಲಾಗುವುದು ಎಂದು ಬಿಎಂಟಿಸಿ ಚಾಲಕ ಮತ್ತು ತರಬೇತುದಾರ ಎಂ.ಬಿ. ಜಯಣ್ಣ ತಿಳಿಸಿದರು. 

ಖಾಸಗಿ ಚಾಲನಾ ಶಾಲೆಗಳಲ್ಲಿ ತರಬೇತಿಗಾಗಿ ಹಣ ನೀಡಬೇಕು. ಆದರೆ, ಬಿಎಂಟಿಸಿಯು ಉಚಿತವಾಗಿ ತರಬೇತಿ ನೀಡುತ್ತಿದೆ. ಲಘು ವಾಹನಗಳ ತರಬೇತಿ ಪಡೆದ ಬಳಿಕ ಭಾರೀ ವಾಹನ ಚಾಲನೆ ತರಬೇತಿ ಪಡೆದು ಬಿಎಂಟಿಸಿಗೆ ಸೇರುತ್ತೇನೆ.

-ನಾಗರತ್ನ ರವಿಕುಮಾರ್, ತರಬೇತಿ ಪಡೆಯುತ್ತಿರುವ ಮಹಿಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News