ರಾಜಧಾನಿಗೆ ಮೂಲಭೂತ ಸೌಲಭ್ಯ ಅಗತ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ

Update: 2018-12-10 17:52 GMT

ಬೆಂಗಳೂರು, ಡಿ.10: ವೇಗವಾಗಿ ಬೆಳೆಯುತ್ತಿರುವ ನಗರಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಅಗತ್ಯ ಹೆಚ್ಚುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಛಾಯಾಗ್ರಾಹಕ ಕೆ.ವೆಂಕಟೇಶ್ ಅವರ ಕೆ.ಆರ್.ಮಾರುಕಟ್ಟೆಯಲ್ಲಿ ಕತ್ತಲೊಡನೆ ಬೆಳಕಿನಾಟ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ತಾವು ಮುಖ್ಯಮಂತ್ರಿಯಾಗಿದ್ದಾಗ ಜನಸಂಖ್ಯೆಯೂ ಕಡಿಮೆ, ವಾಹನಗಳೂ ಕಡಿಮೆ ಇತ್ತು. ಆದರೆ, ಈಗ ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದ್ದು ಸಮಸ್ಯೆಗಳು ಹೆಚ್ಚಾಗಿವೆ ಎಂದು ಹೇಳಿದರು.

ನಗರದಲ್ಲಿ ಮೂಲ ಸೌಕರ್ಯಗಳ ಕೊರತೆಯ ಜತೆಗೆ ಸಂಚಾರ ದಟ್ಟಣೆಯೂ ಇದೆ. ಮೂಲ ಸೌಲಭ್ಯಗಳನ್ನು ಬಗೆಹರಿಸಿದರೆ ಅನೇಕ ಸಮಸ್ಯೆಗಳು ಬಗೆಹರಿಯಲಿವೆ. ಐಟಿಬಿಟಿ ಕಂಪನಿಗಳು ಬೆಳೆಯುವ ಮೂಲಕ ಜಗತ್ತನ್ನು ರಾಜಧಾನಿ ಆಕರ್ಷಿಸಿದೆ. ಇದರಿಂದಾಗಿ ಬೆಂಗಳೂರು ಅಭಿವೃದ್ಧಿಯಾಗಿದೆ. ಅದರಂತೆ ಸೌಲಭ್ಯಗಳ ಕೊರತೆಯೂ ಇದೆ. ಅವುಗಳನ್ನು ಸರಿಪಡಿಸಬೇಕು ಎಂದು ಹೇಳಿದರು.

ನಾನು ಆಡಳಿತದಲ್ಲಿದ್ದ ವೇಳೆ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಅವರು ಮೆಟ್ರೋದ ಮೊದಲ ಹಂತಕ್ಕೆ ಡಿಪಿಆರ್ ಮಾಡಿದ್ದರು. ಅವರ ಶ್ರಮ ಶ್ಲಾಘನೀಯ, ಅವರಂತೆ ಈಗಿನ ಅಧಿಕಾರಿಗಳು ತಮ್ಮ ಕಾರ್ಯದಲ್ಲಿ ಬದ್ಧತೆ ಮೆರೆಯಬೇಕು. ಒಟ್ಟಾರೆ ನಗರದ ಅಭಿವೃದ್ಧಿ ನಿಟ್ಟಿನಲ್ಲಿ ಸರಕಾರದ ಪಾತ್ರಕ್ಕಿಂತ ಸಾರ್ವಜನಿಕರು, ಉದ್ಯಮಿಗಳು ಅಭಿವೃದ್ಧಿಗಾಗಿ ಯೋಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು. ಬೆಳೆಯುತ್ತಿರುವ ನಗರಗಳ ವೇಗಕ್ಕೆ ಅನುಸಾರವಾಗಿ ಮೂಲಭೂತ ಸೌಕರ್ಯವನ್ನು ಸರಕಾರ ಕಲ್ಪಸಬೇಕಿದೆ. ಅದಕ್ಕೆ ಜನರು, ಸಂಘ ಸಂಸ್ಥೆಗಳು ಒಗ್ಗೂಡುವ ಅಗತ್ಯವಿದ್ದು, ಮೆಟ್ರೋ ಯೋಜನೆಗಳು ಪೂರ್ಣಗೊಳ್ಳಬೇಕು. ಸಂಪನ್ಮೂಲಗಳನ್ನು ಬಳಕೆ ಮಾಡಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಅವರು ತಿಳಿಸಿದರು.

ಕೆ.ಆರ್.ಮಾರುಕಟ್ಟೆಯಲ್ಲಿನ ಸಮಸ್ಯೆ, ಅಲ್ಲಿನ ಜನಸಂದಣಿ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕಪ್ಪು ಬಿಳುಪು ಚಿತ್ರಗಳು ಪ್ರದರ್ಶನದಲ್ಲಿದ್ದವು. ಈ ವೇಳೆ ಕರ್ನಾಟಕ ಲಲಿತಾಕಲಾ ಅಕಾಡೆಮಿ ಅಧ್ಯಕ್ಷೆ ಎಂ.ಜೆ.ಕಮಲಾಕ್ಷಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News