ಮಕ್ಕಳ ಅಭಿಪ್ರಾಯ ಗೌರವಿಸಬೇಕು: ನಾರ್ವೆ ಕಾರ್ಪೊರೇಟರ್ ಶೆತಿಲ್ ಉತ್ನೆ

Update: 2018-12-10 17:57 GMT

ಬೆಂಗಳೂರು, ಡಿ.10: ವಿಶ್ವದಾದ್ಯಂತ ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ, ಮಕ್ಕಳು ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಗೌರವಿಸಬೇಕೆಂದು ನಾರ್ವೆ ದೇಶದ ರಾಜಕಾರಣಿ ಶೆತಿಲ್ ಉತ್ನೆ ಅಭಿಪ್ರಾಯಪಟ್ಟಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿದ್ದು, ಇದರ ವಿರುದ್ಧ ಮಕ್ಕಳೇ ಅಭಿಯಾನ ಕೈಗೊಳ್ಳಬೇಕು. ಅಲ್ಲದೆ, ಬಾಲ್ಯ ವಿವಾಹದ ವಿರುದ್ಧ ಅಭಿಯಾನಗಳ ಮುಂಚೂಣಿಯಲ್ಲಿರುವ ಬಳ್ಳಾರಿಯ ಭೀಮಾ ಸಂಘ (ದುಡಿಯುವ ಮಕ್ಕಳ ಸಂಘಟನೆ), ಅನಧಿಕೃತ ಮದ್ಯ ವ್ಯಾಪಾರದ ವಿರುದ್ಧ ಧ್ವನಿ ಎತ್ತಿರುವ ಮಕ್ಕಳ ಸಂಘಟನೆಗಳು ಹೆಚ್ಚು ವೃದ್ಧಿಸಬೇಕೆಂದು ಸಲಹೆ ನೀಡಿದರು.

ಕೇವಲ ಭಾರತದಲ್ಲಿ ಮಾತ್ರ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿಲ್ಲ. ಜಾಗತಿಕ ಮಟ್ಟದಲ್ಲಿ ಮಕ್ಕಳ ಹಕ್ಕುಗಳು ಒಂದಲ್ಲ ಒಂದು ಬಗೆಯಲ್ಲಿ ಉಲ್ಲಂಘನೆಯಾಗುತ್ತಿವೆ. ಮೂಲೆ ಗುಂಪಾದವರು (ಪಾಕಿಸ್ತಾನ), ಬೀದಿಯಲ್ಲಿ ವಾಸಿಸುತ್ತಿರುವವರು (ದೆಹಲಿ), ಚಿಕ್ಕ ವಯಸ್ಸಿನಲ್ಲೆ ದುಡಿಮೆಗೆ ದೂಡಲ್ಪಟ್ಟವರು (ಬೆಂಗಳೂರು) ಇತ್ಯಾದಿ ರೀತಿಯಲ್ಲಿ ಮಕ್ಕಳು ಶೋಷಣೆಗೆ ಒಳಪಡುತ್ತಿದ್ದಾರೆ. ಹೀಗಾಗಿ, ಹಕ್ಕುಗಳ ರಕ್ಷಣೆಯೊಂದಿಗೆ ಅವರ ದನಿಗೆ ಕಿವಿಗೊಡಬೇಕಿರುವುದು ಅಗತ್ಯವಾಗಿದೆ ಎಂದು ವಿವರಿಸಿದರು.

ಹಿನ್ನೆಲೆ: ನಾರ್ವೆ ದೇಶದ ಶೆತಿಲ್ ಉತ್ನೆಯ ಮಕ್ಕಳ ಅಭಿಪ್ರಾಯ ಹಾಗೂ ಅವರ ಹಕ್ಕುಗಳಿಗಾಗಿ ಶ್ರಮಿಸುತ್ತಿದ್ದು, 12ಕ್ಕೂ ಹೆಚ್ಚು ದೇಶದಲ್ಲಿನ ಮಕ್ಕಳೊಡನೆ ಚರ್ಚಿಸುವ ಮೂಲಕ ಅವರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಲ್ಲದೆ, 10ಸಾವಿರ ಕಿ.ಮೀ ನಷ್ಟು ಮಕ್ಕಳ ಹಕ್ಕಿಗಾಗಿ ಸೈಕ್ಲಿಂಗ್ ಮಾಡಿದ್ದು, ಪ್ರಸ್ತುತ ದೇಶಾದ್ಯಂತ ನಾರ್ವೆ-ಇಂಡಿಯಾ ಬೈಕಥಾನ್ ಹಮ್ಮಿಕೊಂಡು ಮಕ್ಕಳ ಶೋಷಣೆ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಸಿಡಬ್ಲೂಸಿ ನಿರ್ದೇಶಕಿ ಕವಿತಾ ರತ್ನ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News