ಬೆಲ್ಜಿಯಂ ಪ್ರಹಾರ: ಕ್ವಾರ್ಟರ್ ಫೈನಲ್ ಗೆ ಲಗ್ಗೆ

Update: 2018-12-11 18:38 GMT

ಭುವನೇಶ್ವರ, ಡಿ.11: ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಮಂಗಳವಾರ ನಡೆದ ಮೂರನೇ ಕ್ರಾಸ್ ಓವರ್ ಪಂದ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಬೆಲ್ಜಿಯಂ ತಂಡ ಐದು ಬಾರಿಯ ಚಾಂಪಿಯನ್ ಪಾಕಿಸ್ತಾನ ತಂಡವನ್ನು 5-0 ಗೋಲುಗಳ ಅಂತರದಿಂದ ಮಣಿಸಿತು. ಈ ಮೂಲಕ ಟೂರ್ನಿಯ ಕ್ವಾರ್ಟರ್ ಫೈನಲ್ ಹಂತಕ್ಕೆ ತೇರ್ಗಡೆಯಾಯಿತು.

ಬೆಲ್ಜಿಯಂ ಪರ ಅಲೆಕ್ಸಾಂಡರ್ ಹೆಂಡ್ರಿಕ್ಸ್(10ನೇ ನಿಮಿಷ), ಥಾಮಸ್ ಬ್ರಿಲ್ಸ್(13ನೇ ನಿಮಿಷ), ಸೆಡ್ರಿಕ್ ಚಾರ್ಲಿಯರ್(27ನೇ ನಿ.), ಸೆಬಾಸ್ಟಿಯನ್ ಡಾಕಿಯರ್(35ನೇ ನಿಮಿಷ) ಹಾಗೂ ಟಾಮ್ ಬೂನ್(53ನೇ ನಿಮಿಷ) ತಲಾ ಒಂದು ಗೋಲು ಬಾರಿಸಿ ತಂಡದ ಭರ್ಜರಿ ಗೆಲುವಿಗೆ ನೆರವಾದರು.

ಬೆಲ್ಜಿಯಂ ಗುರುವಾರ ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ.

ರೆಡ್ ಲಯನ್ಸ್ ಖ್ಯಾತಿಯ ವಿಶ್ವದ ನಂ.3ನೇ ತಂಡ ಬೆಲ್ಜಿಯಂ ವಿಶ್ವದ ನಂ.13ನೇ ತಂಡ ಪಾಕ್ ವಿರುದ್ಧ ಪಂದ್ಯ ಗೆಲ್ಲಬಲ್ಲ ಫೇವರಿಟ್ ತಂಡವಾಗಿ ಗುರುತಿಸಿಕೊಂಡಿತ್ತು. 2013ರ ಬಳಿಕ ಪಾಕ್ ವಿರುದ್ಧ ನಾಲ್ಕನೇ ಪಂದ್ಯವನ್ನು ಗೆದ್ದುಕೊಂಡಿದೆ. ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು 5-1 ರಿಂದ ಮಣಿಸಿರುವ ಬೆಲ್ಜಿಯಂ ಆತ್ಮವಿಶ್ವಾಸದೊಂದಿಗೆ ಕ್ರಾಸ್ ಓವರ್ ಪಂದ್ಯಕ್ಕೆ ಸಜ್ಜಾಗಿತ್ತು.

ಏಕಪಕ್ಷೀಯವಾಗಿ ಸಾಗಿದ ಪಂದ್ಯದಲ್ಲಿ ಮೊದಲಾರ್ಧದ ಅಂತ್ಯಕ್ಕೆ ಬೆಲ್ಜಿಯಂ 3-0 ಮುನ್ನಡೆ ಸಾಧಿಸಿತು. 10ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ರನ್ನು ಗೋಲಾಗಿ ಪರಿವರ್ತಿಸಿದ ಹೆಂಡ್ರಿಕ್ಸ್ ಫ್ರಾನ್ಸ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ಮೂರು ನಿಮಿಷದ ಬಳಿಕ ಥಾಮಸ್ ಚಾರ್ಲಿಯರ್ ಬೆಲ್ಜಿಯಂ ಮುನ್ನಡೆ ದ್ವಿಗುಣಗೊಳಿಸಿದರು. ಸೆಡ್ರಿಕ್ ಚಾರ್ಲಿಯರ್ 27ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3-0ಗೆ ಏರಿಸಿದರು.

ದ್ವಿತೀಯಾರ್ಧದಲ್ಲಿ ಸೆಬಾಸ್ಟಿಯನ್ ಹಾಗೂ ಟಾಮ್ ಬೂನ್ ತಲಾ ಒಂದು ಗೋಲು ಗಳಿಸಿ ತಂಡವನ್ನು ಕ್ವಾರ್ಟರ್ ಫೈನಲ್‌ಗೆ ತಲುಪಿಸಿದರು. ಟೂರ್ನಿಯಲ್ಲಿ ಸೋಲಿನೊಂದಿಗೆ ಕೊನೆಗೊಳಿಸಿರುವ ಪಾಕ್ ಗಂಟುಮೂಟೆ ಕಟ್ಟಿದೆ.

ಬೆಲ್ಜಿಯಂ-5

<ಅಲೆಕ್ಸಾಂಡರ್ ಹೆಂಡ್ರಿಕ್ಸ್ 10ನೇ ನಿಮಿಷ

<ಥಾಮಸ್ ಬ್ರಿಲ್ಸ್ 13ನೇ ನಿಮಿಷ

<ಸೆಡ್ರಿಕ್ ಚಾರ್ಲಿಯರ್ 27ನೇ ನಿಮಿಷ

<ಸೆಬಾಸ್ಟಿಯನ್ ಡಾಕಿಯೆರ್ 35ನೇ ನಿಮಿಷ

<ಟಾಮ್ ಬೂನ್ 53ನೇ ನಿಮಿಷ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News