ಹೋಪ್ ಭರ್ಜರಿ ಶತಕ: ವಿಂಡೀಸ್ ಜಯಭೇರಿ

Update: 2018-12-11 18:51 GMT

ಢಾಕಾ, ಡಿ.11: ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶಾಯ್ ಹೋಪ್ ಅವರ ಭರ್ಜರಿ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶವನ್ನು 4 ವಿಕೆಟ್‌ಗಳಿಂದ ಮಣಿಸಿದೆ. ಇಲ್ಲಿನ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಎರಡನೇ ಅಂತರ್‌ರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ವಿಂಡೀಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಈ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ಬಾಂಗ್ಲಾ ಶಾಕೀಬ್-ಅಲ್-ಹಸನ್(65), ಮುಶ್ಫೀಕುರ್ರಹೀಂ(62) ಹಾಗೂ ತಮೀಮ್ ಇಕ್ಬಾಲ್(50) ಅವರ ಅಮೂಲ್ಯ ಅರ್ಧಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 255 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ವಿಂಡೀಸ್ ಪರ ಓಶಾನ್ ಥಾಮಸ್(54ಕ್ಕೆ 3) ಬಾಂಗ್ಲಾ ಹುಲಿಗಳ ಘರ್ಜನೆಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾದರು. ಕೆಮರ್ ರೋಚ್, ರೋಸ್ಟನ್ ಚೇಸ್, ಕೀಮೊ ಪಾಲ್, ದೇವೇಂದ್ರ ಬಿಶೂ ಹಾಗೂ ರೋವ್‌ಮನ್ ಪೊವೆಲ್ ತಲಾ ಒಂದೊಂದು ವಿಕೆಟ್ ಪಡೆದರು.

 256 ರನ್‌ಗಳ ಸವಾಲು ಬೆಂಬತ್ತಿದ ವಿಂಡೀಸ್‌ಗೆ ಆರಂಭದಲ್ಲೇ ಆಘಾತ ಕಾದಿತ್ತು. ಚಂದ್ರಪಾಲ್ ಹೇಮರಾಜ್ ಅವರು ಮೊಹಿದಿ ಹಸನ್ ಎಸೆತದಲ್ಲಿ ಎಲ್‌ಬಿಡಬ್ಲೂ ಬಲೆಗೆ ಬಿದ್ದರು. ಈ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ವಿಕೆಟ್ ಕೀಪರ್ ದಾಂಡಿಗ ಶಾಯ್ ಹೋಪ್ ಚೆಂಡನ್ನು ಮೂಲೆಮೂಲೆಗೆ ಅಟ್ಟಿ ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದರು. 144 ಎಸೆತ ಎದುರಿಸಿದ ಅವರು 12 ಬೌಂಡರಿ, ಮೂರು ಸಿಕ್ಸರ್‌ಗಳ ನೆರವಿನಿಂದ ಬರೋಬ್ಬರಿ 146 ರನ್ ಚಚ್ಚಿದರು. ಮರ್ಲಾನ್ ಸ್ಯಾಮುಯೆಲ್ಸ್(26) ಅಲ್ಪ ಕಾಣಿಕೆ ನೀಡಿದರು. ಕೊನೆಯ ಓವರ್‌ನ 4ನೇ ಎಸೆತದಲ್ಲಿ ವಿಂಡೀಸ್ ಗೆಲುವಿನ ಗುರಿ ತಲುಪಿತು. ಬಾಂಗ್ಲಾ ಪರ ಮುಸ್ತಫಿಝುರ್ರಹ್ಮಾನ್(63ಕ್ಕೆ 2) ಹಾಗೂ ರುಬೆಲ್ ಹುಸೇನ್(57ಕ್ಕೆ 2) ಬೌಲಿಂಗ್‌ನಲ್ಲಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್

►ಬಾಂಗ್ಲಾದೇಶ: 50 ಓವರ್‌ಗಳಲ್ಲಿ 7ವಿಕೆಟ್‌ಗೆ 255 (ಶಾಕೀಬ್ 65, ಮುಶ್ಫೀಕುರ್ರಹೀಂ 62, ತಮೀಮ್ ಇಕ್ಬಾಲ್ 50, ಥಾಮಸ್54ಕ್ಕೆ 3)

►ವೆಸ್ಟ್ ಇಂಡೀಸ್: 49.4 ಓವರ್‌ಗಳಲ್ಲಿ 6 ವಿಕೆಟ್‌ಗೆ 256 ( ಶಾಯ್ ಹೋಪ್ ಅಜೇಯ 146, ಸ್ಯಾಮುಯೆಲ್ಸ್ 26, ಮುಸ್ತಫಿಝುರ್ರಹ್ಮಾನ್ 63ಕ್ಕೆ 2,ರುಬೆಲ್ 57ಕ್ಕೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News