ಇಂಗ್ಲೆಂಡ್,ಆಸ್ಟ್ರೇಲಿಯ ಸೆಮಿ ಫೈನಲ್‌ಗೆ

Update: 2018-12-12 18:08 GMT

ಹಾಕಿ ವಿಶ್ವಕಪ್

ಭುವನೇಶ್ವರ, ಡಿ.12: ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನಕ್ಕೆ ಆಘಾತ ನೀಡಿದ ಇಂಗ್ಲೆಂಡ್ ತಂಡ 14ನೇ ಆವೃತ್ತಿಯ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿದೆ.

ಕಳಿಂಗ ಸ್ಟೇಡಿಯಂನಲ್ಲಿ ಬುಧವಾರ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅರ್ಜೆಂಟೀನವನ್ನು 3-2 ಅಂತರದಿಂದ ರೋಚಕವಾಗಿ ಮಣಿಸಿತು. ಶನಿವಾರ ನಡೆಯಲಿರುವ ಅಂತಿಮ-4ರ ಪಂದ್ಯದಲ್ಲಿ ಜರ್ಮನಿ ಅಥವಾ ಬೆಲ್ಜಿಯಂ ತಂಡವನ್ನು ಎದುರಿಸಲಿದೆ.

17ನೇ ನಿಮಿಷದಲ್ಲಿ ಅರ್ಜೆಂಟೀನಕ್ಕೆ ಮುನ್ನಡೆ ಬಿಟ್ಟುಕೊಟ್ಟಿದ್ದ ಇಂಗ್ಲೆಂಡ್ ಆನಂತರ ತಿರುಗೇಟು ನೀಡಿ ಟೂರ್ನಿಯ ಇತಿಹಾಸದಲ್ಲಿ ಸತತ ಮೂರನೇ ಬಾರಿ ಸೆಮಿ ಫೈನಲ್‌ನಲ್ಲಿ ಸ್ಥಾನ ಪಡೆದಿದೆ.

ಇಂಗ್ಲೆಂಡ್‌ನ ಪರ ಬಾರ್ರಿ ಮಿಡ್ಲ್‌ಟನ್(27ನೇ ನಿಮಿಷ), ವಿಲ್ ಕಲ್ನಾನ್(45ನೇ ನಿ.) ಹಾಗೂ ಹ್ಯಾರಿ ಮಾರ್ಟಿನ್(49ನೇ ನಿ.)ತಲಾ ಒಂದು ಫೀಲ್ಡ್ ಗೋಲು ಬಾರಿಸಿದರು. ಪರಾಜಿತ ಅರ್ಜೆಂಟೀನದ ಪರ ಗೊಂಝಾಲೊ ಪೆಲ್ಲಟ್ 17ನೇ ಹಾಗೂ 48ನೇ ನಿಮಿಷದಲ್ಲಿ ಅವಳಿ ಗೋಲು ಬಾರಿಸಿದರು.

2014ರಲ್ಲಿ ಕಂಚಿನ ಪದಕ ಜಯಿಸಿದ್ದ ಅರ್ಜೆಂಟೀನ ಹಲವು ಅವಕಾಶಗಳನ್ನು ಕೈಚೆಲ್ಲಿತು. ಉಭಯ ತಂಡಗಳು 45ನೇ ನಿಮಿಷದ ತನಕ 1-1 ಗೋಲು ಗಳಿಸಿ ಸಮಬಲ ಸಾಧಿಸಿದ್ದವು. ಕೊನೆಯ ಕ್ವಾರ್ಟರ್‌ನಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ಕಾಲ್ನನ್ ಇಂಗ್ಲೆಂಡ್‌ನ ಮುನ್ನಡೆಯನ್ನು 2-1ಕ್ಕೆ ಏರಿಸಿದರೆ, ಪೆಲ್ಲೆಟ್ 48ನೇ ನಿಮಿಷದಲ್ಲಿ 2-2ರಿಂದ ಸಮಬಲಕ್ಕೆ ತಂದರು. ಮಾರ್ಟಿನ್ 45ನೇ ನಿಮಿಷದಲ್ಲಿ ಗೆಲುವಿನ ಗೋಲು ಬಾರಿಸಿದರು.

ಅರ್ಜೆಂಟೀನ 17ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಪಡೆದಿತ್ತು. ಪೆಲ್ಲಟ್ ಶಕ್ತಿಶಾಲಿ ಫ್ಲಿಕ್ ಮೂಲಕ ತಂಡಕ್ಕೆ ಆರಂಭದಲ್ಲೇ ಮುನ್ನಡೆ ಒದಗಿಸಿಕೊಟ್ಟರು. 27ನೇ ನಿಮಿಷದಲ್ಲಿ ಗೋಲ್‌ಕೀಪರ್ ಜುಯಾನ್ ವಿವಾಲ್ಡಿ ಅವರನ್ನು ವಂಚಿಸಿ ಗೋಲು ಗಳಿಸಿದ ಮಿಡ್ಲ್‌ಟನ್ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News