ಪಿ.ವಿ ಸಿಂಧು ಶುಭಾರಂಭ

Update: 2018-12-12 18:17 GMT

ಗುವಾಂಗ್‌ರೊ, ಡಿ.12: ಒಲಿಂಪಿಕ್ಸ್ ಬೆಳ್ಳಿ ವಿಜೇತೆ ಪಿ.ವಿ.ಸಿಂಧು ವರ್ಲ್ಡ್‌ಟೂರ್ ಫೈನಲ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ವಿಶ್ವದ ನಂ.2 ಹಾಗೂ ಟೂರ್ನಿಯ ಹಾಲಿ ಚಾಂಪಿಯನ್ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಪ್ರಬಲ ಹೋರಾಟದ ಮಧ್ಯೆ ಮಣಿಸಿ ಶುಭಾರಂಭ ಮಾಡಿದ್ದಾರೆ.

ಬುಧವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ 24-22, 21-15 ಗೇಮ್‌ಗಳ ಅಂತರದಿಂದ ಯಮಗುಚಿ ಅವರಿಗೆ ಸೋಲಿನ ರುಚಿ ತೋರಿಸಿದರು. ದುಬೈನಲ್ಲಿ ನಡೆದಿದ್ದ ಇದೇ ಟೂರ್ನಿಯ ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿ ಗಮನಸೆಳೆದಿದ್ದರು ಸಿಂಧು. ಟೂರ್ನಿಯಲ್ಲಿ ಮೂರನೇ ಬಾರಿ ಸ್ಪರ್ಧಿಸಿರುವ ಅವರು, ಪಂದ್ಯದ ಹಲವು ಬಾರಿ ಹಿಂದೆ ಬಿದ್ದರೂ ಪಂದ್ಯವನ್ನು ಬಿಟ್ಟು ಕೊಡಲಿಲ್ಲ. ಯಮಗುಚಿ ವಿರುದ್ಧ 9-4 ಅಂತರದ ಹೆಡ್ ಟು ಹೆಡ್ ಗೆಲುವಿನ ದಾಖಲೆ ಹೊಂದಿರುವ ಸಿಂಧು, ಬಹಳ ಎಚ್ಚರಿಕೆಯ ಆಟವಾಡಿ ಯಶಸ್ಸು ಕಂಡರು. ಪುರುಷರ ಸಿಂಗಲ್ಸ್ ವಿಭಾಗದಲ್ಲಿ 7ನೇ ಶ್ರೇಯಾಂಕದ ಭಾರತದ ಸಮೀರ್ ವರ್ಮಾ ನಿರಾಸೆ ಅನುಭವಿಸಿದ್ದಾರೆ. ಬಿ ಗುಂಪಿನ ತಮ್ಮ ಆರಂಭಿಕ ಪಂದ್ಯವನ್ನು ಅವರು, 18-21, 6-21 ಗೇಮ್‌ಗಳ ಅಂತರದಲ್ಲಿ ವಿಶ್ವ ನಂ. 1 ಜಪಾನ್‌ನ ಕೆಂಟೊ ಮೊಮೊಟಾ ಅವರಿಗೆ ಕೈಚೆಲ್ಲಿದರು. ಕೇವಲ 35 ನಿಮಿಷದಲ್ಲಿ ಈ ಪಂದ್ಯ ಅಂತ್ಯ ಕಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News