ಇಂದು ಭಾರತ-ಹಾಲೆಂಡ್ ಕ್ವಾ. ಫೈನಲ್‌

Update: 2018-12-12 18:35 GMT

ಭುವನೇಶ್ವರ, ಡಿ.12: ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಗುರುವಾರ ಇಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ಭಾರತ ತಂಡ ಬಲಿಷ್ಠ ಹಾಲೆಂಡ್ ತಂಡವನ್ನು ಎದುರಿಸಲಿದೆ. ಭಾರೀ ನಿರೀಕ್ಷೆಯ ಭಾರ ಹೊತ್ತಿರುವ ಭಾರತಕ್ಕೆ 43 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡುವುದು ಸುಲಭದ ಮಾತಲ್ಲ. ಶ್ರೀಮಂತ ಹಾಕಿ ಪರಂಪರೆಯಿಂದ ಬೀಗುತ್ತಿರುವ ಭಾರತ 1975ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಕೊನೆಯ ಬಾರಿ ಸೆಮಿ ಫೈನಲ್‌ಗೆ ತಲುಪಿತ್ತು. ಆ ವರ್ಷವೇ ಚೊಚ್ಚಲ ವಿಶ್ವಕಪ್‌ನ್ನು ಎತ್ತಿಹಿಡಿದಿತ್ತು.

ವಿಶ್ವಕಪ್ ಗೆದ್ದ ಬಳಿಕ ದೇಶದಲ್ಲಿ ಹಾಕಿ ಉನ್ನತಿ ಕಂಡಿತ್ತು. ಆದರೆ, ಬಲಿಷ್ಠ ಡಚ್ಚರ ವಿರುದ್ಧ ಇತಿಹಾಸವು ಆತಿಥೇಯರ ನೆರವಿಗೆ ಬರಲಾರದು. ಭಾರತೀಯರು ಈ ತನಕ ವಿಶ್ವಕಪ್‌ನಲ್ಲಿ ಹಾಲೆಂಡ್‌ನ್ನು ಮಣಿಸಿಲ್ಲ. ಈ ಹಿಂದೆ ನಡೆದ ವಿಶ್ವಕಪ್‌ನ ಆರು ಬಾರಿಯ ಮುಖಾಮುಖಿಯಲ್ಲಿ ಹಾಲೆಂಡ್ ತಂಡ ಭಾರತವನ್ನು ಐದು ಬಾರಿ ಮಣಿಸಿತ್ತು. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು. ಒಂದು ವೇಳೆ ಮನ್‌ಪ್ರೀತ್ ಸಿಂಗ್ ಬಳಗ ಗುರುವಾರ ಡಚ್ಚರನ್ನು ಸೋಲಿಸಿದರೆ ಸೋಲಿನ ಸರಪಳಿ ಮುರಿದುಬೀಳುವುದಲ್ಲದೆ ಇತಿಹಾಸ ಮರು ರಚಿಸಲ್ಪಡಲಿದೆ. ಭಾರತದ ಹಾಕಿಯ ಸುವ್ವರ್ಣ ಅಧ್ಯಾಯದಲ್ಲಿ ಆಟಗಾರರ ಹೆಸರು ಮೂಡಿಬರಲಿದೆ.

ಈಗಿನ ಫಾರ್ಮ್ ಹಾಗೂ ರ್ಯಾಂಕಿಂಗ್‌ನ್ನು ಗಮನಿಸಿದರೆ, ಉಭಯ ತಂಡಗಳ ನಡುವೆ ಹೆಚ್ಚೇನೂ ವ್ಯತ್ಯಾಸ ಕಾಣುತ್ತಿಲ್ಲ. ಈಗಿನ ವಿಶ್ವ ರ್ಯಾಂಕಿಂಗ್‌ನಲ್ಲಿ ಹಾಲೆಂಡ್ 4ನೇ ಸ್ಥಾನದಲ್ಲೂ, ಭಾರತ 5ನೇ ಸ್ಥಾನದಲ್ಲಿದೆ.

ಭಾರತ ಹಾಗೂ ಹಾಲೆಂಡ್ ಕಳೆದ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮುಖಾಮುಖಿಯಾಗಿದ್ದು ಆ ಪಂದ್ಯ 1-1ರಿಂದ ಡ್ರಾನಲ್ಲಿ ಕೊನೆಗೊಂಡಿತ್ತು.

ಒಟ್ಟಾರೆ ಹೆಡ್-ಟು-ಹೆಡ್ ದಾಖಲೆಯಲ್ಲಿ ಹಾಲೆಂಡ್ ಮುಂದಿದೆ. ಉಭಯ ತಂಡಗಳು ಈ ತನಕ 105 ಪಂದ್ಯಗಳನ್ನು ಆಡಿವೆ. ಭಾರತ 33ರಲ್ಲಿ ಜಯ ಸಾಧಿಸಿದ್ದರೆ, 48ರಲ್ಲಿ ಸೋಲುಂಡಿದೆ. ಉಳಿದ ಪಂದ್ಯಗಳು ಡ್ರಾಗೊಂಡಿವೆ.

2013ರ ಬಳಿಕ ಎರಡೂ ತಂಡಗಳು 9 ಬಾರಿ ಮುಖಾಮುಖಿಯಾಗಿವೆ. ತಲಾ 4 ಪಂದ್ಯಗಳನ್ನು ಜಯಿಸಿದ್ದು, ಒಂದು ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ.

ಭಾರತ ಹಾಗೂ ಹಾಲೆಂಡ್ ತಂಡಗಳು ಟೂರ್ನಿಯ ಗ್ರೂಪ್ ಹಂತದಲ್ಲಿ ಸಾಕಷ್ಟು ಗೋಲುಗಳನ್ನು ಗಳಿಸಿವೆ. ಭಾರತ 12 ಗೋಲುಗಳನ್ನು ಗಳಿಸಿದ್ದರೆ, ಮೂರು ಗೋಲುಗಳನ್ನು ಬಿಟ್ಟುಕೊಟ್ಟಿತ್ತು. ಡಚ್ಚರು 18 ಗೋಲುಗಳನ್ನು ಹೊಡೆದಿದ್ದು, 5 ಗೋಲು ಬಿಟ್ಟುಕೊಟ್ಟಿದ್ದಾರೆ.

ನಾಯಕ ಬಿಲ್ಲಿ ಬಾಕರ್, ಸೆವ್ ವ್ಯಾನ್ ಅಸ್ಸ್, ಜೆರೊನ್ ಹೆರ್ಟ್‌ಬರ್ಗರ್, ಮೈಕ್ರೊ ಪ್ರುಜ್‌ಸರ್,ರಾಬರ್ಟ್ ಕೆಂಪರ್‌ಮನ್, ಥಿಯರಿ ಬ್ರಿಂಕ್‌ಮನ್ ಮಿಡ್‌ಫೀಲ್ಡ್‌ನಲ್ಲಿ ತಂಡಕ್ಕೆ ಬಲ ತುಂಬುತ್ತಿದ್ದಾರೆ. ಭಾರತ ಸ್ಟ್ರೈಕರ್‌ಗಳಾದ-ಮನ್‌ದೀಪ್ ಸಿಂಗ್, ಸಿಮ್ರನ್‌ಜೀತ್ ಸಿಂಗ್, ಲಲಿತ್ ಉಪಾಧ್ಯಾಯ ಹಾಗೂ ಆಕಾಶ್‌ದೀಪ್ ಸಿಂಗ್‌ರನ್ನು ಹೆಚ್ಚು ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News