ಹಳ್ಳಿ ಬದುಕಿನ ಪ್ರಾಣಿ ಕತೆಗಳು!

Update: 2018-12-13 06:10 GMT

ನಿಖಿಲ್ ಕೋಲ್ಪೆ

ಹಿರಿಯ ಪತ್ರಕರ್ತರಾಗಿರುವ ನಿಖಿಲ್ ಕೋಲ್ಪೆ ಬದುಕಿನ ಸೂಕ್ಷ್ಮಗಳನ್ನು ತನ್ನದಾಗಿಸಿಕೊಂಡು ಬರೆಯುವವರು. ಈ ನೆಲದ ಸಾಂಸ್ಕೃತಿಕ ಸೊಗಡನ್ನು ತನ್ನ ಬರಹಗಳಲ್ಲಿ ತುಂಬಿಕೊಂಡವರು. ಜನವಾಹಿನಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ದುಡಿದಿರುವ ಇವರು, ಹಲವು ವೆಬ್‌ಸೈಟ್‌ಗಳಲ್ಲಿ ಅಂಕಣಬರಹಗಳನ್ನು ಬರೆಯುತ್ತಿದ್ದಾರೆ.

‘‘ಹೋಯ್! ಬೇಗ ಓಡಿಬನ್ನಿರಾ! ಬೇಗ ಬೇಗ!’’ ಒಂದು ಬೇಸಗೆಯ ಸಂಜೆ ಹೊತ್ತು- ಮನೆಯಂಗಳದಲ್ಲಿ ಆಟವಾಡುತ್ತಿದ್ದ ನಾನು ಮತ್ತು ನನ್ನ ತಮ್ಮ, ಮನೆಯೆದುರು ಇರುವ, ವಿಶಾಲ ಬೈಲಿನ ಆಚೆ ಹರಿಯುವ ತೋಡಿನ ಅಂಚಿನಲ್ಲಿ ನಿಂತು ನಮ್ಮ ತಂದೆ ಉತ್ತೇಜಿತರಾಗಿ ಕರೆಯುತ್ತಿದ್ದರು. ಇಬ್ಬರೂ ಓಡಿದೆವು. ಅಲ್ಲಿ ಹರಿಯುವ ತೋಡಿಗೆ ಹತ್ತಿರದ ಮೂರ್ನಾಲ್ಕು ಮನೆಯವರು ಮಣ್ಣಿನ ಕಟ್ಟೆ ಕಟ್ಟಿ ನೀರು ನಿಲ್ಲಿಸುವುದು ಪ್ರತೀ ವರ್ಷದ ಕಾಯಕ. ಹೋಗಿ ನೋಡುವುದೇನು!. ನೀರಿನ ಅಂಚಿನಲ್ಲಿ ಒಂದು ಭಾರೀ ಗಾತ್ರದ ಕೇರೆ ಹಾವು ನೀರಿನೊಳಗಿದ್ದ ಅಷ್ಟೇ ದೊಡ್ಡ ಗಾತ್ರದ ‘ಒಳ್ಳೆ’ ಎಂದು ಕರೆಯುವ ಹಾವನ್ನು ನುಂಗಲು ಹೊರಟಿದೆ. ತಾನೇನು ಕಡಿಮೆ ಎಂಬಂತೆ ಈ ಒಳ್ಳೆ ಹಾವು ಕೇರೆಯನ್ನು ಹಿಡಿದುಕೊಂಡಿದೆ.! ನೀರಿನೊಳಗೆ ಬಲಶಾಲಿಯಾದ ‘ಒಳ್ಳೆ’ ಕೇರೆಯನ್ನು ನೀರಿಗೆಳೆಯಲು ಹವಣಿಸುತ್ತಿದ್ದರೆ, ಕೇರೆ ಅದನ್ನು ದಡಕ್ಕೆ ಎಳೆಯಲು ಹೊರಳಾಡುತ್ತಿದೆ. ಒಂದು ಗಂಟೆಗೂ ಹೆಚ್ಚು ಕಾಲ ಈ ಉಗ್ರ ಕಾದಾಟ ನೋಡಿದೆವು. ಮುಸ್ಸಂಜೆ ದಾಟಿ ಕತ್ತಲಾಗುವ ತನಕ ಯಾರಿಗೂ ಜಯ ಸಿಗುವ ಸಾಧ್ಯತೆ ಕಂಡು ಬರಲಿಲ್ಲ ! ನಾವು ಬಾಲಕರಿಬ್ಬರಿಗೆ ಬೆರಗು!

ಅನಿವಾರ್ಯವಾಗಿ ಮನೆಗೆ ಬಂದೆವು. ಆದರೆ ನನ್ನ ತಲೆಯಲ್ಲಿ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಅಷ್ಟು ದೊಡ್ಡ ಗಾತ್ರದ ‘ಕೇರೆ’ ಹಾವನ್ನಾಗಾಲೀ ‘ಒಳ್ಳೆ’ ಎಂಬ ನೀರು ಹಾವನ್ನಾಗಲೀ ನಾನು ಈ ತನಕ ಮತ್ತೆ ಕಂಡಿಲ್ಲ. ಬಹುಷ ಎಂಟು-ಒಂಬತ್ತು ವರ್ಷದ ನನ್ನ ಪುಟ್ಟ ಕಣ್ಣುಗಳಿಗೆ ಆ ಹಾವುಗಳು ಭಾರೀ ದೊಡ್ಡದಾಗಿ ಕಂಡಿದ್ದವೋ- ಈಗ ಹೇಳುವುದು ಕಷ್ಟ. ಆದರೆ ಪ್ರಶ್ನೆ ಮಾತ್ರ ಕಗ್ಗಂಟಾಗಿದೆ. ಎರಡು ಹಾವುಗಳು ಬಾಲದ ಕಡೆಯಿಂದ ಒಂದನ್ನೊಂದು ನುಂಗಲು ಆರಂಭಿಸಿದರೆ ಅದು ಅಂತ್ಯ ಕಾಣುವುದು ಹೇಗೆ ? ಯಾವ ಹಾವು ಯಾವುದರ ಹೊಟ್ಟೆ ಸೇರುತ್ತದೆ? ತನ್ನನ್ನು ತಾನೇ ತಿಂದಂತಾಗಲಿಲ್ಲವೇ? ಮುಂದೊಂದು ದಿನ ನಾನು ಮುಂಬೈಗೆ ಹೋಗಿ ನನ್ನ ದೊಡ್ಡಪ್ಪ ಎಸ್.ಬಿ.ಕೋಲ್ಪೆಯವರ ವಾರ ಪತ್ರಿಕೆ ಸೇರಿದಾಗ ವಿಶೇಷಾಂಕವೊಂದಕ್ಕೆ ಕೋಮುವಾದದ ಕುರಿತು ಒಂದು ವ್ಯಂಗ್ಯ ಚಿತ್ರ ರಚಿಸುವಂತೆ ಹೇಳಿದರು. ನಾನು ಎರಡು ಹಾವುಗಳು ಒಂದನ್ನೊಂದು ನುಂಗುವ ಚಿತ್ರ ಬರೆದು, ‘How it ends' ಎಂದೇನೋ ಶೀರ್ಷಿಕೆ ಕೊಟ್ಟಿದ್ದೆ. ನನ್ನ ಈ ‘ಭಯಾನಕ’ ಐಡಿಯಾವನ್ನು ಎಲ್ಲರೂ ಹೊಗಳಿದಾಗ ನನಗೆ ಹೆಮ್ಮೆಯಾಗಿತ್ತು. ಆದರೆ ಈ ಕಲ್ಪನೆ ಭಾರೀ ಪುರಾತನವಾಗಿದ್ದು, ಅದು ಅನಂತಕ್ಕೆ ಸಂಕೇತವಾಗಿದೆ ಎಂದು ಗೊತ್ತಾದದ್ದು ಯಾಕೋ ಈ ಘಟನೆ ನೆನಪಾಗಿ ಗೂಗಲ್‌ನಲ್ಲಿ ಸರ್ಚ್ ಕೊಟ್ಟಾಗ! ಸಾವು ಬದುಕಿನ ಈ ಹೋರಾಟ ನಿರಂತರ ಅಲ್ಲವೇ?

ಬದುಕಿ ಉಳಿಯುವ ಪ್ರಕೃತಿಯ ಹೋರಾಟದಂತೆಯೇ ಬದುಕಿಸಲು ಯತ್ನಿಸುವ ಮನುಷ್ಯ ಪ್ರಯತ್ನವೂ ಕೆಲವೊಮ್ಮೆ ಹೇಗೆ ವಿಫಲವಾಗುತ್ತದೆ ಎಂಬುದಕ್ಕೆ ಉದಾಹರಣೆಯಾದ ಇನ್ನೊಂದು ಘಟನೆ ಸರಿ ಸುಮಾರು ಇದೇ ಹೊತ್ತಿಗೆ ನಡೆಯಿತು. ಮೇಲೆ ಹೇಳಿದ ನೀರಿನ ತೋಡಿನಾಚೆ ನಮಗೊಂದು ಪುಟ್ಟ ತೋಟವಿತ್ತು. ಅದರಲ್ಲಿ ಕೆಲವು ಅಡಕೆ, ಬಾಳೆ ಮತ್ತು ಕೋಕೋ ಗಿಡಗಳಿದ್ದವು. ಒಂದು ಬೆಳಗ್ಗೆ ನಮ್ಮ ತಂದೆಯವರು ಒಂದು ಅಚ್ಚರಿಯನ್ನು ತಂದರು. ಅದೊಂದು ಪುಟ್ಟ ಬಾವಲಿಯಾಗಿತ್ತು. ಬಾವಲಿ ನಮಗೇನೋ ಹೊಸದಲ್ಲ. ಮುಸ್ಸಂಜೆ ಹೊತ್ತಿಗೆ ಸಂಚಾರ ಹೊರಡುವ ರಕ್ಕಸ ಗಾತ್ರದ ಬಾವಲಿಯ ದಂಡುಗಳನ್ನೇ ನೋಡಿದ್ದೆವು. ಅದೇ ರೀತಿ ಚಿಕ್ಕ ಗಾತ್ರದ-ತುಳುವಿನಲ್ಲಿ ‘ಇರೆ ಬಾವಲಿ’ ಎಂದರೆ ಎಲೆ ಬಾವಲಿ ಎಂದು ಕರೆಯುವ ಬಾವಲಿಗಳು ಕೆಲವೊಮ್ಮೆ ಮನೆಯೊಳಗೆ ಹಾರಾಡಿ ಸೊಳ್ಳೆಗಳನ್ನು ಹಿಡಿಯುವುದನ್ನು ನೋಡಿದ್ದೆವು. ಇದು ಮನೆಯೊಳಗೆ ಹಾರಾಡಿದರೆ ಮನೆಯಲ್ಲಿ ತೊಟ್ಟಿಲು ತೂಗುತ್ತದೆ ಎಂದು ಅಜ್ಜಿಯರು ಹೇಳುತ್ತಿದ್ದುದರಿಂದ ಹಾಗೇನಾದರೂ ಬಾವಲಿ ಹಾರಿದರೆ ನಮಗೆ ತಮ್ಮನೋ ತಂಗಿಯೋ ಬರುವ ನಿರೀಕ್ಷೆಯಲ್ಲಿರುತ್ತಿದ್ದೆವು.

ಈ ಬಾವಲಿ ಇಲಿಮರಿಯೊಂದಕ್ಕೆ ರೆಕ್ಕೆ ಜೋಡಿಸಿದಂತೆ ಇತ್ತು. ಆದರೆ ಬಣ್ಣ ಮಾತ್ರ ಕಡು ಕೆಂಪು. ಆ ಬಣ್ಣದ ಬಾವಲಿಯನ್ನು ನಾನು ಮತ್ತೆ ನೋಡಿಲ್ಲ. ನಮಗೆ ಸಂಭ್ರಮವೇ ಸಂಭ್ರಮ. ಆ ದಿನ ನಾವು ಶಾಲೆಗೂ ಹೋಗಲಿಲ್ಲ. ಶಾಲೆಯಲ್ಲಿ ಕಲಿಯುವಷ್ಟೇ ಹೊರಗೆ ಕಲಿಯುವುದೂ ಸಾಕಷ್ಟಿದೆ ಎಂದು ನಮ್ಮ ತಂದೆಯವರು ಭಾವಿಸಿದ್ದರಿಂದ ಶಾಲೆಗೆ ಹೋಗಬೇಕೆಂದು ಯಾರೂ ಒತ್ತಾಯವನ್ನೂ ಮಾಡಲಿಲ್ಲ. ಹಾರಲಾಗದ ಈ ಬಾವಲಿಗೆ ತಿನ್ನಿಸುವುದು ಏನು ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಅದು ಬಾಳೆ ಗಿಡದಲ್ಲಿ ಸಿಕ್ಕಿದುದರಿಂದ ಅದು ಬಾಳೆಯ ಮಕರಂದ ಕುಡಿಯುತ್ತಿರಬಹುದು. ಆದುದರಿಂದ ಜೇನು ಇದಕ್ಕೆ ಸೂಕ್ತ ಎಂದು ಭಾವಿಸಿ ಪೆನ್ನಿಗೆ ಶಾಯಿ ಹಾಕುವ ಪಿಲ್ಲರ್‌ನಲ್ಲಿ ಜೇನು ಕುಡಿಸಿದೆವು. ಅದನ್ನು ಬೆಕ್ಕುಗಳು ಹಿಡಿಯದಂತೆ ಇರಿಸುವುದು ಎಲ್ಲಿ? ನನ್ನ ಅಜ್ಜನದೊಂದು ದೊಡ್ಡ ಪುಸ್ತಕದ ಕವಾಟು ಅದರ ಮೇಲಿನ ಎರಡು ಹಂತಗಳಿಗೆ ಗಾಜುಗಳಿದ್ದವು. ಸಂಜೆಯ ಹೊತ್ತಿಗೆ ಈ ಕೆಂಪು ಬಾವಲಿಯನ್ನು ಅದರೊಳಗೆ ಇಟ್ಟು ರಾತ್ರಿ ಖರ್ಚಿಗೆ ಇರಲಿ ಎಂದು ಒಂದು ಚಿಕ್ಕ ತಟ್ಟೆಯಲ್ಲಿ ಜೇನನ್ನು ಇಟ್ಟು ನಿದ್ದೆ ಹೋದೆವು. ರಾತ್ರಿ ಕನಸಿನಲ್ಲಿ ಕೆಂಪು ಬಾವಲಿಯ ಚಂದಮಾಮ ಕತೆಗಳು!

ಬೆಳ್ಳಂಬೆಳಗ್ಗೆ ಎದ್ದು ಕೆಂಪು ಬಾವಲಿಯ ದರ್ಶನಕ್ಕೆಂದು ಕಪಾಟು ತೆರೆದು ನೋಡದಿರೆ ಬಾವಲಿಯನ್ನು ಅಸಂಖ್ಯಾತ ಇರುವೆಗಳು ಮುತ್ತಿಕೊಂಡು ಹೊತ್ತಯ್ಯಲು ದಾರಿ ಹುಡುಕುತ್ತಿವೆ. ಜೇನು ಸಿಹಿ ಇದೆಯೆಂಬುದೇನೋ ನಿಜ. ಸಿಹಿ ಇರುವಲ್ಲೇ ಇರುವೆಗಳೂ ಬರುತ್ತವೆ ಎಂಬುದು ನಿಜವಲ್ಲವೇ? ಆದರೆ ಈ ಇರುವೆಗಳು ಸಿಹಿ ಜೇನನ್ನು ಕಡೆಗಣಿಸಿ ಮಾಂಸಾಹಾರಕ್ಕೆ ಮನಸ್ಸು ಮಾಡಿದ್ದವು. ತಿಳಿಯದೇ ಮಾಡಿದ ಉಪಕಾರವೂ ಅಪಕಾರವಾದೀತೆಂದೂ ಗೊತ್ತಾದದ್ದು ಆಗಲೇ! ಕಣ್ಣೀರಿನೊಂದಿಗೆ ಬಾವಲಿಗೆ ವಿದಾಯ ಹೇಳಿದೆವು. ಕಣ್ಣಿದ್ದರೂ ಕಾಣದ ಕಿವಿಯಿಂದ ನೋಡುವ ವಿಚಿತ್ರ ಜೀವಿಯಾದ ಬಾವಲಿ ಒಂದು ಅನುಪಮ ವಿಸ್ಮಯವಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಈ ಬಾವಲಿಗಳು ನನ್ನ ತಾತ್ವಿಕ ಸಿಟ್ಟಿಗೆ ಕಾರಣವಾಗಿದೆ. ನಮ್ಮ ಮನೆಯಂಗಳದಲ್ಲೇ ಒಂದು ಚಿಕ್ಕು (ಸಪೋಟ) ಮರ ಹಾಗೂ ಹಿತ್ತಲಲ್ಲಿ ಪೇರಳೆ ಮರಗಳಿವೆ. ಚಿಕ್ಕು ಮರವಂತೂ ದೊಡ್ಡ ದೊಡ್ಡ ಸಿಹಿಯಾದ ಹಣ್ಣು ಬಿಡುತ್ತದೆ. ಈ ಹಣ್ಣಿನಲ್ಲಿ ಚೂಪು ಮುಳ್ಳಿನಂತಹ ರಚನೆ ಇರುತ್ತದೆ. ಈ ಮುಳ್ಳು ಉದುರದೆ ಹಣ್ಣು ಕೊಯ್ದರೆ ರುಚಿ ಇರುವುದಿಲ್ಲ. ಕೊಯ್ಯುವಾಗ ನೆಲಕ್ಕೆ ಬಿದ್ದರೂ ಹಣ್ಣಾಗದೆ ಕಲ್ಲಿನಂತೆ ಗಟ್ಟಿಯಾಗಿ ಬಿಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಚಿಕ್ಕು ಮರದ ಕೆಳಗೆ ಈ ಬಾವಲಿಗಳು ಅರೆಬರೆ ತಿಂದು ಕೆಳಗೆ ಉದುರಿಸಿದ ಹಣ್ಣುಗಳ ಒಂದು ಹಾಸಿಗೆಯೇ ನಿರ್ಮಾಣವಾಗುತ್ತದೆ. ಅಂಗಳದಲ್ಲಿ ಹಾದು ಹೋಗುವವರೆಲ್ಲಾ ‘ಅಯ್ಯೋ’ ಎಂದು ಬಾವಲಿಗೆ ಶಾಪ ಹಾಕುವವರೇ! ಪಾಪ, ಪ್ರಾಣಿ ಅದೂ ಬದುಕಿಕೊಳ್ಳಲಿ ಎಂದು ಬಿಟ್ಟರೆ, ಅರೆ ಬರೆ ತಿಂದು, ಕೊರೆದು, ಪರಚಿ ಉದುರಿಸಿ ಉಳಿದವರೂ ತಿನ್ನದಂತೆ ಮಾಡುವುದೆಂದರೇನು? ಆದರೆ, ಈ ಬಾವಲಿಗಳಿಗೆ ಮರಣ ದಂಡನೆ ವಿಧಿಸುವ ಮನಸ್ಸು ಈ ತನಕ ಬಂದಿಲ್ಲ.

ಆದರೆ, ಎಲ್ಲರೂ ಹಾಗಿರುವುದಿಲ್ಲವಲ್ಲ! ಕರಾವಳಿಯಲ್ಲಿ ಬಾವಲಿಯನ್ನೂ ತಿನ್ನುತ್ತಾರೆ. ಬಂಟ್ವಾಳ ತಾಲೂಕಿನ ನರಿಕೊಂಬು ಮತ್ತು ಶಂಭೂರು ಎಂಬ ಎರಡು ಗ್ರಾಮಗಳು ತಾಳೆ ಮರದ ಶೇಂದಿಗೆ ಬಹಳ ಪ್ರಖ್ಯಾತ. ಎಲ್ಲಿ ನೋಡಿದರಲ್ಲಿ ತಾಳೆ ಮರಗಳು. ಹಾಗೆಯೇ ಮೂರ್ತೆ ಕಟ್ಟಿ ಶೇಂದಿ ಇಳಿಸುವ ಬಿಲ್ಲವರು ಬಹುಸಂಖ್ಯಾತರು. ಈಗ ಈ ತಾಳೆ ಮರಗಳನ್ನು ಅಲ್ಲಿ-ಇಲ್ಲಿ ಎಣಿಸಬೇಕಷ್ಟೇ! ಹೆಚ್ಚಿನವು ಮನೆಯ ಮಾಡುಗಳ ಪಕ್ಕಾಸುಗಳಾಗಿ ಮಲಗಿವೆ. ಈ ಬಾವಲಿಗಳಿಗೂ ಶೇಂದಿ ಕುಡಿಯುವ ಹುಚ್ಚು! ದಿನಕ್ಕೆರಡು ಬಾರಿ ಭಾರೀ ಎತ್ತರಕ್ಕೆ ಏರಿ ಇಳಿಯುವ ಮೂರ್ತೆದಾರರ ಎದೆ ಧಸಕ್ಕೆನ್ನುವಂತೆ ಮರದಲ್ಲಿ ಕಟ್ಟಿದ ಮಡಕೆ (ಕುಜಿಲ್) ಖಾಲಿ ಮಾಡುವ ಬಾವಲಿಗಳಿಗೆ ಕೆಲವೊಮ್ಮೆ ಕತ್ತರಿ ಇಡುತ್ತಾರೆ. ಬಿದ್ದ ಬಾವಲಿಗಳು ಕೆಲವೊಮ್ಮೆ ಶೇಂದಿ ಜೊತೆಗೆ ಚಾಕಣ ಆಗುತ್ತವೆ. ನಮ್ಮ ಮನೆಯ ಹತ್ತಿರವೇ ಒಂದು ಮುಳಿ ಹುಲ್ಲಿನ ಗುಡಿಸಲಲ್ಲಿ ಶೇಂದಿ ಮಾರುತ್ತಿದ್ದರು. ಅದು ನನ್ನ ಗೆಳೆಯರದ್ದು. ಅವರಲ್ಲಿ ಒಬ್ಬನಾದ ಕಿಟ್ಟ ಯಾನೆ ಕೃಷ್ಣಪ್ಪ ಹಾವು ಕಚ್ಚಿ ಸತ್ತ ಅಪರೂಪದ ಘಟನೆಗೆ ಬಲಿಯಾದದನ್ನು ದುಃಖದಿಂದ ಸ್ಮರಿಸಬೇಕು. ಇಲ್ಲಿ ಮೂರ್ತೆ ಮಾಡುವವರೊಬ್ಬರು ಈ ಬಾವಲಿಗಳ ಹಾವಳಿಗೆ ಬೇಸತ್ತು ಒಂದು ಕತ್ತರಿ ಇಟ್ಟರು. ಅದಕ್ಕೊಂದು ದಿನ ಭಾರೀ ಗಾತ್ರದ ಬಾವಲಿ ಬಿತ್ತು. ಈ ಬಾವಲಿಗಳನ್ನು ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಅಲ್ಲಿಗೆ ಬರುವ ಕುಡುಕರೆಲ್ಲಾ ಸೇರಿ ‘ಚಾಕಣ’ ಮಾಡಲು ನಿರ್ಧರಿಸಿ ವಂತಿಗೆ ಹಾಕಿ ಮಸಾಲೆ ಸಾಮಾನು ತಂದರು. ನಾನೂ ಈ ಬಾವಲಿಯ ರುಚಿ ನೋಡೊಣ ಎಂದು ಇದ್ದೆ. ನಡುವೆ ನಾನು ಈ ಬಾವಲಿಯನ್ನು ಹಸನು ಮಾಡುವಲ್ಲಿಗೆ ಹೋದೆ. ಅಲ್ಲಿ ಕೆಲಸ ಮಗಿದು ಒಬ್ಬಾತ ಈ ಬಾವಲಿಯನ್ನು ಕತ್ತಿನಲ್ಲಿ ಹಿಡಿದು ಎತ್ತಿ ಹಿಡಿದಿದ್ದ. ಅದನ್ನು ಕಂಡು ಹೊಟ್ಟೆಯಲ್ಲಿದ್ದದ್ದೆಲ್ಲ ಬಾಯಿಗೆ ಬಂದಂತಾಗಿತ್ತು. ಯಾಕೆಂದರೆ ಅದು ಆಗ ತಾನೆ ಹುಟ್ಟಿದ ಮಗುವಿನಂತಿತ್ತು. ಕೆಲವೇ ದಿನಗಳ ಹಿಂದೆ ನಾನು ನನ್ನ ಮೊದಲ ಮಗುವಿನ ಜನನಕ್ಕಾಗಿ ಆಸ್ಪತ್ರೆಯಲ್ಲಿ ಕಾಯುತ್ತಿದ್ದಾಗ ಇದೇ ದೃಶ್ಯ ನೋಡಿದ್ದೆ. ಅಲ್ಲಿ ನರ್ಸ್ ಒಬ್ಬರು ನನ್ನ ಮಗುವನ್ನು ಹೀಗೆಯೇ ಕತ್ತಿನಲ್ಲಿ ಎತ್ತಿ ಹಿಡಿದಿದ್ದರು! ಅಲ್ಲಿಗೇ ಬಾವಲಿ ಮಾಂಸಕ್ಕೆ ವಿದಾಯ ಹೇಳಿದೆ.

ಈ ಗಡಂಗುಗಳಲ್ಲಿ ಆಮೆಯ ಮಾಂಸವನ್ನೂ ಮಾಡುತ್ತಾರೆ. ಹಿಂದೆ ಕೊರಗ ಜನಾಂಗದವರು ಮತ್ತು ಕ್ರೈಸ್ತರು ಮಾತ್ರ ಆಮೆ ಮಾಂಸ ತಿನ್ನುತ್ತಿದ್ದರು. ನಮ್ಮ ಮನೆಯ ಜಾಗದಲ್ಲಿಯೇ ಒಂದು ಕೊರಗ ಕುಟುಂಬ ವರ್ಷಾಂತರಗಳಿಂದ ತಾತ್ಕಾಲಿಕ ಗುಡಿಸಲು ಕಟ್ಟಿ ವಾಸವಾಗಿತ್ತು. ಅವರು ಹಲವು ಮಂದಿ ಮಕ್ಕಳು. ಅವರಲ್ಲೊಬ್ಬ ಬಲ್ಲು ಎಂಬಾತ ನನಗಿಂತ ಮೂರು ನಾಲ್ಕು ವರ್ಷ ದೊಡ್ಡವನು. ಆತ ಬಹಳಷ್ಟು ವರ್ಷ ನಮ್ಮ ಮನೆಯ ಕೊಟ್ಟಿಗೆಯಲ್ಲಿ-ಕೊಟ್ಟಿಗೆ ಎಂದರೆ ಹಸು-ಎಮ್ಮೆ ಕೋಣಗಳನ್ನು ಕಟ್ಟುವ ಜಾಗವಲ್ಲ- ಭತ್ತ ಕುಟ್ಟಿ ಅಕ್ಕಿ ಮಾಡಲು, ವಸ್ತುಗಳನ್ನು ದಾಸ್ತಾನು ಇಡಲು ಇದ್ದ ಜಾಗದಲ್ಲಿ ವಾಸವಿದ್ದ. ಅವನ ಜೊತೆ ಕಾಡು ಸುತ್ತಿಯೇ ನಾನು ಪ್ರಕೃತಿ ಬಗ್ಗೆ ಕಲಿತದ್ದು. ಆತ ನನ್ನ ಪಾಲಿಗೆ ಅಣ್ಣನಂತಯೇ ಇದ್ದ. ಈತನ ಜೊತೆ ಸುತ್ತಾಡಿದ ಅನುಭವವನ್ನು ಬರೆದರೆ ಬೇರೆಯೇ ಕತೆಯಾದೀತು. ಅವರ ಕುಟುಂಬದವರು ಆಮೆಗಳನ್ನು ಹಿಡಿದು ಮಾರುವುದು, ತಿನ್ನುವುದು ಸಾಮಾನ್ಯವಾಗಿತ್ತು. ನೀರಿನ ತೋಡುಗಳ ಅರೆಕೆಸರು ಜಾಗದಲ್ಲಿ ಕೈಯಲ್ಲಿರುವ ದೊಣ್ಣೆಯಿಂದ ಕುಟ್ಟಿ ಕುಟ್ಟಿ ಆಮೆ ಪತ್ತೆ ಮಾಡುತ್ತಿದ್ದರು.ಆದರೆ ಅದನ್ನು ಚಿಪ್ಪಿನಿಂದ ಹೇಗೆ ಹೊರಗೆ ತೆಗೆಯುತ್ತಾರೆ ಎಂಬುದನ್ನು ನಾನು ನೋಡಿರಲೇ ಇಲ್ಲ.

 ಬಹಳ ವರ್ಷಗಳ ನಂತರ ನಮ್ಮೂರಿನ ಒಂದು ಶೇಂದಿ ಅಂಗಡಿಯಲ್ಲಿ ‘ಸಾಲಿಗ್ರಾಮ’ದ ಮಾಂಸ ಸಿಗುತ್ತದೆ ಎಂದು ತಿಳಿಯಿತು. ಇದು ಆಮೆಯ ಮಾಂಸಕ್ಕೆ ಇಟ್ಟ ಗುಪ್ತ ಹೆಸರು. ಅದನ್ನು ತಿನ್ನುವ ಶೂದ್ರ ಜಾತಿಗಳಿಗೆ ಮುಜುಗರವಾಗಬಾರದು ಎಂಬ ದೃಷ್ಟಿಯಿಂದ ಆ ಅಂಗಡಿಯ ಚಾಕಣದವನು ಈ ಹೆಸರು ಇಟ್ಟಿದ್ದ. ಕೇಳಿದ್ದಕ್ಕೆ ಆತ ಯಕ್ಷಗಾನದ ಸಾಲಿಗ್ರಾಮ ಮೇಳದವರು ಮೊಣಕಾಲಲ್ಲಿ ಗಿರಕಿ ಹೊಡೆಯುವುದಕ್ಕೂ ಆಮೆಗೂ ಸಂಬಂಧ ಕಲ್ಪಿಸಿದ್ದ. ಆತ ತನ್ನ ಅದ್ಭುತ ಗ್ರಾಮೀಣ ಕಲ್ಪನೆ ಮೆರೆದಿದ್ದ. ಆಗ ಆಮೆ ಮಾಂಸ ತಿನ್ನುವುದು ‘ಬೀಫ್’ ತಿನ್ನುವಷ್ಟೇ ‘ಗುಟ್ಟಿನ’ ಕೆಲಸವಾಗಿತ್ತು! ಏನಾದರಾಗಲೀ ನಮ್ಮ ಬಲ್ಲುವನ್ನು ಮುಟ್ಟಿ ಆಗ ಈಗಿದ್ದಕ್ಕಿಂತ ಹೆಚ್ಚಿದ್ದ ಅಸ್ಪಶ್ಯತೆಯ ಬೇಲಿಯನ್ನು ಬಾಲ್ಯದಲ್ಲಿಯೇ ‘ರಾಜಾರೋಷ’ವಾಗಿ ದಾಟಿದ್ದ ನಾನು ಆತ ತಿನ್ನುವ ಆಮೆಯನ್ನೂ ತಿನ್ನಬೇಕೆಂದು ಮನಸ್ಸು ಮಾಡಿ ತಿಂದೇ ಬಿಟ್ಟೆ! ಕೋಳಿ ಮಾಂಸದಂತೆಯೇ ಇತ್ತು. ಇನ್ನೊಂದು ಸಲ ಈ ‘ಸಾಲಿಗ್ರಾಮ’ವನ್ನು ತಿನ್ನಲು ಹೋಗಿ ಒಂದು ಪ್ಲೇಟು ತೆಗೆದುಕೊಂಡವನಿಗೆ ಈ ಆಮೆಗಳು 200-300 ವರ್ಷ ಬದುಕುತ್ತವೆ ಎಂದು ಓದಿದ್ದು ನೆನಪಾಯಿತು. ಯಕಶ್ಚಿತ್ 50-60 ವರ್ಷ ಬದುಕಬಹುದಾದ ನಾನು ಸ್ವಲ್ಪ ಬಾಯಿ ರುಚಿಯ ಆಸೆಗಾಗಿ ಅಷ್ಟು ವರ್ಷ ಬದುಕಬಹುದಾದ ಪ್ರಾಣಿಯೊಂದರ ಜೀವನ ಕಡಿತದಲ್ಲಿ ಪಾಲುದಾರನಾಗುವುದೇ ಎಂಬ ಯೋಚನೆ ಹೊಳೆದು ಅಂದಿಗೇ ‘ಸಾಲಿಗ್ರಾಮ’ದ ಮಾಂಸಕ್ಕೆ ವಿದಾಯ ಹೇಳಿಬಿಟ್ಟೆ! ಕೋಳಿ-ಮೀನುಗಳ ಮಾಂಸಕ್ಕೆ ವಿದಾಯ ಹೇಳುವುದು ನನಗಿನ್ನೂ ಸಾಧ್ಯವಾಗಿಲ್ಲ! ‘ಕೊಂದ ಪಾಪ ತಿಂದು ಪರಿಹಾರ’ ಎಂಬ ಸೂತ್ರಕ್ಕೆ ಇನ್ನೂ ಅಂಟಿಕೊಂಡಿದ್ದೇನೆ. ಏನಿದ್ದರೂ ಆಹಾರ ಅವರವರ ಆಯ್ಕೆ. ಮನುಷ್ಯನನ್ನೇ ಮನುಷ್ಯನೊಬ್ಬ ಪ್ರಾಣಿಗಾಗಿ ಕೊಲ್ಲುವ ಈ ಕಾಲದಲ್ಲಿ ಈ ಪ್ರಶ್ನೆ ಪ್ರಸ್ತುತವೋ, ಅಪ್ರಸ್ತುತವೋ?!

ಈ ಬಲ್ಲುವಿನ ಜೊತೆ ನನ್ನ ತಿರುಗಾಟದ ಒಂದು ಕತೆಯನ್ನಷ್ಟೇ ಈ ಅವಕಾಶದಲ್ಲಿ ಹೇಳುತ್ತೇನೆ. ನನಗೆ ಕಾಡು-ಮೇಡು ಕಲಿಸಿದ ನನ್ನ ಈ ಅಣ್ಣನಿಗೆ ನಾನು ಕನ್ನಡ ಹಾಡು-ಅಕ್ಷರ ಕಲಿಸುತ್ತಿದ್ದೆ. ನಾನು ಕಲಿಸಿದ್ದಕ್ಕಿಂತ ಆತ ಕಲಿತದ್ದಕ್ಕಿಂತ- ಆತ ಕಲಿಸಿದ್ದೇ ಹೆಚ್ಚು. ಆದರೂ ನನಗೆ ಗುರುದಕ್ಷಿಣೆಯಾಗಿ ಏನನ್ನಾದರೂ ಕೊಡಬೇಕೆಂದು ಕೇಳಿದಾಗ ನಾನು ಕೇಳಿದ್ದೊಂದು ಕೊಳಲು! ನನಗೆ ಈಗಲೂ‘ಕೊಳಲು’ ಎಂದರೆ ಕೃಷ್ಣನ ನೆನಪಾಗುವುದಿಲ್ಲ! ಬಲ್ಲು, ಅವನ ತಂದೆ ತಾಯಿಯವರಾದ ಬಟ್ಯ-ಚೋಮು; ಅಣ್ಣ,ಅಕ್ಕ, ತಂಗಿ-ಇತ್ಯಾದಿ ಕುಂಡ, ಐತ, ಮಾಂಕು, ಬೊಗುರ, ತನಿಯಾರು, ಬೀತುರು- ಇವರೇ ನೆನಪಾಗುತ್ತಾರೆ. ಯಾಕೆಂದರೆ ಇವರು ಮೇಲೆ ಹೇಳಿದ ಗುಡಿಸಲು ಅಥವಾ ಕೇಲ್‌ನಲ್ಲಿ ವಾಸವಿದ್ದಾಗ ನಿತ್ಯವೂ ಕೊಳಲಿನ ಧ್ವನಿ, ಹಾಡು, ಕುಣಿತ, ಗಲಾಟೆ, ದೂರು, ರಾಜಿ ನಡೆಯುತ್ತಲೇ ಇದ್ದವು. ಬಿದಿರಿನ ಕೊಳಲು ಮತ್ತೆ ಮಕ್ಕಳಿಗೆ ‘ಓಂಟೆ’ ಎನ್ನುವ ತಾಳೆ ಗರಿಯ ವಾದ್ಯ ಮಕ್ಕಳಿಗೂ, ಹಿರಿಯರಿಗೂ ಆಟದ ಸರುಕುಗಳಾಗಿದ್ದವು. ಹಾಗೆಂದು ನಾನೂ ಬಲ್ಲು ಬೈಲಿಗೆ ಹೋದೆವು. ತಾಳೆ ಗರಿ ಕೊಯ್ದೆಯ್ತು. ಕೊನೆಗೆ ಸಿಕ್ಕಿಸಿಲು ಒಂದು ‘ಮುಳ್ಳಂಕೋಲು’ ಗಿಡದ ಸೂಜಿಯಂತಹ ಮುಳ್ಳು ಬೇಕು. ಅದಕ್ಕಾಗಿ ಬೈಲಿನ ಒಂದು ಮಾವಿನ ಮರದ ಕೆಳಗೆ ಒಂದು ಹುತ್ತದ ಬಳಿಗೆ ಹೋದೆವು. ಅಲ್ಲಿ ಮುಳ್ಳಂಕೋಲಿನ ಹುಳಿ ಹಣ್ಣಿನ ರುಚಿ ಹಿಂದೆಯೇ ನೋಡಿದ್ದೆವು. ಅಲ್ಲಿ ಮುಳ್ಳಿಗೆಂದು ಕೈ ಹಾಕುತ್ತಾನೆ-ಒಂದು ದೊಡ್ಡ ಹಾವು ಸ್ಪ್ರಿಂಗಿನಂತೆ ನಮ್ಮತ್ತ ಜಿಗಿಯುತ್ತಿದೆ! ಯಾವತ್ತೂ ಕೈಯಲ್ಲಿ ಹಿಡಿದೇ ಇರುತ್ತಿದ್ದ ಬೆತ್ತದಲ್ಲಿ ಜಾಕಿಜಾನ್‌ನನ್ನೂ ಮೀರಿಸುವ ವೇಗದಲ್ಲಿ ನೆಲಕ್ಕುರುಳಿಸಿ ಕ್ಷಣ ಮಾತ್ರದಲ್ಲಿ ಎರಡೇ ಹೊಡೆತದಲ್ಲಿ ಕೊಂದೇ ಬಿಟ್ಟ! ಅದರ ಹೊಟ್ಟೆಯಿಂದ ಮೊಟ್ಟೆಗಳು ಲೋಳೆಯೊಂದಿಗೆ ಹೊರೆಗೆ ಬಂದಿದ್ದವು. ಅದನ್ನು ನೋಡಿ ನನ್ನ ಕರುಳು ಕಿವಿಚಿ ಹೋಯಿತು. ನಾನು ಯಾಕೋ ಬೈದೆ! ಅವನು ಹೇಳಿದ ಮಾತು ಇಷ್ಟೇ- ‘‘ನಾನು ಕೊಲ್ಲದಿದ್ದರೆ, ಅದು ನಮ್ಮಿಬ್ಬರಲ್ಲಿ ಒಬ್ಬರನ್ನು ಕೊಲ್ಲುತ್ತಿತ್ತು.’’ ಇದು ಅವನ ನೈಸರ್ಗಿಕ ನ್ಯಾಯ. ನಾನು ಕೃತಕ ಎಂದು ನನಗೆ ಆಗಲೇ ಅನಿಸಿತ್ತು.

 ನೈಸರ್ಗಿಕವಾಗಿ ಅವನ ರಕ್ಷಣೆಗೆ ಬರುತ್ತಿದ್ದ ಅವನ ಸಹಜ ಬದುಕಿನ ಸಹಜ ಪ್ರೇರಣೆಯಾಗಲೀ, ಆತನ ಕೋಲಾಗಲೀ ಆಧುನಿಕತೆಯ ಎದುರು ಅವನ ಜೀವವನ್ನು ಉಳಿಸಲಿಲ್ಲ. ಮುಂದೊಂದು ದಿನ ಒಂದು ಕಾರು ಈಗ ರಾಜ್ಯದಲ್ಲೇ ಕುಖ್ಯಾತವಾಗಿರುವ ಬಂಟ್ವಾಳ ತಾಲೂಕಿನ ಪಟ್ಟಣವೊಂದರಲ್ಲಿ ಈ ಬಲ್ಲುವನ್ನು ಹೊಡೆದುರುಳಿಸಿತು.ಅವರು ಮಂಗಳೂರಿನ ಒಂದು ಆಸ್ಪತ್ರೆಗೆ ದಾಖಲಿಸಿ ಮಾಯವಾದರು. ಅವನ ಕೊನೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲದೆಯೇ ಬಂತು. ಅವನ ಮಗಳು ಎಸೆಸೆಲ್ಸಿ ಪಾಸಾಗಿ ಒಂದು ಖಾಸಗಿ ಆಸ್ಪತ್ರೆಯಲ್ಲಿ ದಾಯಿಯಾಗಿದ್ದಾಳೆ ಎಂದು ಕೇಳಿದ್ದೇನೆ. ಯಾವುದೇ ಮೀಸಲಾತಿಯ ‘ಕರುಣೆ’ ಈ ಕುಟುಂಬದ ಯಾರಿಗೂ ಸಿಕ್ಕಿಲ್ಲ ಎಂಬುದನ್ನು ಮೀಸಲಾತಿ ವಿರೋಧಿಗಳಿಗೆ ಒಮ್ಮೆ ನೆನಪಿಸಬೇಕು.

ಕರಾವಳಿಯ ಜನರಿಗೆ ಕೋಳಿಯೊಂದು ಸಹಜ ಆಹಾರ. ಭೂತಗಳಿಗೂ ಅದು ಬೇಕು. ಅದಕ್ಕಾಗಿಯೇ ಜನರು ಕೋಳಿಗಳನ್ನು ಸಾಕುತ್ತಿದ್ದರು. ಅವುಗಳನ್ನೇ ಕಾಡುಬೆಕ್ಕು (ತುಳುವಿನ ಅಲ್ಪುಚ್ಚೆ)-ಚಿರತೆಗಿಂತ ಸಣ್ಣದು- ದಿನಕ್ಕೆ ನಾಲ್ಕಾರು ತಿಂದರೆ ಹೇಗೆ?! ನಮ್ಮೂರಿನಲ್ಲಿ ಒಮ್ಮೆ ಹಾಹಾಕಾರವೆದ್ದಿತು. ನಾನು ಮೊದಲೇ ಹೇಳಿದ ತೋಡಿನ ಆಚೆ, ತೋಟ ದಾಟಿ ಒಂದು ಚಿಕ್ಕ ಕಾಡು. ಅಲ್ಲಿ ಜನರ ಬೊಬ್ಬೆ ಕೇಳುತ್ತಿದೆ. ವಿಶೇಷವೆಂದರೆ ಊರವರೆಲ್ಲಾ ಸಂಚು ಮಾಡಿ ಆಗ ಬಲೆ ಹಾಕಿ ಅಳಿಲು, ಮೊಲ ಇತ್ಯಾದಿಗಳನ್ನು ಬೇಟೆಯಾಡುತ್ತಿದ್ದ ಗಿರಿಯಪ್ಪಣ್ಣ ಎಂಬವರು ಈ ಕಾಡುಬೆಕ್ಕನ್ನು ಬಲೆಗೆ ಬೀಳಿಸಿದ್ದರು. ನಾನು, ಬಲ್ಲು, ನನ್ನ ಸಂಬಂಧಿಯೊಬ್ಬರು ಅಲ್ಲಿಗೆ ಓಡಿದಾಗ ಅದನ್ನು ಹೊಡೆದೇ ಕೊಂದಿದ್ದರು. ನಾವು ಹೋದಾಗ ಅಲ್ಲಿ ಹೆಣಕ್ಕೆ ಹೊಡೆಯುವ ‘ಆಟ’ ನಡೆದಿತ್ತು-‘ನನ್ನ ಕುಪುಳನ ಲೆಕ್ಕದಲ್ಲಿ ಒಂದು, ನನ್ನ ಕೆಮ್ಮೈರೆ ಲೆಕ್ಕದಲ್ಲಿ ಒಂದು ನನ್ನ ಬೊಳ್ಳೆ ಲೆಕ್ಕದಲ್ಲಿ ಒಂದು....’ ಎಂದು ಜನರು ಹೊಡೆಯುತ್ತಲೇ ಇದ್ದರು. ಕುಪುಳ,ಕೆಮ್ಮೈರೆ, ಬೊಳ್ಳೆ ಇತ್ಯಾದಿ ಅಂಕದ ಕೋಳಿಗಳಿಗೆ ಬಣ್ಣದ ಆಧಾರದಲ್ಲಿ ಇಡುವ ಹೆಸರುಗಳು. ಅದನ್ನು ತಮ್ಮ ಭಂಟರಂತೆ ಸಾಕಿರುತ್ತಾರೆ. ಅವರ ಸಿಟ್ಟಿನ ಹೊಡೆತ ಯಾವುದೇ ರಾಜ ಅಥವಾ ಸರ್ವಾಧಿಕಾರಿಗೆ ಚಳಿ ಹುಟ್ಟಿಸುವಂತಿತ್ತು. ಜನರು ಸಿಟ್ಟಿಗೆದ್ದರೆ ಏನು ಮಾಡಬಹುದು ಎಂಬುದನ್ನು ಅಧಿಕಾಸ್ಥರಿಗೆ ನೆನಪಿಸುವಂತಿತ್ತು. ನಾವು ಕಾಡಿ ಬೇಡಿ ದೇಹದ ಜೀವ ಬದುಕಿಸಿದೆವು. ಅದರ ಚರ್ಮ ಉಳಿಸುವುದು ಹುಡುಗರಾದ ನಮ್ಮ ಆಸೆಯಾಗಿತ್ತು. ಮಾಂಸ ಊರವರ ಪಾಲಾಯಿತು-ಅದು ಕೊಂದ ಕೋಳಿಯ ತೂಕದಂತೆ! ಚಿಕ್ಕ ಪುಟ್ಟ ಪಾಲಿನ ಜಗಳವೂ ಆಯಿತು. ನಾವು ಚರ್ಮವನ್ನು ಒಯ್ದು ಉಪ್ಪು ಗಿಪ್ಪು ಹಾಕಿ ಬಲ್ಲುವಿನ ಸಲಹೆ ಮೇರೆಗೆ ಕೋಂಗಲಪಾದೆ ಎನ್ನುವ ಹೆಸರಿರುವ ಗುಡ್ಡದ ಮೇಲೆ ದೊಡ್ಡ ಬಂಡೆಯ ಮೇಲೆ ಒಣಗಲು ಹಾಕಿದೆವು. ಮರುದಿನ ಬೆಳಗ್ಗೆ ಅದು ಮಾಯವಾಯಿತು. ಪ್ರಾಣಿಗಳು ತಿಂದವು- ಬಲ್ಲು ಮೋಸ ಮಾಡಿದ- ಅವನ ಸಂಬಂಧಿಗಳೇ ಕದ್ದು ಮಾರಿದ್ದಾರೆ ಇತ್ಯಾದಿ ಆರೋಪಗಳಾದವು. ಅದೇನೇ ಇರಲಿ ‘ಕ್ರಾಂತಿ’ ಹೇಗೆ ನಡೆಯುತ್ತದೆ ಎಂಬುದು ಐತಿಹಾಸಿಕ ‘ಪಾಠ’ ಕಲಿತಂತಾಯಿತು.

ಮೇಲೆ ಹೇಳಿದ ಕಾಡಿನಿಂದಾಚೆ ಇನ್ನೊಂದು ದಟ್ಟವಾದ ಜಿಗ್ಗಿನ ಕಾಡು ಇದೆ.ಇದು ಕಾಡು ಹಂದಿಗಳ ಇಷ್ಟದ ವಾಸ ಸ್ಥಾನವಾಗಿತ್ತು. ಕೆಲವೊಮ್ಮೆ ಹಂದಿಗಳು ಗದ್ದೆ, ತೋಟಗಳನ್ನು ತನ್ನ ದಾಡೆಗಳಿಂದ ಉತ್ತು ಹಾನಿ ಮಾಡುವುದಿತ್ತು. ರೈತರು ಕೆಲವರು ಇದಕ್ಕೆಂದು ಮಾತ್ರವಲ್ಲ, ಮಾಂಸದ ಆಸೆಗಾಗಿಯೂ ಗಂಡಿಗಳಲ್ಲಿ ಉರುಳು ಇಡುವುದಿತ್ತು. ಕೆಲವರ್ಷಗಳ ಹಿಂದೆ ಒಂದು ಭಾರೀ ಗಾತ್ರದ ಹಂದಿ ಬಿತ್ತು. ಆಗ ಈಗಿನಂತೆ ಬೇಟೆ ಗುರುತರ ಅಪರಾಧ ಎಂದು ಯಾರೂ ಭಾವಿಸಿರಲಿಲ್ಲ. ಹಂದಿ ಬಿದ್ದರೆ ಹಲವಾರು ಮನೆಗಳಿಗೆ ಮಾಂಸ ಹಂಚಿಕೆ ಆಗುತ್ತಿತ್ತು. ನಾಡ ಹಂದಿ ಮಾಂಸಕ್ಕೆ �

Writer - ನಿಖಿಲ್ ಕೋಲ್ಪೆ

contributor

Editor - ನಿಖಿಲ್ ಕೋಲ್ಪೆ

contributor

Similar News

ಗಾಂಧೀಜಿ