ಊಟ ತನ್ನಿಚ್ಛೆ ನೋಟ ಪರರಿಚ್ಛೆ!

Update: 2018-12-20 09:55 GMT

                ಪ್ರೀತಿ ನಾಗರಾಜ್

ಇವರ ಮೂಲ ಊರು ದಾವಣಗೆರೆ. ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ಪತ್ರಕರ್ತೆ. ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ. ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಹಾಗೂ ಸಿಎನ್‌ಬಿಸಿ ಮುಂತಾದ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ರಂಗಭೂಮಿ ಹಾಗೂ ಮನಃಶಾಸ್ತ್ರ ಎರಡೂ ಅತ್ಯಂತ ಮೆಚ್ಚಿಗೆಯ ವಿಷಯಗಳು. ಇದರ ಜೊತೆಗೆ ಸಿನೆಮಾ/ಕಿರುತೆರೆ ಬರವಣಿಗೆಯಲ್ಲಿ ಕೂಡ ತೊಡಗಿಸಿಕೊಂಡಿದ್ದಾರೆ. ಇವರ ಎರಡು ಕೃತಿಗಳು ಪ್ರಕಟವಾಗಿದ್ದು, ಮೊದಲನೆಯ ಕೃತಿ ರಂಗಕರ್ಮಿ ಬಿ. ಜಯಶ್ರೀ ಅವರ ಆತ್ಮಕತೆ ‘ಕಣ್ಣಾಮುಚ್ಚೇ ಕಾಡೇ ಗೂಡೇ’ಯ ನಿರೂಪಣೆ. ಎರಡನೆಯದು, ಆದಿವಾಸಿ ಮಹಿಳೆ ಪಿರಿಯಾಪಟ್ಟಣ ಅಬ್ಬಳತಿ ಹಾಡಿಯ ಜಾನಕಮ್ಮ ಅವರ ಹೋರಾಟದ ಬಗ್ಗೆ ಬರೆದ ಲೇಖನಕ್ಕೆ ವಿಶ್ವಸಂಸ್ಥೆ ಮತ್ತು ದ ಹಂಗರ್ ಪ್ರಾಜೆಕ್ಟ್ ವತಿಯಿಂದ ದ ಸರೋಜಿನಿ ನಾಯ್ಡು ಪ್ರೈಸ್ ದೊರೆತಿದ್ದು ಅದನ್ನು ಲೇಖಕಿ 2010 ರಲ್ಲಿ ನ್ಯೂಯಾರ್ಕಿನಲ್ಲಿ ಸ್ವೀಕರಿಸಿದರು. ಕಣ್ಣಾ ಮುಚ್ಚೇ ಕಾಡೇ ಗೂಡೇ ಕೃತಿಗೆ 2016ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ ಬಂದಿದೆ.

'ಊರು' ಎನ್ನುವುದು ಒಂದು ಭಾವ ಅಂತ ಎಷ್ಟೊ ಸಾರಿ ಅನ್ನಿಸಿದೆ. ಯಾಕೆಂದರೆ ಹುಟ್ಟಿದ ಊರು ಬಿಟ್ಟು ಬೇರೊಂದು ಊರಲ್ಲಿ ಅಥವಾ ದೇಶದಲ್ಲಿ ಮನೆ ಅಂತನ್ನಿಸುವುದು ಅಡುಗೆ ಮನೆಗೆ ಬಂದಾಗ ಮಾತ್ರ. ಗುಂಪುಗುಂಪಾಗಿ ಒಂದೇ ಕಡೆ ಇರುವ ಹುಡುಗರು ಅಥವಾ ಹುಡುಗಿಯರು ಅಡುಗೆ ಕೆಲಸ ತಮ್ಮಲ್ಲೇ ಹಂಚಿಕೊಂಡರೆ, ಒಬ್ಬೊಬ್ಬರೇ ಬದುಕುವವರೂ ವಾರಕ್ಕೆ ಮೂರು ಬಾರಿಯಾದರೂ ಕನಿಷ್ಠ ಮಟ್ಟದ ಅಡುಗೆ ಮಾಡುವ ಪ್ರಯತ್ನ ಮಾಡುತ್ತಾರೆ.

ಅಚ್ಚುಕಟ್ಟಾದ ಅನ್ನವೋ, ಗಂಜಿಯೋ, ಮೀನೂಟ ಅಥವಾ ಒಂದೊಮ್ಮೆ ಚಿಕನ್ ಮಾಡಲು ಸಾಧ್ಯವಾದರೆ ಅದೇ ಹಬ್ಬ. ಮನೆಯ ನೆನಪು ಒತ್ತರಿಸಿ ಬರಬೇಕು ಆಗ!

ಕಾರಣಾಂತರಗಳಿಂದ ಬೇರೆ ಊರಿಗೆ ಸಂಸಾರ ಸಮೇತರಾಗಿ ಬಂದು ಬದುಕುತ್ತಿರುವವರಿಗೂ ಊರಿನ ಊಟದ ಚಿರಪರಿಚಿತ ಹದ ರುಚಿ ಮೊಗ್ಗುಗಳ ಜೊತೆ ಮನಸ್ಸನ್ನೂ ಎಚ್ಚರಿಸುತ್ತದೆ. ಯಾವುದೋ ಘಳಿಗೆಯಲ್ಲಿ ಅನಿರೀಕ್ಷಿತವಾಗಿ ನಮ್ಮದೆನ್ನಿಸುವ ಹಾಗೆ ಸಿಗುವ ಚಿರಪರಿಚಿತ ರುಚಿ ಎಷ್ಟೆಲ್ಲಾ ಜಾದೂ ಮಾಡಿಬಿಡುತ್ತದೆ! ಅದಕ್ಕೇ ಗಾದೆ ಇದೆ. ಊಟ ತನ್ನಿಚ್ಛೆ, ನೋಟ ಪರರಿಚ್ಛೆ ಅಂತ! ಊಟ ಬಹು ವೈಯಕ್ತಿಕ ಅಯ್ಕೆ. ಇದನ್ನು ಹಾಗೆ ಆಗಗೊಡಿಸುವ ಸಾಧ್ಯತೆಗಳೂ ಇದೆ. ನಮ್ಮ ಜೀವನದಲ್ಲಿ ಅತ್ಯಂತ ನಿಯಂತ್ರಣಕ್ಕೊಳಗಾಗುವ ಒಂದು ಅಂಶ. ನಮ್ಮ ಆಯಸ್ಸಿಗೂ, ಆರೋಗ್ಯಕ್ಕೂ, ನಾವು ಮಾಡುವ ಊಟಕ್ಕೂ ನೇರ ಸಂಪರ್ಕ ಇರುವುದರಿಂದ, ವಯಸ್ಸಿಗೆ ಅನುಗುಣವಾಗಿ ಬಟ್ಟೆ ಬದಲಾಗದಿದ್ದರೂ ಪರವಾಗಿಲ್ಲ ಊಟ ಬದಲಾಗುತ್ತದೆ.

ಮತ್ತೆ ಹೊಸ ಹೊಸ ವಿಷಯಗಳು ಗೊತ್ತಾದ ಹಾಗೆಲ್ಲ ಊಟದ ರುಚಿಯೂ ಬೇರೆ ಆಗುತ್ತದೆ. ಈಗಂತೂ ವಾತಾವರಣ/ರುಚಿ/ಆಯ್ಕೆ/ದೇಹ ಸಂರಚನೆ ಎಲ್ಲವನ್ನೂ ಮೀರಿ ಫ್ಯಾಡ್ ತರಹದಲ್ಲಿ ಆರ್ಗ್ಯಾನಿಕ್ ಸಾಮಗ್ರಿಗಳ ಬಳಕೆ ಹೆಚ್ಚಿದೆ. ಉಣ್ಣುವ ಜನ ಕೂಡ ಇದು ನಮಗೆ ಹೊಂದುತ್ತದೋ ಇಲ್ಲವೋ ಎನ್ನುವುದನ್ನೂ ಯೋಚಿಸದ ಹಾಗೆ ರಾಗಿ, ಜೋಳ, ನವಣೆ, ಊದಲು, ಆರ್ಕ ಹೀಗೆ ಈಗಿನ ಪೀಳಿಗೆ ಹೆಸರೇ ಕೇಳಿಲ್ಲದ ಕಾಳುಗಳನ್ನು ಚಿರಂಜೀವತ್ವಕ್ಕೆ ದಾರಿ ಎನ್ನುವ ಹಾಗೆ ಉಪಯೋಗಿಸುತ್ತಿದ್ದಾರೆ.

ಅಂದ ಹಾಗೆ, ಅದು ಒಳ್ಳೆಯದಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ದಿಲ್ಲಿಯ ಕೊರೆಯುವ ಚಳಿಗೆ ನೀರು ಕಡಿಮೆ ಸೇವಿಸುವ ಜನ ರಾಗಿ ಉಂಡರೆ ಜೀರ್ಣ ಆಗದೆ ಆರೋಗ್ಯದ ಸಮಸ್ಯೆ ಬಿಗಡಾಯಿಸದೇ ಇರುವುದೇ?

ಹಲವಾರು ಸಂಸ್ಕೃತಿಗಳ ನೆಲೆಯಾದ ಭಾರತ ದಲ್ಲಿ ಊಟದ ಪರಿಪಾಠ ದಲ್ಲೂ ಬೇಕಾದಷ್ಟು ವೈವಿಧ್ಯವಿದೆ. ಊರಿಂದ ಊರಿಗೆ, ಹಳ್ಳಿಯಿಂದ ಹಳ್ಳಿಗೆ, ಹೋಟೆಲಿನಿಂದ ಹೋಟೆಲಿಗೆ ಪಾಕ ವಿಧಾನಗಳು ಬೇರೆಯಾಗುತ್ತಾ ಹೋದಂತೆ ಅಲ್ಲಿನ ಕೃಷಿ ಪದ್ಧತಿಗೆ ತಕ್ಕ ಹಾಗೆ, ಅಲ್ಲಿ ಸ್ಥಳೀಯವಾಗಿ ಸಿಗುವ ಸಾಮಗ್ರಿಗಳು ಹಾಗೂ ಹವಾಮಾನಕ್ಕನುಗುಣವಾಗಿ ಆಹಾರ ರೂಪುಗೊಳ್ಳುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವೇ.

ಭಾರತಾದ್ಯಂತ ತರಹೇವಾರಿ ಅಡುಗೆಗಳು ತಯಾರಾಗುತ್ತವೆ. ಇವೆಲ್ಲಾ ಸ್ಥಳಕ್ಕನುಗುಣವಾಗಿ ಹುಟ್ಟುವ ಅಡುಗೆ/ಊಟದ ಪದ್ಧತಿ ಅಂತ ಇಟ್ಟುಕೊಂಡರೂ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತದೆ. ಆದರೆ ಬಹುತೇಕ ಒಣ ಹವೆಯೇ ಉಳಿದೆಲ್ಲ ಸಮಯದಲ್ಲೂ ಸಾರ್ವಕಾಲಿಕ. ಹಾಗಾಗಿ ಬಿಸಿಲಿಗೆ ಕೆಡದ, ಹೆಚ್ಚು ತೇವ ಉಪಯೋಗವಿಲ್ಲದ, ಚೆನ್ನಾಗಿ ಹುರಿದ ಶುಷ್ಕ ಆಹಾರ ಇಲ್ಲಿನ ಪ್ರತೀತಿ. ಇದರಿಂದ ಎರಡು ಉದ್ದೇಶ ಪೂರೈಕೆಯಾಗುತ್ತದೆ. ಮೊದಲನೆಯದು ಫ್ರಿಜ್ಜಿಲ್ಲದ ಸಮಯದಲ್ಲೂ ಆಹಾರ ಕೆಡದೆ ಉಳಿಯುತ್ತದೆ. ಎರಡನೆಯದು ತೇವ ಕಡಿಮೆ ಇರುವ ಆಹಾರವಾದ್ದರಿಂದ ನೀರು ಹೆಚ್ಚು ಕುಡಿಸುತ್ತದೆ. ಹಾಗಾಗಿ ದೇಹದಲ್ಲಿ ಪೌಷ್ಟಿಕಾಂಶ ಹಾಗೂ ನೀರಿನ ಅಂಶ ತೂಗಿಸುತ್ತದೆ. ಅಂತಲ್ಲಿ ಕಾಳುಗಳ ಎಣ್ಣೆ ಹೆಚ್ಚು ಜಿಡ್ಡನ್ನು ಅಡುಗೆಗೆ ಕೊಡುತ್ತವೆ. ತೇವ ಹೆಚ್ಚಿರುವ ಪ್ರದೇಶದಲ್ಲಿ ಜಿಡ್ಡು ಕಡಿಮೆ ಪೌಷ್ಟಿಕಾಂಶ ಹೆಚ್ಚಿರುವ ಅಡುಗೆ ಎಣ್ಣೆ ಸಾಂಪ್ರದಾಯಿಕವಾಗಿ ಬಳಕೆ ಆಗುತ್ತದೆ.

ಉತ್ತರ ಹಾಗೂ ಮಧ್ಯ ಕರ್ನಾಟಕದಲ್ಲಿ ಅಂದರೆ ಧಾರವಾಡ, ಬಿಜಾಪುರ, ಕಲಬುರಗಿ, ಬೆಳಗಾವಿ, ಬೀದರ, ಯಾದಗೀರ, ಬಾಗಲಕೋಟ, ರಾಯಚೂರು, ದಾವಣಗೆರೆ, ಗದಗ, ಹಾವೇರಿ, ಕೊಪ್ಪಳ ಮತ್ತು ಬಳ್ಳಾರಿಯ ಕೆಲ ಭಾಗದ ಜನರಿಗೆ ಕಬ್ಬಿಣದ ಹಂಚಿನ ಮೇಲೆ ಸುಟ್ಟ ಸಜ್ಜೆ ಅಥವಾ ಜೋಳದ ರೊಟ್ಟಿ, ಎಣ್ಣೆಗಾಯಿ, ಕುರುಶಾನಿ (ಹುಚ್ಚೆಳ್ಳು ಇಂಗ್ಲಿಷಿನಲ್ಲಿ ನೈಜೆಲ್ಲ ಸೀಡ್ಸ್) ಪುಡಿ ಇತ್ಯಾದಿ ಜಿಡ್ಡು ಹೆಚ್ಚಿರುವ ಅಡುಗೆ ರುಚಿಸುತ್ತದೆ. ನೀರಾವರಿ ಅಲ್ಲದ ಪ್ರದೇಶದ ತರಕಾರಿಗಳ ರುಚಿಯೂ ಹೆಚ್ಚು. ಕಾರಣ ಅವು ಹೆಚ್ಚು ನೀರು ಹಿಡಿಟ್ಟುಕೊಳ್ಳುವುದಿಲ್ಲ ಮತ್ತು ಬೇಗನೆ ಕೆಡುವುದಿಲ್ಲ. ಖಾರವಂತೂ ರಣ ಖಾರ. ಹಸಿರು ಮೆಣಸಿನಕಾಯಿ ಮತ್ತು ಕೆಂಪಾದ ಹಣ್ಣು ಮೆಣಸಿನಕಾಯಿಯ ಬಳಕೆ ಹೆಚ್ಚು. ಬೇಳೆಗಳು ಕಡಿಮೆ, ಮೊಳಕೆ ಕಾಳುಗಳು ಹೆಚ್ಚು ಬಳಕೆ ಆಗುತ್ತವೆ. ಸಿಹಿ ತಿಂಡಿ ಕೂಡ ಹೆಚ್ಚು ಕಡಿಮೆ ಶೇಂಗಾ ಹೋಳಿಗೆ, ಕಡಲೆ ಬೇಳೆ/ತೊಗರಿ ಬೇಳೆ, ಶಾವಿಗೆ, ಎಳ್ಳು ಬೆಲ್ಲ ಇತ್ಯಾದಿಗಳಿಂದ ತಯಾರಾಗುತ್ತವೆ.

ಎಣ್ಣೆಯಲ್ಲಿ ತಾಳಿಸಿದ ಪದಾರ್ಥಗಳು ಜಾಸ್ತಿ. ಅದೊಂಥರ ನೈಸರ್ಗಿಕ ಪ್ರಿಸರ್ವೇಟಿವ್... ಆದರೆ ಕರಿದ ಅಡುಗೆಗಳು ತುಂಬಾ ಕಡಿಮೆ. ಮಾಂಸದ ಅಡುಗೆ ಆಗಾಗ ಆಗುತ್ತದೆ...ಅದಕ್ಕೂ ಹೆಚ್ಚಿನ ಮಸಾಲೆ ಮತ್ತು ಎಣ್ಣೆಯ ಬಳಕೆ. ಅದಕ್ಕೆ ಸಂಗಾತಿ ಅನ್ನ ಅಥವಾ ರೊಟ್ಟಿ. ದೋಸೆ ಅಪರೂಪವಾಗಿತ್ತು...ಈಗ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಆಗುತ್ತದೆ. ಮೈಸೂರು ಪ್ರಾಂತದಲ್ಲಿ ಅಂದರೆ ಕೋಲಾರ, ಬೆಂಗಳೂರು, ಮೈಸೂರು, ತುಮಕೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಈ ಸೀಮೆಯಲ್ಲಿ ಅಕ್ಕಿ ಮತ್ತು ರಾಗಿ ಹೆಚ್ಚು ಬಳಕೆ ಆಗುತ್ತದೆ. ಒಣ ಪ್ರದೇಶಗಳಲ್ಲಿ ಜೋಳ ಮತ್ತು ಸಜ್ಜೆ ಬೆಳೆದರೂ ಊಟದಲ್ಲಿ ಪರಿಪಾಠ ಅಷ್ಟಿಲ್ಲ. ಮಾಂಸದ ಬಳಕೆ ಹೆಚ್ಚು. ಹಾಗೇ ತರಹೇವಾರಿ ಮಾಂಸದ ಅಡುಗೆಗಳ ಮುಂದೆ ತರಕಾರಿ ಅಡುಗೆ ಹೆಚ್ಚು ವೈವಿಧ್ಯ ಕಾಣುವುದಿಲ್ಲ.

ಮಲೆನಾಡಿನ ಕಡೆ ಅಂದರೆ ಸೋಮವಾರ ಪೇಟೆ, ಕೊಡಗು, ಸಕಲೇಶಪುರ, ಮೂಡಿಗೆರೆ, ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಹಬೆಯಲ್ಲಿ ಬೇಯಿಸಿದ ಎಣ್ಣೆ ಕಡಿಮೆ ಇರುವ ಅಡುಗೆಗಳು ಜಾಸ್ತಿ. ಕಡುಬು, ಅಕ್ಕಿ ಸನ್ನಾಸ್, ಅಕ್ಕಿ ರೊಟ್ಟಿ, ಚಟ್ನಿಗಳು, ಒತ್ತು ಶಾವಿಗೆ, ಕಾಡು ಕಳಲೆ, ಮಾಂಸದ ಅಡುಗೆ ಹೆಚ್ಚು ಶಕ್ತಿ ಕೊಡುತ್ತವೆ ಮತ್ತು ಜೀರ್ಣ ಕೂಡ ಸುಲಭ.

ದಕ್ಷಿಣ ಕನ್ನಡದ ಮತ್ತು ಅರೆಮಲೆನಾಡಿನ ಅಡುಗೆಗಳೂ ಬಹು ವರೈಟಿಯವು! ಅಕ್ಕಿ ಹಾಗೂ ಕಾಯಿಯ ದಿವ್ಯ ಸಂಗಮ! ದೋಸೆ, ತೊಡದೇವು, ಹೋಳಿಗೆ, ಕೊಟ್ಟೆ ರೊಟ್ಟಿ, ಪತ್ರೊಡೆ, ನೀರ್ ದೋಸೆ, ಕಜ್ಜಾಯ, ಕೋಳಿ ಕಜ್ಜಾಯ, ಬನ್ಸು, ಕಳಲೆ, ಅಪ್ಪೆ ಹುಳಿ, ತಂಬುಳಿಗಳು ಆಹಾ! ಒಂದೊಂದು ಪಂಗಡದ್ದೂ ಒಂದೊಂದು ಅಡುಗೆ ಮಾಡುವ ವಿಧಾನ. ಮೀನು ಮಾಂಸದ ಬಳಕೆ ಅತಿ ಹೆಚ್ಚು, ತರಕಾರಿ ಅಡುಗೆ ಎಷ್ಟು ವೈವಿಧ್ಯವೋ, ಮಾಂಸದ ಅಡುಗೆ ಕೂಡ ಅಷ್ಟೇ ರುಚಿಕರ.

ಇದೆಲ್ಲಾ ಅಲ್ಲದೆ ಪ್ರಾಂತಗಳನ್ನು ಮೀರಿದ ಹಳೆಯ ಅಡುಗೆಗಳು ಹೊಸತರ ವೇಷ ತಾಳಿವೆ. ಇಡ್ಲಿ, ದೋಸೆ, ಗೋಭಿ ಮಂಚೂರಿಯನ್ನು, ಉಪ್ಪಿಟ್ಟು, ಕೇಸರಿಬಾತು, ಜಾಮೂನು, ಇತ್ತೀಚೆಗೆ ಒಳಗೆ ಬಂದ ಪನೀರ್ ಕೂಡ ಅಡುಗೆ ಮನೆಯಲ್ಲಿ ಸ್ಥಾನ ಪಡೆದಿದೆ. ನಮ್ಮ ಅಡುಗೆ ಮನೆಗಳೇನೋ ಜಾತ್ಯತೀತವಾಗಿವೆ, ಎಲ್ಲಾ ಪ್ರಾಂತದ ಅಡುಗೆಯನ್ನೂ ಕಲಿತು ಮಾಡಿ ಉಣ್ಣುವ-ಉಣ್ಣಿಸುವ ಹುಮ್ಮಸ್ಸಿದೆ. ಆ ಸಂಸ್ಕಾರ ಮನಸ್ಸಿಗೂ ತಾಗಿ ಬಿಟ್ಟರೆ ಒಂದು ಆರೋಗ್ಯವಂತ ಸಮಾಜ ಈಗಲೇ ನನಸಾದೀತು.

Writer - ಪ್ರೀತಿ ನಾಗರಾಜ್

contributor

Editor - ಪ್ರೀತಿ ನಾಗರಾಜ್

contributor

Similar News

ಗಾಂಧೀಜಿ