ಬೆಂಗಳೂರು: ಗುಂಡು ಹಾರಿಸಿ ಆರೋಪಿಯ ಬಂಧನ

Update: 2018-12-13 13:47 GMT

ಬೆಂಗಳೂರು, ಡಿ.13: ನಗರದಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಪೊಲೀಸರ ಪಿಸ್ತೂಲುಗಳು ಘರ್ಜಿಸುತ್ತಿದ್ದು, ಅಪ್ರಾಪ್ತರನ್ನೊಳಗೊಂಡ ತಂಡವೊಂದನ್ನು ಕಟ್ಟಿಕೊಂಡು ಕಳ್ಳತನ, ಸುಲಿಗೆ ಹಾಗೂ ಕೊಲೆ ಮಾಡಿ ತಲೆಮರೆಸಿಕೊಂಡು ಸುತ್ತಾಡುತ್ತಿದ್ದ ಆರೋಪಿ ಮುರಳಿ ಅಲಿಯಾಸ್ ಮುರಳಿಧರನ್ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಬೈಯಪ್ಪನಹಳ್ಳಿ ಠಾಣಾ ವ್ಯಾಪ್ತಿಯ ಕತ್ತಾಳಿಪಾಳ್ಯ ಮುಖ್ಯರಸ್ತೆಯಲ್ಲಿ ಇನ್‌ಸ್ಪೆಕ್ಟರ್ ಜಿ.ಪಿ.ರಮೇಶ್ ಮತ್ತು ಸಿಬ್ಬಂದಿ ವರ್ಗದವರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬೆಳಗ್ಗೆ 3.30ರ ಸಮಯದಲ್ಲಿ ಆರೋಪಿ ಮುರುಳಿಧರನ್ ಹೋಂಡಾ ಆಕ್ಟೀವಾದಲ್ಲಿ ಅತಿವೇಗವಾಗಿ ಚಲಿಸುತ್ತಿದ್ದುದನ್ನು ಗಮನಿಸಿದ ಪೊಲೀಸರು ಅವರ ವಾಹನ ತಡೆದು ಶರಣಾಗುವಂತೆ ಸೂಚಿಸಿದ್ದಾರೆ.

ಆದರೆ, ಮುರುಳಿಧರನ್ ಸ್ಥಳದಲ್ಲಿದ್ದ ಹೆಡ್‌ಕಾನ್‌ಸ್ಟೇಬಲ್ ವಿಜಯಕುಮಾರ್ ಮೇಲೆ ಚಾಕುವಿನ ಮೂಲಕ ಹಲ್ಲೆ ನಡೆಸಲು ಮುಂದಾಗಿದ್ದರು. ಪೊಲೀಸರು ಎಚ್ಚರಿಕೆ ನೀಡಿದರೂ ಲೆಕ್ಕಿಸಲಿಲ್ಲ. ಹೀಗಾಗಿ, ಪೊಲೀಸರು ತಮ್ಮ ಆತ್ಮರಕ್ಷಣೆಗಾಗಿ ಹಾರಿಸಿದ ಗುಂಡು ಆರೋಪಿಯ ಎಡಗಾಲಿಗೆ ತಗುಲಿದ್ದು, ಬೋರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಗಾಯಗೊಂಡಿದ್ದ ಹೆಡ್‌ಕಾನ್‌ಸ್ಟೇಬಲ್‌ಗೂ ಚಿಕಿತ್ಸೆ ಕೊಡಿಸಲಾಗಿದೆ.

ಗ್ಯಾಂಗ್ ಕಟ್ಟಿಕೊಂಡಿದ್ದ ಆರೋಪಿ: ಮೋಜಿನ ಜೀವನ ನಡೆಸಲು ಕಳ್ಳತನ, ಸುಲಿಗೆ ಮಾಡುತ್ತಿದ್ದ ಮುರಳೀಧರನ್, ಇಬ್ಬರು ಅಪ್ರಾಪ್ತರನ್ನೊಳಗೊಂಡ ಗ್ಯಾಂಗ್ ಕಟ್ಟಿಕೊಂಡಿದ್ದ. ಮಧ್ಯರಾತ್ರಿ ವೇಳೆ ಸ್ಕೂಟರ್‌ನಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ಸುಲಿಗೆ, ಕಳ್ಳತನ ಮಾಡಿ ಎಲ್ಲರೂ ಸೇರಿ ಮೋಜು ಮಾಡುತ್ತಿದ್ದರು. ಬೈಯಪ್ಪನಹಳ್ಳಿ ಸೇರಿ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 50ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಗ್ಯಾಂಗ್, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದುದು ಸವಾಲಾಗಿ ಪರಿಣಮಿಸಿತ್ತು. ಆರೋಪಿಯ ಸಹಚರರಾಗಿದ್ದ ಪೀಟರ್, ವಿಷ್ಣು ಮತ್ತು ವಜ್ರೇಶ್‌ನನ್ನು ದಸ್ತಗಿರಿ ಮಾಡಲಾಗಿದೆ. 

ಸದ್ದು ಮಾಡಿದ ಪಿಸ್ತೂಲ್

ಕಳೆದ ನವೆಂಬರ್‌ನಿಂದ ಇಂದಿನವರೆಗೂ ಸುಮಾರು ಆರು ಬಾರಿ ನಗರದ ವಿವಿಧ ಕಡೆಗಳಲ್ಲಿ ಪೊಲೀಸ್ ಪಿಸ್ತೂಲ್ ಘರ್ಜಿಸಿದೆ. ಅಲ್ಲದೆ, ಡಿಸೆಂಬರ್‌ನಲ್ಲಿಯೇ ನಾಲ್ಕು ಬಾರಿ ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ವಿಯಾಗಿದ್ದು, ಮೇಲಾಧಿಕಾರಿಗಳಿಂದ ಶ್ಲಾಘನೆಯನ್ನು ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News