ರೈತರ ಸಮಸ್ಯೆಗಳಿಗೆ ಸ್ಪಂದಿಸದ ಸರಕಾರಗಳ ವಿರುದ್ಧ ಉಗ್ರ ಹೋರಾಟ: ರೈತ ಸಂಘ ಎಚ್ಚರಿಕೆ

Update: 2018-12-13 14:15 GMT

ಬೆಂಗಳೂರು, ಡಿ.13: ರೈತರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸದ ಕೇಂದ್ರ-ರಾಜ್ಯ ಸರಕಾರಗಳ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿದೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜೆ.ಎ.ಲಕ್ಷ್ಮೀನಾರಾಯಣ ಗೌಡ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಿಂದೇಟು ಹಾಕುತ್ತಿದ್ದು, ಅನ್ನದಾತನು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಘೋಷಿಸಲಿ ಎಂದು ಒತ್ತಾಯಿಸಿದರು.

ರಾಜ್ಯ ಸರಕಾರ ಸಾಲಮನ್ನಾಕ್ಕೆ ಹಲವಾರು ಷರತ್ತುಗಳನ್ನು ವಿಧಿಸಿದ್ದು, ಈ ಷರತ್ತುಗಳನ್ನು ರೈತರಿಂದ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಯಾವುದೇ ಷರತ್ತು ವಿಧಿಸದೇ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಹಾಗೂ ಈಗಾಗಲೇ ಕೇಂದ್ರ ಸರಕಾರವು ರಾಗಿ, ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ನಿಗದಿ ಮಾಡಿದ್ದು, ರಾಜ್ಯ ಸರಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು, ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಆಗ್ರಹಿಸಿದರು.

ರಾಜ್ಯದಲ್ಲಿ ರೇಷ್ಮೆ ಬೆಳೆಯನ್ನು ಶೇ.80ರಷ್ಟು ಬೆಳೆಯುತ್ತಿದ್ದು, ರೇಷ್ಮೆ ಬೆಳೆಗೆ ಯಾವುದೇ ವೈಜ್ಞಾನಿಕ ಬೆಲೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿಗದಿ ಮಾಡಿಲ್ಲ. ರೇಷ್ಮೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ರೇಷ್ಮೆ ಆಮದಿಗೆ ಕಡಿವಾಣ ಹಾಕಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಈ ಹಿಂದಿನ ಸರಕಾರ ಜಿಂಕೆ ಹಾವಳಿಯನ್ನು ತಪ್ಪಿಸಲು ಜಿಂಕೆ ವನವನ್ನು ನಿರ್ಮಿಸುವುದಾಗಿ ಆಶ್ವಾಸನೆ ನೀಡಿತ್ತು. ಅದನ್ನು ಈಡೇರಿಸಿಲ್ಲ. ಅಲ್ಲದೆ, ಕೃಷಿ ಆಧಾರಿತ ಜಮೀನಿನ ಮೇಲೆ ಸಾಲ ತೆಗೆದುಕೊಂಡಿರುವ ರೈತರಿಗೆ ವಿನಾಕಾರಣ ಶ್ರೀರಾಮ್ ಫೈನಾನ್ಸ್ ನೋಟಿಸ್ ನೀಡುತ್ತಿದೆ ಎಂದು ಆರೋಪಿಸಿದರು.

ಬೆಂಗಳೂರಿನ ಮೆಟ್ರೋ ನಿಲ್ದಾಣಕ್ಕೆ ಪ್ರೊ.ನಂಜುಂಡಸ್ವಾಮಿ ಹೆಸರಿಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News