ಬೆಂಗಳೂರು: ಮಾದಕ ವಸ್ತು ಮಾರಾಟ; ಮೂವರು ಆರೋಪಿಗಳ ಸೆರೆ

Update: 2018-12-13 14:20 GMT

ಬೆಂಗಳೂರು, ಡಿ. 13: ಮಕ್ಕಳ ಶೂ ಸಾಕ್ಸ್‌ನಲ್ಲಿ ಮಾದಕ ವಸ್ಸುಗಳನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ನೈಜಿರೀಯಾ ಹಾಗೂ ಕಾಂಗೂ ದೇಶದ ಇಬ್ಬರು ಸೇರಿ ಮೂರು ವಿದೇಶಿಗರನ್ನು ಕೋರಮಂಗಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ನೈಜಿರೀಯಾದ ಅಮೀರಾ ಮೂಲದ ಜಾನ್ ಕೆನಡಿ(37) ಕಾಂಗೋದ ಕಿನ್ಶಶಾ ಮೂಲದ ಕೆನಾನ್ ಅಡ್ಲಿ (32) ಹಾಗೂ ಬಿನ್ನಿಮಿಲ್‌ನ ಕೇಶವ ನಗರದ ಆದಿತ್ಯ ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಸುಮಾರು 5 ಲಕ್ಷದ ಮೌಲ್ಯದ 21 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಮಾತ್ರೆಗಳು ಕ್ರಿಸ್ಟೆಲ್‌ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ಹೆಣ್ಣೂರಿನ ಮುದ್ದಣ್ಣ ಲೇ ಔಟ್‌ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದ ಜಾನ್ ಕೆನಡಿ ಬಳಿ ನೈಜಿರೀಯಾದ ಪಾಸ್‌ಪೋರ್ಟ್, ವಿದ್ಯಾರ್ಥಿ ವೀಸಾ ಪ್ರತಿನಕಲಿ ಸಿಕ್ಕಿದ್ದು, ಅಸಲು ಪ್ರತಿಯನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಆದರೆ ಆತನ ಬಳಿಯಿದ್ದ ಪಾಸ್‌ಪೋರ್ಟ್ ವೀಸಾ ಪರಿಶೀಲನೆ ಮೇಲೆ ನಕಲಿ ಎನ್ನುವುದು ಕಂಡುಬಂದಿದೆ.

ಆರೋಪಿಯು ನಕಲಿ ಭಾರತೀಯ ವೀಸಾ ಸೃಷ್ಟಿಸಿರುವುದು ಅಲ್ಲದೆ ಪಾಸ್‌ಪೋರ್ಟ್ ನೈಜತೆ ಕುರಿತಂತೆ ನೈಜಿರೀಯಾ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದ. ಮತ್ತೊಬ್ಬ ಆರೋಪಿ ಕೆನಾನ್ ವಿದ್ಯಾರ್ಥಿ ವೀಸಾ ಪಡೆದು 2012 ರಲ್ಲಿ ಭಾರತಕ್ಕೆ ಬಂದಿದ್ದು, ಅದೇ ವರ್ಷದ ಸೆಪ್ಟೆಂಬರ್‌ನಲ್ಲಿ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಇಲ್ಲಿಯೇ ನೆಲೆಸಿ ಮಾದಕ ವಸ್ತುಗಳ ಸಾಗಣೆ ಮಾರಾಟದಲ್ಲಿ ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ

ಪಬ್‌ವೊಂದರಲ್ಲಿ ಪಾರ್ಟಿ ಮಾಡುವ ಸಂದರ್ಭದಲ್ಲಿ ಈ ಇಬ್ಬರೂ ಸೇರಿ ಮತ್ತೊಬ್ಬ ಆರೋಪಿ ಆದಿತ್ಯ ಎಂಬಾತನನ್ನು ಪರಿಚಯ ಮಾಡಿಕೊಂಡಿದ್ದು, ಆತನನ್ನು ಮಾದಕ ವಸ್ತು ದಂಧೆಗೆ ಸೇರ್ಪಡೆ ಮಾಡಿಕೊಂಡಿದ್ದರು. ಅಲ್ಲದೆ, ಇನ್ನೂ ಒಬ್ಬ ವಿದೇಶಿ ಪ್ರಜೆ ಇವರ ಗ್ಯಾಂಗ್‌ನಲ್ಲಿರುವ ಮಾಹಿತಿಯಿದ್ದು, ಆತನಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಕೋರಮಂಗಲದ 8ನೇ ಬ್ಲಾಕ್‌ನ ಅಂಬೇಡ್ಕರ್ ಪಾರ್ಕ್ ಹತ್ತಿರವಿರುವ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಈ ವೇಳೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News