ಬೆಂಗಳೂರು: ಗೋದಾಮಿನ ರ‍್ಯಾಕ್ ಕುಸಿತ; ಮೂವರು ಕಾರ್ಮಿಕರು ಮೃತ್ಯು

Update: 2018-12-13 15:37 GMT

ಬೆಂಗಳೂರು, ಡಿ.13: ನಗರದ ಹೊರವಲಯದ ವೈಟ್‌ಫೀಲ್ಡ್ ಬಳಿಯ ಸೀಗೇಹಳ್ಳಿ ರಸ್ತೆಯಲ್ಲಿರುವ ಲಾಜಿಸ್ಟಿಕ್ಸ್ ಕಂಪೆನಿಯ ಗೋದಾಮಿನಲ್ಲಿದ್ದ ರ‍್ಯಾಕ್‌ಗಳು ಕುಸಿದು ಮೂವರು ಕಾರ್ಮಿಕರು ಅದರಡಿ ಸಿಲುಕಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ವೈಟ್‌ಫೀಲ್ಡ್ ಬಳಿಯ ಹೋಪ್‌ಫಾರ್ಮ್ ಬಳಿ ಇರುವ ಲಾಜಿಸ್ಟಿಕ್ಸ್ ಕಂಪೆನಿಯು ವಿವಿಧ ಮಾಲ್‌ಗಳಿಗೆ ವಸ್ತುಗಳನ್ನು ಪೂರೈಸುವ ಕಂಪನಿಯಾಗಿದ್ದು, ಇದರ ಗೋದಾಮಿನಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಕಬ್ಬಿಣದ ರ‍್ಯಾಕ್‌ಗಳು ಕುಸಿದು ಬಿದ್ದ ಪರಿಣಾಮ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಗೋದಾಮಿನ ರ‍್ಯಾಕ್‌ಗಳ ಕುಸಿತದಿಂದಾಗಿ ಕಾರ್ಮಿಕರಾದ ಫಾರುಖ್ ಮತ್ತು ಸುಭಾಷ್ ಸೇರಿದಂತೆ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇನ್ನು ಅವಶೇಷಗಳಡಿ ಸಿಲುಕಿದ್ದ ಆರು ಜನ ಕಾರ್ಮಿಕರನ್ನು ಅಗ್ನಿಶಾಮಕ ದಳದ ಪೊಲೀಸರು ರಕ್ಷಿಸಿದ್ದಾರೆ. 

ಲಾಜಿಸ್ಟಿಕ್ಸ್ ಕಂಪೆನಿಯ ಗೋದಾಮಿನ ರ‍್ಯಾಕ್‌ಗಳು ಗುರುವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಕುಸಿದು ಬಿದ್ದವು. ಅದರ ಅಡಿಯಲ್ಲಿ ಸುಮಾರು 9ಕ್ಕೂ ಹೆಚ್ಚು ಜನ ಸಿಲುಕಿರುವ ಶಂಕೆ ವ್ಯಕ್ತಪಡಿಸಲಾಗಿತ್ತು. ಆ ಹಿನ್ನೆಲೆಯಲ್ಲಿ ಕಾಡುಗೋಡಿಯ ಅಗ್ನಿಶಾಮಕ ದಳದ ಪೊಲೀಸರು ಸತತ ಏಳು ಗಂಟೆಗಳ ಕಾರ್ಯಾಚರಣೆ ಕೈಗೊಳ್ಳುವ ಮೂಲಕ ಆರು ಜನರನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಇನ್ನುಳಿದ ಮೂವರು ಅವಶೇಷಗಳಡಿ ಸಿಲುಕಿ ಅಸುನೀಗಿದ್ದರು. ಅವರ ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದಾರೆ.

ಗೋದಾಮಿನ ರ‍್ಯಾಕ್ ಕುಸಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ರಕ್ಷಣಾ ಸಿಬ್ಬಂದಿ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅವಶೇಷಗಳ ಅಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಿದ ಬಳಿಕ ಪರಿಹಾರ ಕಾರ್ಯ ಮುಂದುವರೆಸಲಾಗುತ್ತದೆ. ಆದರೆ, ಗೋದಾಮು ರ‍್ಯಾಕ್ ಕುಸಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News