ಕೇಂದ್ರ ಸರಕಾರದ ಸಾಲ ಮನ್ನಾ ಕುರಿತ ಚಿಂತನೆ ಬರೀ ರಾಜಕೀಯ ತಂತ್ರ: ಡಿಸಿಎಂ ಪರಮೇಶ್ವರ್

Update: 2018-12-13 16:09 GMT

ಬೆಳಗಾವಿ,ಡಿ.13: ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಕೇಂದ್ರ ಸರಕಾರ ರೈತರ ಸಾಲಮನ್ನಾ ಮಾಡುವ ಚಿಂತನೆ ನಡೆಸಿರುವುದು ರಾಜಕೀಯ ತಂತ್ರ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟೀಕಿಸಿದರು.

ಗುರುವಾರ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 6 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುವ ಪ್ರಸ್ತಾಪ ಮಾಡಲಾಗುತ್ತಿದೆ. ಇದು ಚುನಾವಣೆಯ ತಂತ್ರ ಅಲ್ಲದೆ ಮತ್ತೇನೂ ಅಲ್ಲ. ಈಗಾಗಲೇ ಸಾವಿರಾರು ರೈತರು ಸಾಲದ ಸುಳಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮೊದಲೇ ಸಾಲ ಮನ್ನಾ ಮಾಡುವ ತೀರ್ಮಾನ ಮಾಡಿದ್ದರೆ ಸಾವಿರಾರು ರೈತರ ಪ್ರಾಣವಾದರೂ ಉಳಿಯುತ್ತಿತ್ತು ಎಂದರು.

ಈ ಹಿಂದೆ ಯುಪಿಎ ಸರಕಾರ 72 ಸಾವಿರ ಕೋಟಿ ಸಾಲ ಮನ್ನಾ ಮಾಡಿತ್ತು. ಅದರಂತೆ ಕರ್ನಾಟಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ  ಸುಮಾರು 40 ಸಾವಿರ ಕೋಟಿ ಸಾಲ ಮನ್ನಾ ಮಾಡುವಂತೆ ಪ್ರಧಾನಿಯವರಿಗೆ ಮನವಿ ಮಾಡಲು ನಿಯೋಗವನ್ನು ಕರೆದೊಯ್ದರೂ ಸ್ಪಂದಿಸದ  ಮೋದಿಯವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಾಲ ಮನ್ನಾ ಪ್ರಸ್ತಾಪ ಮಾಡುತ್ತಿರುವುದು ರಾಜಕೀಯ ತಂತ್ರವಷ್ಟೆ ಎಂದು ವಾಗ್ದಾಳಿ ನಡೆಸಿದರು.

ಒತ್ತಡ ಹಾಕಿಲ್ಲ: ಮೈತ್ರಿ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ಒತ್ತಡವೂ ಇಲ್ಲ ಎಂದು ಸ್ವಷ್ಟಪಡಿಸಿದ ಪರಮೇಶ್ವರ್, ವರಿಷ್ಟರ ಆದೇಶದಂತೆ ನಡೆದು  ಕೊಳ್ಳುತ್ತೇವೆ. ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News