ಕಾಲಾವಧಿಯೊಳಗೆ ನಿವೃತ್ತಿ ವೇತನ ಪ್ರಕರಣ ಇತ್ಯರ್ಥಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ಸೂಚನೆ

Update: 2018-12-13 16:16 GMT

ಬೆಂಗಳೂರು, ಡಿ.13: ಸರಕಾರಿ ನೌಕರರ ನಿವೃತ್ತಿಯ ನಂತರ ಪಿಂಚಣಿ ಪ್ರಕರಣಗಳನ್ನು ನಿಗದಿತ ಕಾಲಾವಧಿಯೊಳಗೆ ಚುರುಕಾಗಿ ಹಾಗೂ ತ್ವರಿತವಾಗಿ ಇತ್ಯರ್ಥಗೊಳಿಸಬೇಕು ಎಂದು ಸರಕಾರದ ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಸೂಚಿಸಿದ್ದಾರೆ.

ಸರಕಾರಿ ನೌಕರರ ಮತ್ತು ಅಧಿಕಾರಿಗಳ ನಿವೃತ್ತಿ ವೇತನ ಪ್ರಕರಣಗಳನ್ನು ನಿಗದಿತ ಕಾಲಾವಧಿಯೊಳಗೆ ಇತ್ಯರ್ಥಪಡಿಸಲು ತೀರಾ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಹೀಗಾಗಿ, ಇನ್ನು ಮುಂದೆ ವಯೋನಿವೃತ್ತಿ ಹೊಂದಲಿರುವ ಸರಕಾರಿ ನೌಕರರ ನಿವೃತ್ತಿ ವೇತನದ ದಾಖಲೆಗಳನ್ನು 12 ತಿಂಗಳ ಮುಂಚಿತವಾಗಿ ತಯಾರಿಸಲು ಆರಂಭಿಸಬೇಕು.

ಅದೇ ರೀತಿ ತಯಾರಿಸಿದ ಸಂಪೂರ್ಣ ದಾಖಲೆಗಳನ್ನು ವಯೋನಿವೃತ್ತಿಗೆ ಕನಿಷ್ಠ ಮೂರು ತಿಂಗಳ ಮುಂಚಿತವಾಗಿ ಮಹಾಲೇಖಪಾಲರಿಗೆ ಕಡ್ಡಾಯವಾಗಿ ಕಳುಹಿಸಬೇಕು. ವಯೋನಿವೃತ್ತಿ ಹೊಂದಲಿರುವ ಪತ್ರಾಂಕಿತ ಸರಕಾರಿ ಅಧಿಕಾರಿಗಳ ಸಂಬಂಧದಲ್ಲಿ ನಮೂನೆ 7ಎ ರಲ್ಲಿ ಅವಶ್ಯಕ ಮಾಹಿತಿಯನ್ನು ಮಂಜೂರಾತಿಯೊಂದಿಗೆ ವಯೋನಿವೃತ್ತಿಯ ದಿನಾಂಕಕ್ಕೆ ಒಂದು ತಿಂಗಳು ಮುಂಚಿತವಾಗಿ ಮಹಾಲೇಖಪಾಲರಿಗೆ ಕಡ್ಡಾಯವಾಗಿ ಕಳುಹಿಸುವ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News