ಬಿಬಿಎಂಪಿ: ನಾಗರಾಜ್‌ಗೆ ನಗರ ಯೋಜನೆ ಸ್ಥಾಯಿ ಸಮಿತಿ ಪಟ್ಟ ?

Update: 2018-12-13 16:20 GMT

ಬೆಂಗಳೂರು, ಡಿ.13: ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಬಿಜೆಪಿ ಪಾಲಿಕೆ ಸದಸ್ಯ ನಾಗರಾಜ್‌ಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾಮ ಸಿಗುವ ಸಾಧ್ಯತೆಯಿದೆ.

ಶುಕ್ರವಾರ ನಡೆಯಲಿರುವ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ವೇಳೆ 9 ಜನರಿರುವ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಭೈರಸಂದ್ರ ನಾಗರಾಜ್ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಪ್ರತಿ ಸ್ಥಾಯಿ ಸಮಿತಿಯಲ್ಲಿ ತಲಾ 11 ಮಂದಿ ಸದಸ್ಯರಿರಬೇಕು. ಆದರೆ, ನಗರ ಯೋಜನೆ ಸ್ಥಾಯಿ ಸಮಿತಿಯಲ್ಲಿ ಕೇವಲ 9 ಮಂದಿ ಸದಸ್ಯರಿದ್ದಾರೆ. ಹೀಗಾಗಿ ಉಳಿದ ಇಬ್ಬರು ಸದಸ್ಯರ ಆಯ್ಕೆಗೆ ಮತ್ತೆ ಚುನಾವಣೆ ನಡೆಸಬೇಕಾಗಿರುವುದು ಪ್ರಾದೇಶಿಕ ಆಯುಕ್ತರ ಕರ್ತವ್ಯವಾಗಿದೆ.

ಖಾಲಿ ಇರುವ ಇಬ್ಬರು ಸದಸ್ಯರ ಆಯ್ಕೆಗೆ ಚುನಾವಣೆ ನಡೆಯುವ ಮುನ್ನವೇ ಉಳಿದ 9 ಸದಸ್ಯರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಕಾನೂನಿನಲ್ಲಿ ಅವಕಾಶವಿದೆ. ಹೀಗಾಗಿ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬೈರಸಂದ್ರ ನಾಗರಾಜ್‌ರನ್ನು ನೇಮಕ ಮಾಡಲು ಮಾಜಿ ಸಚಿವ ಹಾಗೂ ಶಾಸಕ ರಾಮಲಿಂಗಾರೆಡ್ಡಿ ಒಲವು ತೋರಿದ್ದಾರೆ ಎನ್ನಲಾಗಿದೆ.

ಎಲ್ಲ 11 ಸಮಿತಿಗಳ ಆಯ್ಕೆಗೆ ಯಾವುದೇ ಚಕಾರವೆತ್ತದ ಬಿಜೆಪಿ ಸದಸ್ಯರು ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಪಕ್ಷೇತರ ಸದಸ್ಯ ಚಂದ್ರಪ್ಪರೆಡ್ಡಿ ಅವರ ನೇಮಕಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಪ್ರತಿ ಮೇಯರ್ ಚುನಾವಣೆ ಸಂದರ್ಭದಲ್ಲೂ ಬಿಜೆಪಿಯೊಂದಿಗೆ ಮಾತುಕತೆ ನಡೆಸಿ ಮತದಾನದ ವೇಳೆಗೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದೊಂದಿಗೆ ಕಾಣಿಸಿಕೊಳ್ಳುತ್ತ ಕೇಸರಿ ಪಾಳಯಕ್ಕೆ ಕಾಟ ಕೊಡುತ್ತಿದ್ದ ಚಂದ್ರಪ್ಪರೆಡ್ಡಿಗೆ ತಕ್ಕ ಪಾಠ ಕಲಿಸಲು ಬಿಜೆಪಿ ಮುಖಂಡರು ಕಾದಿದ್ದರು.

ಚಂದ್ರಪ್ಪರೆಡ್ಡಿ ಅವರಿಗೆ ಅಧಿಕಾರ ದಕ್ಕಿಸಿಕೊಡಬಾರದು ಎಂದು ಬಿಜೆಪಿ ಮುಖಂಡರು ಪ್ಲಾನ್ ಮಾಡಿದ್ದು, ಅದರಂತೆ ಸ್ಥಾಯಿ ಸಮಿತಿಗಳ ಚುನಾವಣೆ ವೇಳೆ ಯಾವುದೇ ಕಾರಣಕ್ಕೂ ರೆಡ್ಡಿಯನ್ನು ನಗರ ಯೋಜನೆ ಸಮಿತಿಗೆ ನೇಮಕ ಮಾಡಬಾರದು ಎಂದು ಪಾಲಿಕೆ ಸಭೆಯಲ್ಲಿ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಚಂದ್ರಪ್ಪರೆಡ್ಡಿ ಚುನಾವಣೆಯಿಂದ ಹಿಂದೆ ಸರಿಯುವಂತಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News