ಡಿ.14: ಬಿಬಿಎಂಪಿಯ 12 ಸ್ಥಾಯಿ ಸಮಿತಿಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ

Update: 2018-12-13 16:27 GMT

ಬೆಂಗಳೂರು, ಡಿ.13: ಬೃಹತ್ ಬೆಂಗಳೂರು ನಗರ ಪಾಲಿಕೆಯ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆಯು ಶುಕ್ರವಾರ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ನಡೆಯಲಿದ್ದು, ನಗರದ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ ಏರ್ಪಟ್ಟಿದೆ.

ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಸಂದರ್ಭದಲ್ಲಿ ಬಿಜೆಪಿ ತಂತ್ರಗಾರಿಕೆಯಿಂದಾಗಿ ನಗರ ಯೋಜನೆ ಸ್ಥಾಯಿ ಸಮಿತಿಗೆ ಕೇವಲ 9 ಮಂದಿ ಸದಸ್ಯರು ಆಯ್ಕೆಯಾಗಿದ್ದಾರೆ. ಆ ಪೈಕಿ ಮೈತ್ರಿ ಪಕ್ಷದ ನಾಲ್ಕು ಸದಸ್ಯರಿದ್ದರೆ, ಬಿಜೆಪಿ ಸದಸ್ಯರು 5 ಸದಸ್ಯರಿದ್ದಾರೆ. ಆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುತ್ತಿದೆ.

ಜಯನಗರ ಉಪಚುನಾವಣೆ ವೇಳೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಗೆಲುವಿಗೆ ಬೈರಸಂದ್ರ ವಾರ್ಡ್‌ನ ಬಿಜೆಪಿ ಪಾಲಿಕೆ ಸದಸ್ಯ ನಾಗರಾಜು ಅವರು ನೆರವಾಗಿದ್ದರು. ಆ ಹಿನ್ನೆಲೆಯಲ್ಲಿ ಅವರಿಗೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ.

ಬಿಜೆಪಿಗೆ ತಿರುಗೇಟು ನೀಡಲು ಸಿದ್ಧತೆ: ನಾಗರಾಜು ಅವರಿಗೆ ಅಧ್ಯಕ್ಷ ಸ್ಥಾನ ತಪ್ಪಿಸಲು ಬಿಜೆಪಿ ಹೆಣೆದಿರುವ ತಂತ್ರಕ್ಕೆ ಪ್ರತಿತಂತ್ರ ರೂಪಿಸಿರುವ ಕಾಂಗ್ರೆಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ವೇಳೆ ಸಮಿತಿ ಸದಸ್ಯರ ಪೈಕಿ ಮೂರನೇ ಎರಡರಷ್ಟು ಅಂದರೆ, ಸಮಿತಿಯಲ್ಲಿ 9 ಸದಸ್ಯರ ಪೈಕಿ, ಚುನಾವಣೆಗೆ ಕನಿಷ್ಠ 5 ಸದಸ್ಯರು ಹಾಜರಿರಬೇಕಾಗುತ್ತದೆ.

ಈ ವೇಳೆ ಮಮತಾ ಶರವಣ ಅವರು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ಸಮಿತಿಯಲ್ಲಿರುವ ಮೈತ್ರಿ ಆಡಳಿತದ ನಾಲ್ವರು ಸದಸ್ಯರನ್ನು ಚುಣಾವಣೆಯಲ್ಲಿ ಗೈರಾಗುವಂತೆ ಮಾಡಲು ತೀರ್ಮಾನಿಸಲಾಗಿದೆ. ಆ ಮೂಲಕ ಶುಕ್ರವಾರ ಚುನಾವಣೆ ನಡೆಯದಂತೆ ನೋಡಿಕೊಂಡು ಬಿಜೆಪಿಗೆ ತಿರುಗೇಟು ನೀಡಲು ಸಿದ್ಧತೆ ಮಾಡಿಕೊಂಡಿದೆ.

ಸಂಭಾವ್ಯ ಅಧ್ಯಕ್ಷರ ಪಟ್ಟಿ: ವಾರ್ಡ್ ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿ-ಉಮ್ಮು ಸಲ್ಮಾ, ಶಿಕ್ಷಣ ಸ್ಥಾಯಿ ಸಮಿತಿ- ಇಮ್ರಾನ್ ಪಾಷಾ, ಮಾರುಕಟ್ಟೆ ಸ್ಥಾಯಿ ಸಮಿತಿ- ಫರೀದಾ ಇಸ್ತಿಯಾಕ್, ನಗರ ಯೋಜನೆ ಸ್ಥಾಯಿ ಸಮಿತಿ- ನಾಗರಾಜು/ಮಮತಾ ಶರವಣ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ- ಹೇಮಲತಾ ಗೋಪಾಲಯ್ಯ, ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ- ಲಾವಣ್ಯ ಗಣೇಶ್.

ಅಪೀಲು ಸ್ಥಾಯಿ ಸಮಿತಿ- ಸುಜಾತ ರಮೇಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಸೌಮ್ಯ ಶಿವಕುಮಾರ್, ಲೆಕ್ಕಪತ್ರ ಸ್ಥಾಯಿ ಸಮಿತಿ- ವೇಲುನಾಯ್ಕರ್, ಆರೋಗ್ಯ ಸ್ಥಾಯಿ ಸಮಿತಿ- ಮುಜಾಹಿದ್ ಪಾಷಾ, ಆಡಳಿತ ಮತ್ತು ಸುಧಾರಣಾ ಸ್ಥಾಯಿ ಸಮಿತಿ- ಆನಂದ್, ತೋಟಗಾರಿಕೆ ಸ್ಥಾಯಿ ಸಮಿತಿ- ಐಶ್ವರ್ಯ.

11 ಸ್ಥಾಯಿ ಸಮಿತಿಗಳಿಗೆ 130 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ನಗರ ಯೋಜನೆ ಸ್ಥಾಯಿ ಸಮಿತಿಗೆ 9 ಸದಸ್ಯರು ಮಾತ್ರ ಆಯ್ಕೆಯಾಗಿದ್ದಾರೆ. ಹೀಗಾಗಿ, ಮೇಯರ್ ನೇತೃತ್ವದಲ್ಲಿ ಅಧ್ಯಕ್ಷ ಆಯ್ಕೆ ಚುನಾವಣೆ ನಡೆಯಲಿದ್ದು, ಸಮಿತಿಯಲ್ಲಿರುವ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News