ಮಕ್ಕಳಲ್ಲಿ ಓದುವ ಅಭ್ಯಾಸ ಉತ್ತೇಜಿಸುವ ಕಿಡೋ ಪುಸ್ತಕಗಳು: ಪತ್ರಕರ್ತ ಅಬ್ದುಲ್ ಹಕೀಂ

Update: 2018-12-13 16:43 GMT

ಬೆಂಗಳೂರು, ಡಿ.13: ಮಕ್ಕಳ ಪ್ರಗತಿಗೆ ಅತೀ ಮುಖ್ಯವಾದ ಓದುವ ಹವ್ಯಾಸ, ಉಲ್ಲಾಸ, ಗೆಳೆಯರೊಂದಿಗೆ ಬೆರೆತು ಆಡುತ್ತಿದ್ದ ಕ್ರೀಡಾ ಚಟುವಟಿಕೆಗಳನ್ನು ಇವತ್ತು ತಂತ್ರಜ್ಞಾನ ಕಸಿದುಕೊಳ್ಳುತ್ತಿದೆ. ಪುನಃ ಮಕ್ಕಳಲ್ಲಿ ಓದುವ ಅಭ್ಯಾಸವನ್ನು ಉತ್ತೇಜಿಸಲು ಕಿಡೋ ಪುಸ್ತಕಗಳ ಮೂಲಕ ಹೊಸ ಪರಿಕಲ್ಪನೆಯನ್ನು ತರಲಾಗಿದೆ ಎಂದು ಪತ್ರಕರ್ತ ಅಬ್ದುಲ್ ಹಕೀಂ ಅಭಿಪ್ರಾಯಪಟ್ಟಿದ್ದಾರೆ. 

ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಿಡೋ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕಿಡೋ ಪುಸ್ತಕ ಮಕ್ಕಳಿಗೆ ಒಂದು ಹೊಸ ಅನುಭವವನ್ನು ನೀಡುತ್ತದೆ. ಅವರ ಕಲ್ಪನಾಶಕ್ತಿಯನ್ನು ಉತ್ತೇಜಿಸಿ ಕಥೆಯಲ್ಲಿನ ರಹಸ್ಯಾತ್ಮಕ ಅಂಶಗಳನ್ನು ತಾವೇ ಬಗೆಹರಿಸುವುದರ ಮೂಲಕ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ತಮ್ಮದೆ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ, ಒಟ್ಟು 18 ಭಾಷೆಗಳಲ್ಲಿ ಕಿಡೋ ಪುಸ್ತಕ ರಚಿಸಲಾಗಿದ್ದು, ಜಗತ್ತಿನಾದ್ಯಂತ 220 ದೇಶಗಳಲ್ಲಿ ಈ ಪುಸ್ತಕ ಲಭ್ಯವಿದೆ. ಇನ್ನು ವಿವಿಧ ಭಾಷೆಯಲ್ಲಿ ಪುಸ್ತಕವನ್ನು ಹೊರತರುವ ಆಲೋಚನೆ ಸಂಸ್ಥೆಗಿದೆ ಎಂದರು.

ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಕ್ಕಳು ಅತೀ ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್ ಫೋನ್, ಟ್ಯಾಬ್‌ಲೆಟ್ ಹಾಗೂ ಕಂಪ್ಯೂಟರ್‌ಗಳನ್ನು ಬಳಸಲು ಉತ್ಸುಕರಾಗಿದ್ದಾರೆ ಹಾಗೂ ಅವುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆಯೇ ಹೊರತು ಬರೆಯುವುದನ್ನು, ಓದುವುದನ್ನು ಹೆಚ್ಚು ಮಾಡುತ್ತಿಲ್ಲ. ಹೀಗಾಗಿ, ಮಕ್ಕಳಿಗೆ ಓದು- ಬರಹ ಬಹಳ ಮುಖ್ಯವಾಗಿದ್ದು, ಕಿಡೋ ಪುಸ್ತಕಗಳ ಆ ಅವಶ್ಯಕತೆಯನ್ನು ತುಂಬಲಿವೆ ಎಂದರು.

ಮಕ್ಕಳನ್ನೇ ಕಥೆಯ ಪ್ರಮುಖ ಪಾತ್ರಗಳನ್ನಾಗಿ ಡಿಜಿಟಲೀಕರಣದೊಂದಿಗೆ ಚಿತ್ರಿಸಿ, ವಿವರಿಸಲಾದ ಕಿಡೋ ಪುಸ್ತಕಗಳನ್ನು ಪೀಕಾಕ್ ಗ್ರೂಪ್ ಹೊರ ತಂದಿರುವುದು ಮಕ್ಕಳಲ್ಲಿ ಕೌಶಲ್ಯ ವೃದ್ಧಿಸಲು ಸಹಕಾರಿಯಾಗುತ್ತದೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News