×
Ad

ಎಲ್ಲೆಂದರಲ್ಲಿ ಕಸ: ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಆಕ್ರೋಶ

Update: 2018-12-13 22:15 IST

ಬೆಂಗಳೂರು, ಡಿ.13: ರಾಜರಾಜೇಶ್ವರಿ ನಗರದಲ್ಲಿ ಕಟ್ಟಡದ ಅವಶೇಷಗಳು ರಸ್ತೆಯಲ್ಲಿ ಬಿದ್ದಿರುವುದು, ರಸ್ತೆ ಅಕ್ಕ-ಪಕ್ಕದಲ್ಲಿ ಎಲ್ಲಿ ನೋಡಿದರೂ ಕಸ, ಘನತ್ಯಾಜ್ಯ ತುಂಬಿಕೊಂಡಿರುವುದಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜರಾಜೇಶ್ವರಿ ನಗರ ಬಿಬಿಎಂಪಿ ವಲಯ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ವೇಳೆ, ಅಧಿಕಾರಿಗಳ ಮೇಲೆ ಕೆಂಡಾಮಂಡಲರಾದ ಮೇಯರ್, ರಸ್ತೆಯಲ್ಲಿ ಬಿದ್ದಿರುವ ಕಸ, ಅವಶೇಷಗಳನ್ನು ಸ್ವಚ್ಛಗೊಳಿಸಲು ನಿಮಗೆ ಏಕೆ ಆಗುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ರಸ್ತೆ, ಖಾಲಿ ನಿವೇಶನಗಳಲ್ಲಿ ಯಾರೇ ಕಸ ಹಾಕಿದರೂ ಅವರ ಮೇಲೆ ಕೇಸು ದಾಖಲು ಮಾಡಿ. ನಗರದ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡಿ ಇಲ್ಲವಾದಲ್ಲಿ ಅಧಿಕಾರಿಗಳು ಯಾರೇ ಆಗಿರಲಿ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು.

ಬೇಜವಾಬ್ದಾರಿಯ ಕೆಲಸದಿಂದ ನಗರ ಸ್ವಚ್ಛತೆಯಲ್ಲಿ ಲೋಪದೋಷಗಳು ಕಂಡುಬಂದಲ್ಲಿ ಆಯಾ ವಾರ್ಡ್‌ಗೆ ಸಂಬಂಧಿಸಿದಪಟ್ಟ ಆರೋಗ್ಯ ಪರೀಕ್ಷಕರು, ಸಹಾಯಕ ಇಂಜಿನಿಯರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಮುಲಾಜಿಲ್ಲದೆ ಅಮಾನತು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಕೈಗಾರಿಕೆ, ವಾಣಿಜ್ಯ ಸಂಕೀರ್ಣ, ಮಾಲ್, ಹೊಟೇಲ್, ಶಿಕ್ಷಣ ಸಂಸ್ಥೆಗಳಿಂದ ನೂರಾರು ಕೋಟಿ ಬಾಕಿ ಇದ್ದರೂ ಏಕೆ ವಸೂಲಿಯಾಗಿಲ್ಲ ಎಂದು ಕಂದಾಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಕೆಲವು ವಾರ್ಡ್‌ಗಳಲ್ಲಿ ಬಿ ಖಾತೆಯಿರುವುದರಿಂದ ಸರಿಯಾದ ಸಮಯಕ್ಕೆ ತೆರಿಗೆ ಕಟ್ಟಿಲ್ಲ. ಶೇ.75 ರಷ್ಟು ತೆರಿಗೆ ವಸೂಲಿ ಮಾಡಲಾಗಿದೆ. ಕೆ.ಎಲ್.ಇ ಶಿಕ್ಷಣ ಸಂಸ್ಥೆ ಹೆಚ್ಚಿನ ತೆರಿಗೆ ಉಳಿಸಿಕೊಂಡಿದೆ. ಅವರಿಗೆ ನೋಟಿಸ್ ಜಾರಿ ಮಾಡಿ ಶೀಘ್ರ ವಸೂಲಿ ಮಾಡಲಾಗುವುದು ಎಂದು ಉಪ ಆಯುಕ್ತ ಬೈರೇಗೌಡ ಮಾಹಿತಿ ನೀಡಿದರು.

ಅಪಾರ್ಟ್‌ಮೆಂಟ್, ವಾಣಿಜ್ಯ ಮಳಿಗೆಗಳ ಮಾಲಕರು ಓ.ಸಿ ಮತ್ತು ಸಿ.ಸಿ ಪಡೆಯದಿದ್ದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಜಂಟಿ ಆಯುಕ್ತರಿಗೆ ದಂಡ ವಿಧಿಸುವ ಸಂಪೂರ್ಣ ಅಧಿಕಾರವನ್ನು ಮೇಯರ್ ನೀಡಿದರು. ಫ್ಲಾಟ್ ನಿರ್ಮಿಸಿ ಸಿಸಿ ಪಡೆಯದೆ ಮನೆ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಂಡರೆ ವರ್ಷಕ್ಕೆ ನೂರಾರು ಕೋಟಿ ಕಂದಾಯ ಬರುತ್ತದೆ ಎಂದು ವಿಶೇಷ ಆಯುಕ್ತರು ಮಾಹಿತಿ ನೀಡಿದರು.

ಒಂಟಿಮನೆ, ಕಲ್ಯಾಣ ಇಲಾಖೆಯ ಪ್ರಗತಿ ತೃಪ್ತಿಕರವಾಗಿಲ್ಲ, ಬಡವರಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ. ಎಲ್ಲಾ ಕೌನ್ಸಿಲ್ ಸಭೆಗಳಲ್ಲಿ ಪಾಲಿಕೆ ಸದಸ್ಯರು ದೂರುತ್ತಾರೆ. ತಿಂಗಳೊಳಗೆ ಪಟ್ಟಿ ತಯಾರಿಸಿಕೊಡಿ ಎಂದು ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿ, ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News