ಬೆಂಗಳೂರು: ಕನಿಷ್ಠ ವೇತನ, ಭವಿಷ್ಯ ನಿಧಿಗೆ ಆಗ್ರಹಿಸಿ ಕಾರ್ಮಿಕರ ಧರಣಿ

Update: 2018-12-13 16:48 GMT

ಬೆಂಗಳೂರು, ಡಿ.13: ಕನಿಷ್ಠ ವೇತನ, ಭವಿಷ್ಯ ನಿಧಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಅಸಂಘಟಿತ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ನಗರದ ಬನ್ನೇರುಘಟ್ಟದ ರಸ್ತೆಯಲ್ಲಿರುವ ಕಾರ್ಮಿಕ ಭವನಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ಮನೆಗೆಲಸ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಾಹನ ಚಾಲಕರು ಒಳಗೊಂಡಂತೆ ವಿವಿಧ ವಲಯಗಳಲ್ಲಿನ ಅಸಂಘಟಿತ ಕಾರ್ಮಿಕರು ಗುರುವಾರ ಬೆಳಗ್ಗೆ ಕಾರ್ಮಿಕ ಭವನದ ಮುಂಭಾಗ ಧರಣಿ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಘೋಷಣೆಗಳು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಸುರಕ್ಷತೆ, ಉದ್ಯೋಗದ ಭದ್ರತೆಯಿಲ್ಲದಂತಾಗಿದೆ. ಇಂದಿನ ಬೆಲೆ ಏರಿಕೆಯ ಸಂದರ್ಭದಲ್ಲಿ ಕಡಿಮೆ ದುಡಿಮೆಯಲ್ಲಿ ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಆದರೆ, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರಕಾರಗಳು ಕಾರ್ಮಿಕರ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಅಲ್ಲದೆ, ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಮುಂದಾಗಿಲ್ಲ ಎಂದು ಕಾರ್ಮಿಕರು ಆರೋಪಿಸಿದರು.

ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಮಾತನಾಡಿ, ಕೇಂದ್ರ ಸರಕಾರ ಬಂಡವಾಳಶಾಹಿ ಧೋರಣೆ ಅನುಸರಿಸುತ್ತಿದೆ. ದೇಶದ ಜಿಡಿಪಿಗೆ ಶೇ.60ರಷ್ಟು ಕೊಡುಗೆ ನೀಡುತ್ತಿರುವ ಕಾರ್ಮಿಕರನ್ನು ನಿರ್ಲಕ್ಷಿಸುತ್ತಿದೆ. ಆದರೆ, ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿರುವ 49 ಸಾವಿರ ಕೋಟಿ ಹಣವನ್ನು ಸಾಮಾಜಿಕ ಸುರಕ್ಷತಾ ಕಾಯ್ದೆ ಹೆಸರಿನಲ್ಲಿ ತನ್ನ ವಶಕ್ಕೆ ಪಡೆಯಲು ಯತ್ನಿಸುತ್ತಿದೆ. ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ಕೆಲ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವುದಾಗಿ ತೀರ್ಮಾನಿಸಿ ಒಂದು ವರ್ಷ ಕಳೆದರೂ ಇನ್ನೂ ನೀಡಿಲ್ಲ. ಎಲ್ಲಾ ಅಸಂಘಟಿತ ಕಾರ್ಮಿಕರಿಗೂ ಈ ಯೋಜನೆ ವಿಸ್ತರಿಸಬೇಕು. ಕಲ್ಯಾಣ ಮಂಡಳಿಯ ಯೋಜನೆಗಳು, ಸೌಲಭ್ಯಗಳನ್ನು ಕಾರ್ಮಿಕರಿಗೆ ತ್ವರಿತವಾಗಿ ದೊರಕಿಸಿಕೊಡಲು ಸಕಾಲ ಯೋಜನೆ ಜಾರಿಗೊಳಿಸಬೇಕು ಎಂದು ಕಾರ್ಮಿಕರು ಮನವಿ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಮಿಕ ಇಲಾಖೆ ಉಪಆಯುಕ್ತ ರವಿಕುಮಾರ್ ಮನವಿ ಪತ್ರ ಸ್ವೀಕರಿಸಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಅಧ್ಯಕ್ಷೆ ವಿಜಯಲಕ್ಷ್ಮಿ, ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್, ಕೆ.ಮಹಾಂತೇಶ್, ಉಪಾಧ್ಯಕ್ಷ ಎಚ್.ಎನ್.ಗೋಪಾಲಗೌಡ, ಕಾರ್ಯಾಧ್ಯಕ್ಷ ಬಿ.ರಾಜಶೇಖರಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News