ಗರ್ಭಪಾತಕ್ಕೆ ಅನುವು ಮಾಡಿಕೊಡಲು ಕೋರಿ ಅರ್ಜಿ ಸಲ್ಲಿಕೆ: ಮಹಿಳೆಯ ಪರೀಕ್ಷೆ ನಡೆಸಲು ಹೈಕೋರ್ಟ್ ನಿರ್ದೇಶನ

Update: 2018-12-13 16:50 GMT

ಬೆಂಗಳೂರು, ಡಿ.13: ಭ್ರೂಣದ ಬೆಳವಣಿಗೆ ನ್ಯೂನತೆಯಿಂದ ಕೂಡಿರುವ ಕಾರಣ ಗರ್ಭಪಾತಕ್ಕೆ ಅನುವು ಮಾಡಿಕೊಡಬೇಕು ಎಂದು ಕೋರಿ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಮಹಿಳೆ ಸಲ್ಲಿಸಿರುವ ಈ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣೆಗೆ ಅಂಗೀಕರಿಸಿದೆ. ವಿಚಾರಣೆ ವೇಳೆ ಅರ್ಜಿದಾರ ಮಹಿಳೆಯ ಪರ ವಕೀಲರು, ಭ್ರೂಣಕ್ಕೆ ಈಗ 20 ವಾರ ತುಂಬಿದೆ. ಆದರೆ, ಗರ್ಭಸ್ಥ ಶಿಶುವಿನ ಅನ್ನನಾಳದ ಬೆಳವಣಿಗೆಯೇ ಆಗಿಲ್ಲ. ಈ ಕಾರಣಕ್ಕೆ ಮಗು ಜನಿಸಿದ ಮೇಲೆ ತೊಂದರೆಗೆ ಒಳಗಾಗಲಿದೆ, ಹೆರಿಗೆ ಸಮಯದಲ್ಲಿ ತಾಯಿಗೂ ಅಪಾಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೀಗಾಗಿ, ಗರ್ಭಪಾತಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರಕಾರದ ಪರ ವಕೀಲ ಎ.ವಿಜಯಕುಮಾರ್ ಪಾಟೀಲ, ಖಾಸಗಿ ವೈದ್ಯರ ವರದಿ ಆಧಾರದ ಮೇಲೆ ಇದನ್ನು ನಿರ್ಧರಿಸಲು ಆಗುವುದಿಲ್ಲ. ತಜ್ಞ ವೈದ್ಯರ ವರದಿ ತರಿಸಿಕೊಂಡು ಪರಿಶೀಲಿಸಿದ ನಂತರ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ತಕ್ಷಣವೇ ಈ ಕುರಿತು, ವೈದ್ಯಕೀಯ ಸೂಪರಿಂಟೆಂಡೆಂಟ್ ನೇತೃತ್ವದಲ್ಲಿ ವಾಣಿ ವಿಲಾಸ ಆಸ್ಪತ್ರೆಯ ತಜ್ಞ ವೈದ್ಯರ ತಂಡ ರಚಿಸಬೇಕು ಮತ್ತು ಡಿ.14ರ ಬೆಳಗ್ಗೆ 11 ಗಂಟೆಗೆ ಮಹಿಳೆಯ ಪರೀಕ್ಷೆ ನಡೆಸಬೇಕು. ವೈದ್ಯರ ವರದಿಯನ್ನು ಇದೇ 17ಕ್ಕೆ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸಬೇಕು ಎಂದು ವಿಜಯಕುಮಾರ್ ಪಾಟೀಲಗೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News