ಪರಿಷತ್ ಸದಸ್ಯ ನಾರಾಯಣಸ್ವಾಮಿ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ

Update: 2018-12-13 16:53 GMT

ಬೆಂಗಳೂರು, ಡಿ.13: ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದ ಮಾಜಿ ಶಾಸಕ, ಹಾಲಿ ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿ ಆದೇಶಿಸಿದೆ. ಪೊಲೀಸರ ಕ್ರಮ ಪ್ರಶ್ನಿಸಿ ನಾರಾಯಣಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.

ವಿಧಾನಸಭಾ ಚುನಾವಣೆಯ ಮರು ಮತದಾನದ ವೇಳೆ ನಾರಾಯಣಸ್ವಾಮಿ ಅವರು ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದರು. ಈ ಸಂಬಂಧ ಸಂಜಯನಗರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಆರೋಪ ಪಟ್ಟಿಯಲ್ಲಿ ನಾರಾಯಣಸ್ವಾಮಿ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಉಲ್ಲೇಖಿಸಿದ್ದರು. ಹೀಗಾಗಿ, ಈ ಕ್ರಮವನ್ನು ಪ್ರಶ್ನಿಸಿ ನಾರಾಯಣಸ್ವಾಮಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಪೀಠವು, ಚಾರ್ಜ್‌ಶೀಟ್ ಹಾಕಿರುವ ಪೊಲೀಸರ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಡಿ.15ರಂದು ತನಿಖಾಧಿಕಾರಿ ಖುದ್ದು ಹಾಜರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News