ಡಿ ಗ್ರೂಪ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ವಿವರ ಸಲ್ಲಿಸಲು ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ

Update: 2018-12-13 16:55 GMT

ಬೆಂಗಳೂರು, ಡಿ.13: ಅನುಕಂಪದ ಆಧಾರದಲ್ಲಿ ಡಿ ಗ್ರೂಪ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಸಂಬಂಧದ ಕೇಂದ್ರ ಸರಕಾರದ ನಿಯಮಗಳ ವಿವರಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಕೇಂದ್ರ ಸರಕಾರದ ಪರ ವಕೀಲರಿಗೆ ನಿರ್ದೇಶನ ನೀಡಿದೆ.

ತನ್ನ ತಂದೆ ಸೇವೆಯಲ್ಲಿರುವಾಗ ಮರಣ ಹೊಂದಿದ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ತನಗೆ ನೌಕರಿ ಕೊಡಬೇಕು ಎಂದು ಕೋರಿ ಸಲ್ಲಿಸಿದ ಮನವಿಯನ್ನು ಕೇಂದ್ರ ಆಡಳಿತ ನ್ಯಾಯ ಮಂಡಳಿ ತಿರಸ್ಕರಿಸಿದ ಆದೇಶವನ್ನು ರದ್ದುಪಡಿಸಬೇಕೆಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ನಿವಾಸಿ ರಾಜು ಪಿ. ಕೊರವಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರವಿ ಮಳಿಮಠ ಹಾಗೂ ನ್ಯಾ. ಕೆ.ನಾಟರಾಜನ್ ಅವರಿದ್ದ ನ್ಯಾಯಪೀಠ, ಈ ನಿರ್ದೇಶನ ನೀಡಿತು.

ವಿಚಾರಣೆ ವೇಳೆ, ಅರ್ಜಿದಾರನ ಮನವಿಯನ್ನು ತಿರಸ್ಕರಿಸಲು ಮೃತ ನೌಕರನ ಕುಟುಂಬ ಹೇಗೊ ಇಷ್ಟು ವರ್ಷ ಜೀವನ ಸಾಗಿಸಿದೆ. ಮೇಲಾಗಿ ಸಣ್ಣ ಕುಟುಂಬ, ಅಷ್ಟೊಂದು ಬಡತನ ಕಾಣುತ್ತಿಲ್ಲ, ಆರ್ಥಿಕ ಸಮಸ್ಯೆಯೂ ಇರಲಿಕ್ಕಿಲ್ಲ, ಅನ್ನುವಂತಹ ಕಾರಣಗಳನ್ನು ನೀಡಿರುವುದಕ್ಕೆ ನಿಮ್ಮ ನಿಲುವು ಅಚ್ಚರಿ ಮತ್ತು ಬೇಸರ ತರಿಸಿದೆ. ಅನುಕಂಪದ ಅರ್ಥ ನಿಮಗೆ ತಿಳಿದಿದೆಯಾ, ಮಾನವೀಯತೆ ಆಧಾರದಲ್ಲಿ ನೋಡಿದರೆ ನಿಮಗೆ ಹೇಗೆ ಅನಿಸುತ್ತದೆ, ಅನುಕಂಪದ ಆಧಾರದಲ್ಲಿ ನೌಕರಿ ಕೇಳಿಕೊಂಡು ಬಂದವರ ಬಗ್ಗೆ ನಿಮ್ಮ ನಿಲುವು ಇದೇನಾ ಎಂದು ಭಾರತೀಯ ಅಂಚೆ ಸೇವಾ ಇಲಾಖೆ ಪರ ವಕೀಲರನ್ನು ತೀಕ್ಷ್ಣವಾಗಿ ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ, ಮನವಿಯನ್ನು ನಿಯಮಗಳ ಪ್ರಕಾರ ಆಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ಅಂಚೆ ಸೇವಾ ಇಲಾಖೆ ಪರ ವಕೀಲರು ನ್ಯಾಯಪೀಠಕ್ಕೆ ಸ್ಪಷ್ಟನೆ ನೀಡಿದರು. ಈ ಹಿಂದೆ ತಾಯಿ ಕೊಟ್ಟ ಮನವಿ ತಿರಸ್ಕೃತಗೊಂಡಿದೆ ಎಂದು ಎರಡನೇ ಬಾರಿ ಮಗ ಸಲ್ಲಿಸಿದ ಮನವಿ ತಿರಸ್ಕರಿಸುವುದು ಯಾವ ನ್ಯಾಯ. ಹೀಗಾಗಿ, ಅನುಕಂಪದ ಆಧಾರದಲ್ಲಿ ಡಿ ಗ್ರೂಪ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಇರುವ ಕೇಂದ್ರ ಸರಕಾರದ ನಿಯಮಗಳ ವಿವರಗಳನ್ನು ಕೋರ್ಟ್‌ಗೆ ಸಲ್ಲಿಸಿ. ಒಂದೊಮ್ಮೆ ನಿಯಮಗಳು ವ್ಯತಿರಿಕ್ತವಾಗಿದ್ದರೆ, ನಿಮ್ಮ ವಿರುದ್ಧ ನ್ಯಾಯಾಲಯ ಕಠಿಣ ನಿಲುವು ತಾಳಬೇಕಾಗುತ್ತದೆ. ಅರ್ಜಿದಾರರ ಮನವಿ ತಿರಸ್ಕರಿದ ದಿನದಿಂದ ನೇಮಕಾತಿ ಹಾಗೂ ವೇತನ, ಭತ್ತೆ, ಭಡ್ತಿ ಹಾಗೂ ಇತರ ಸೇವಾ ಸೌಲಭ್ಯಗಳನ್ನು ಪೂರ್ವಾನ್ವಯವಾಗುವಂತೆ ಆದೇಶ ನೀಡಬೇಕಾಗಬಹುದು ಎಂದು ಹೇಳಿ ನ್ಯಾಯಪೀಠ ವಿಚಾರಣೆಯನ್ನು ಡಿ.18ಕ್ಕೆ ಮುಂದೂಡಿತು.

ಪ್ರಕರಣವೇನು: ಬೆಳಗಾವಿ ಜಿಲ್ಲೆ ಹುಕ್ಕೇರಿಯಲ್ಲಿ ಪರಶುರಾಮ ಕೊರವಿ ಎಂಬುವರು ಭಾರತೀಯ ಅಂಚೆ ಸೇವಾ ಇಲಾಖೆಯಲ್ಲಿ ಟೆಲಿಗ್ರಾಫ್‌ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅನಾರೋಗ್ಯದ ಕಾರಣ 2001 ಮಾರ್ಚ್‌ನಲ್ಲಿ ಅವರು ನಿಧನರಾಗಿದ್ದಾರೆ. ಆಗ ಮಗ ರಾಜು ಕೊರವಿ ವಯಸ್ಸು 3 ವರ್ಷ ಆಗಿರುತ್ತದೆ. ಅನುಕಂಪದ ಆಧಾರದಲ್ಲಿ ನೌಕರಿ ಕೊಡುವಂತೆ ಪರಶುರಾಮ ಅವರ ಪತ್ನಿ ಮನವಿ ಸಲ್ಲಿಸುತ್ತಾರೆ. ಪತ್ನಿಗೆ ಶೈಕ್ಷಣಿಕ ಅರ್ಹತೆ ಇಲ್ಲ, ಮಗ ವಯಸ್ಕನಾಗಿಲ್ಲ ಎಂಬ ಕಾರಣಕ್ಕೆ ಭಾರತೀಯ ಅಂಚೆ ಸೇವೆ 2002ರಲ್ಲಿ ಮನವಿಯನ್ನು ತಿರಸ್ಕರಿಸುತ್ತದೆ. 2016ರಲ್ಲಿ ರಾಜು ವಯಸ್ಕನಾಗುತ್ತಾನೆ. ಆಗ ಆತ ಪುನಃ ಮನವಿ ಸಲ್ಲಿಸುತ್ತಾರೆ. ಅದನ್ನೂ ಸಹ ತಿರಿಸ್ಕರಿಸಲಾಗುತ್ತದೆ. ಆಗ ಆತ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮೊರೆ ಹೋಗುತ್ತಾನೆ. ಸಿಎಟಿ ಅಂಚೆ ಇಲಾಖೆಯ ಆದೇಶ ಎತ್ತಿಹಿಡಿಯುತ್ತದೆ. ಹೀಗಾಗಿ, ರಾಜು ಕೊರವಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಅರ್ಜಿದಾರರ ಪರ ವಕೀಲ ಓಂ ಪ್ರಶಾಂತ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News