ಆಸ್ತಿ ತೆರಿಗೆ ಪಾವತಿಸದೇ ಇದ್ದಲ್ಲಿ ದಂಡ, ಜಫ್ತಿ ಕ್ರಮ: ಕಟ್ಟಡ ಮಾಲಕರಿಗೆ ಬಿಬಿಎಂಪಿ ಎಚ್ಚರಿಕೆ

Update: 2018-12-13 16:57 GMT

ಬೆಂಗಳೂರು, ಡಿ. 13: ಪ್ರಸಕ್ತ ಸಾಲಿನ ಆಸ್ತಿ ತೆರಿಗೆಯನ್ನು ಈವರೆಗೆ ಪಾವತಿಸದೇ ಇರುವ ಕಟ್ಟಡಗಳ ಮಾಲಕರು ಕೂಡಲೇ ಆಸ್ತಿ ತೆರಿಗೆ ಪಾವತಿಸಬೇಕು. ಪಾವತಿಸದೇ ಇದ್ದಲ್ಲಿ ದಂಡ, ಜಫ್ತಿ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಬಿಬಿಎಂಪಿ ಮಹದೇವಪುರ ವಲಯದ ಜಂಟಿ ಆಯುಕ್ತ ಎನ್.ಸಿ.ಜಗದೀಶ್ ಹಾಗೂ ಉಪ ಆಯುಕ್ತ ಕೆ. ಶಿವೇಗೌಡ ಅವರು ಕಟ್ಟಡ ಮಾಲಕರಿಗೆ ಎಚ್ಚರಿಸಿದ್ದಾರೆ. 

ಮಹದೇವಪುರ ವಲಯದ ಹೂಡಿ, ವೈಟ್‌ಫೀಲ್ಡ್, ಮಾರತ್‌ಹಳ್ಳಿ, ಕೆ.ಆರ್.ಪುರ, ಹೊರಮಾವು ಮತ್ತು ಎಚ್.ಎ.ಎಲ್ ಸೇರಿದಂತೆ ಒಟ್ಟು ಆರು ಕಂದಾಯ ಉಪ ಭಾಗಗಳಲ್ಲಿ ಪ್ರಸ್ತುತ ಸಾಲಿನ ಆಸ್ತಿ ತೆರಿಗೆ ಬೇಡಿಕೆ 556 ಕೋಟಿ ರೂ. ಹಾಗೂ ಬಾಕಿ ಆಸ್ತಿ ತೆರಿಗೆ ಬೇಡಿಕೆ 244 ಕೋಟಿ ರೂ. ಒಳಗೊಂಡಂತೆ ಒಟ್ಟು ವಸೂಲಿ ಮಾಡಬೇಕಾಗಿರುವ ಆಸ್ತಿ ತೆರಿಗೆಯ ಮೊತ್ತ 800 ಕೋಟಿ ರೂ. ಆಗಿದೆ. ಈವರೆಗೆ ವಸೂಲಿಯಾಗಿರುವ ಆಸ್ತಿ ತೆರಿಗೆ ಮೊತ್ತ 511.59 ಕೋಟಿ ರೂ. ಆಗಿದ್ದು, ವಸೂಲಿ ಮಾಡಬೇಕಾಗಿರುವ ಮೊತ್ತ 288.41 ಕೋಟಿ ರೂ. ಆಗಿದೆ. ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲಕರು ಹಾಗೂ ಅನುಭವದಾರರ ವಿವರಗಳನ್ನು ಈಗಾಗಲೇ ವಾರ್ಡ್ ಕಚೇರಿಗಳಲ್ಲಿ, ಉಪ ವಿಭಾಗಗಳ ಕಚೇರಿಗಳಲ್ಲಿ ಮತ್ತು ವಲಯ ಕಚೇರಿಯಲ್ಲಿ ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಒಟ್ಟು 9891 ಕಟ್ಟಡಗಳ ಮಾಲಕರಿಗೆ ಕಾರಣ ಕೇಳಿ ನೋಟೀಸ್‌ಗಳನ್ನು ಜಾರಿಗೊಳಿಸಲಾಗಿದೆ. ಆರು ಉಪ ವಿಭಾಗಗಳಿಂದ ಟಾಪ್-500 ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸುಸ್ಥಿದಾರರ ಪಟ್ಟಿ ಮಾಡಲಾಗಿದೆ. ಅತೀ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ 100 ಕ್ಕೂ ಹೆಚ್ಚು ಸುಸ್ಥಿದಾರರಿಗೆ ಜಪ್ತಿ ವಾರೆಂಟನ್ನು ಜಾರಿಗೊಳಿಸಲಾಗಿದೆ.

ಜಪ್ತಿ ಮಾಡುವುದಕ್ಕೆ ಮೊದಲೆ ಬಹುತೇಕ ಜಪ್ತಿ ವಾರೆಂಟ್ ಜಾರಿಗೊಳಿಸಿದ ಕೂಡಲೇ ಕೆಲವು ಆಸ್ತಿದಾರರು ಆಸ್ತಿ ತೆರಿಗೆಯನ್ನು ಪಾವತಿಸಲು ಮುಂದಾಗಿದ್ದಾರೆ. ಇನ್ನೂ ಉಳಿದ ಸುಸ್ಥಿದಾರರಿಗೂ ಕೂಡ ಜಪ್ತಿ ವಾರೆಂಟ್‌ಗಳನ್ನು ಜಾರಿಗೊಳಿಸುವ ಪ್ರಕ್ರಿಯೆ ಮುಂದುವರೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News