ಅಂಚೆ ಕಚೇರಿ ಎಲ್ಲಿ?

Update: 2018-12-13 18:35 GMT

ಮಾನ್ಯರೇ,

ಮಂಗಳೂರು ಅಂಚೆ ವಿಭಾಗದ ಪಡೀಲ್ ಅಂಚೆ ಕಚೇರಿ ಎದುರು ರಸ್ತೆ ಬದಿ ನಾನು ನಿಂತಿದ್ದ ಸಂದರ್ಭದಲ್ಲಿ ಸದ್ರಿ ಅಂಚೆ ಕಚೇರಿಯನ್ನು ಹುಡುಕಾಡಿ ಸುಸ್ತಾಗಿದ್ದ ಓರ್ವ ಸಾರ್ವಜನಿಕ ವ್ಯಕ್ತಿ ನನ್ನ ಬಳಿ ಬಂದು ಕೇಳಿದ ಪ್ರಶ್ನೆ ಇದು. ಈ ಪ್ರಶ್ನೆ ಕೇಳಿಸಿಕೊಂಡ ನಾನು ಕೂಡಾ ತಬ್ಬಿಬ್ಬಾದೆ. ಪಕ್ಕದಲ್ಲೇ ಇದ್ದ ಒಂದು ಅಂಗಡಿ ಮಾಲಕರಲ್ಲಿ ‘‘ಅಂಚೆ ಕಚೇರಿ ಎಲ್ಲಿ ಸ್ವಾಮಿ’’ ಎಂದು ನಾನೂ ಕೇಳಬೇಕಾದ ಅನಿವಾರ್ಯತೆ ಬಂತು. ಆಗ ಅಂಗಡಿ ಮಾಲಕರು ‘‘ನೋಡಿ ಸ್ವಾಮಿ, ಇದೇ ಪಡೀಲಿನ ಅಂಚೆ ಕಚೇರಿ’’ ಎಂದು ಕಟ್ಟಡದ ಕಡೆ ಮುಖ ಮಾಡಿ ತೋರಿಸಿದಾಗ ಅಚ್ಚರಿ ಕಾದಿತ್ತು. ಯಾಕೆಂದರೆ, ಸಾರ್ವಜನಿಕರು ಅಂಚೆ ಕಚೇರಿ ಗುರುತಿಸಬೇಕಾದರೆ ಒಂದು ನಾಮ ಫಲಕ ಅತೀ ಅಗತ್ಯ. ಎರಡನೆಯದಾಗಿ ಅಂಚೆ ಕಚೇರಿ ರಸ್ತೆ ಬದಿಯಲ್ಲಿ ಇಲ್ಲದೆ ಇದ್ದ ಪಕ್ಷದಲ್ಲಿ ಅಂಚೆ ಕಚೇರಿಗೆ ದಾರಿ ಎಂಬ ಸೂಚನಾ ಫಲಕವೂ ಇರಬೇಕು, ಮೂರನೆಯದಾಗಿ ಅಂಚೆ ಕಚೇರಿ ಎದುರು ಒಂದು ಅಂಚೆ ಪೆಟ್ಟಿಗೆಯಾದರೂ ಇರಬೇಕು. ಇವೆಲ್ಲದರ ಅನುಪಸ್ಥಿತಿಯಲ್ಲಿ ಜನಸಾಮಾನ್ಯರು ಅಂಚೆ ಕಚೇರಿಯನ್ನು ಹೇಗೆ ತಾನೇ ಗುರುತಿಸಬಲ್ಲರು?
ಮಂಗಳೂರು ಅಂಚೆ ವಿಭಾಗದ ಅಧಿಕಾರಿಗಳೇ ಈಗಲಾದರೂ ಎಚ್ಚೆತ್ತುಕೊಂಡು ಕರಗಿ ಹೋಗಿರುವ ಅಂಚೆ ನಾಮ ಫಲಕಗಳನ್ನು ಕಿತ್ತು ತೆಗೆದು ಅಂತಹ ಕಚೇರಿಗಳಿಗೆ ಹೊಸ ನಾಮ ಫಲಕಗಳನ್ನು ಅಳವಡಿಸಿ ಸಾರ್ವಜನಿಕರು ಪರದಾಡುವುದನ್ನು ತಪ್ಪಿಸಿ.

Similar News