ಬಟ್ಟೆಯಲ್ಲಿ ಅದ್ಭುತ ಚಿತ್ರಕಾವ್ಯ ಸೃಷ್ಟಿಸುವ ಬಾಪಿ ದಾಸ್

Update: 2018-12-13 18:43 GMT

ಜನವರಿ ತಿಂಗಳ ಕೊನೆಯಲ್ಲಿ, ಕೋಲ್ಕತಾ ಮಹಾನಗರ ಪಾಲಿಕೆಯಲ್ಲಿ ತೋಟದ ಮಾಲಿಯಾಗಿರುವ ಬಾಪಿ ದಾಸ್‌ಗೆ, ದಕ್ಷಿಣದ ರಾಜ್ಯವಾದ ಕೇರಳದ ಪ್ರಸಿದ್ಧ ಕೊಚ್ಚಿ-ಮುಝಿರಿಸ್ ಕಲಾ ಉತ್ಸವದ ನಾಲ್ಕನೇ ಆವೃತ್ತಿಯ ಕ್ಯುರೇಟರ್ ಆಗಿರುವ ಅನಿತಾ ದುಬೆಯವರಿಂದ ಕರೆ ಬಂದಾಗ ಇನ್ನಿಲ್ಲದ ಅಚ್ಚರಿ, ಸಂಭ್ರಮ ಎರಡೂ ಉಂಟಾದವು. ದೈನಂದಿನ ಕರ್ತವ್ಯ ಮುಗಿಸಿ, ಆವರಾಗ ಮನೆಯಲ್ಲಿ ತಣ್ಣಗೆ ಕುಳಿತು, ಬಟ್ಟೆಯಲ್ಲಿ ವಿನ್ಯಾಸವೊಂದನ್ನು ಮೂಡಿಸುವ ಕೆಲಸದಲ್ಲಿ ತಲ್ಲೀನರಾಗಿದ್ದರು. ಕೋಲ್ಕತಾ ನಗರದಲ್ಲಿ ತಾನು ಪ್ರದರ್ಶಿಸಿದ್ದ ಉಡುಪು ಚಿತ್ತಾರದ ಕಲೆಯ ಬಗ್ಗೆ ಕಲಾಸಕ್ತರಿಂದ ಬಹಳಷ್ಟು ಪ್ರಶಂಸೆಯ ಮಾತುಗಳನ್ನು ತಾನು ಕೇಳಿದ್ದಾಗಿ ದುಬೆ, ಬಾಪಿ ದಾಸ್‌ಗೆ ತಿಳಿಸಿದರು. ಬಾಪಿ ದಾಸ್ ಬಟ್ಟೆಯಲ್ಲಿ ಚಿತ್ರಿಸಿರುವ ಕಲಾಕೃತಿಗಳ ಛಾಯಾಚಿತ್ರಗಳನ್ನು ಇಮೇಲ್ ಮಾಡುವಂತೆಯೂ ಅವರು ಸೂಚಿಸಿದರು. ‘‘ಅಲ್ಲಿಯವರೆಗೆ ದುಬೆ ಅಥವಾ ಕೊಚ್ಚಿ-ಮುಝಿರಿಸ್ ಕಲಾ ಉತ್ಸವದ ಬಗ್ಗೆ ಬಾಪಿ ದಾಸ್‌ಗೆ ಎಳ್ಳಷ್ಟೂ ಮಾಹಿತಿಯಿರಲಿಲ್ಲ. ಆದರೆ ಅನಿತಾ ದುಬೆ, ಈ ಕಲಾಉತ್ಸವದ ಮಾಹಿತಿಗಳನ್ನು ವಿವರಿಸಿದಾಗ, ಬಾಪಿ ದಾಸ್‌ಗೆ ಇದೊಂದು ದೇವರೇ ತಂದುಕೊಟ್ಟಂತಹ ಸುವರ್ಣಾವಕಾಶ ಎಂಬುದು ಮನದಟ್ಟಾಯಿತು.

 ಕೋಲ್ಕತಾ ಮಹಾನಗರ ಪಾಲಿಕೆಯಲ್ಲಿ ಅರೆಕಾಲಿಕ ಹೆಲ್ಪರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬಾಪಿ ದಾಸ್, ಅರೆಕಾಲಿಕ ಆಟೋ ಚಾಲಕನಾಗಿಯೂ ದುಡಿಯುತ್ತಿರುತ್ತಾರೆ. ಕೊಚ್ಚಿಯಲ್ಲಿ ಡಿಸೆಂಬರ್ 12ರಂದು ಆರಂಭಗೊಳ್ಳಲಿರುವ ಕೊಚ್ಚಿ ಮುಝಿರಿಸ್ ಕಲಾ ಉತ್ಸವದಲ್ಲಿ ಪಾಲ್ಗೊಂಡಿರುವ 90ಕ್ಕೂ ಅಧಿಕ ಕಲಾವಿದರಲ್ಲಿ ಬಾಪಿ ದಾಸ್ ಕೂಡಾ ಒಬ್ಬರು. ‘‘ಅವರ ಕೈಕುಸುರಿಯ ಚಿತ್ರಗಳು (ಹ್ಯಾಂಡ್ ಎಂಬ್ರಾಯಿಡರಿ)ಗಳು ಅತ್ಯಂತ ಸುಂದರವಾಗಿವೆ. ನಗರಗಳ ಫ್ಯಾಶನ್‌ಪ್ರಿಯರ ಫ್ಯಾಬ್ರಿಕ್ ವಿನ್ಯಾಸಗಳಿಗೆ ಅವರು ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದನ್ನು ನೋಡಲು ಈ ಕಲಾ ಉತ್ಸವ ಅವರಿಗೆ ದೊರೆತಿರುವ ಒಂದು ಉತ್ತಮ ಅವಕಾಶ’’ವೆಂದು ದಿಲ್ಲಿ ಮೂಲದ ದುಬೆ ಹೇಳುತ್ತಾರೆ. ‘‘ಈ ಕಲಾ ಉತ್ಸವದಲ್ಲಿ ವಸ್ತ್ರ ವಿನ್ಯಾಸ ಕ್ಷೇತ್ರದ ದಿಗ್ಗಜರಿಂದ ದೂರ ಸರಿದು, ಎಲೆಯ ಮರೆಯ ಕಾಯಂತಿರುವ ಹೊಸ ಪ್ರತಿಭೆಗಳನ್ನು ಬೆಳಕಿಗೆ ತರುವುದೇ ನನ್ನ ಗುರಿಯಾಗಿದೆ’’ ಎಂದು ಆಕೆ ಹೇಳುತ್ತಾರೆ. ಕೇವಲ ಸೂಜಿ ಮತ್ತು ನೂಲನ್ನು ಬಳಸಿಕೊಂಡು ಬಾಪಿ ದಾಸ್, ಬಟ್ಟೆಯಲ್ಲಿ ಮೂಡಿಸುವ ವರ್ಣಮಯ ಚಿತ್ರ, ವಿನ್ಯಾಸಗಳು ಯಾರನ್ನೂ ಕೂಡಾ ಅಚ್ಚರಿ ಗೊಳಿಸುತ್ತವೆ. ‘‘ಎಂಬ್ರಾಯಿಡರಿಯಲ್ಲಿ ತನಗಿರುವ ಆಸಕ್ತಿಯನ್ನು ಕಂಡು ನನ್ನ ತಾಯಿ ಹಾಗೂ ಸಹೋದರಿ ಮೊದಮೊದಲು ಅಚ್ಚರಿಪಡುತ್ತಿದ್ದರು. ಯಾಕೆಂದರೆ ಶರ್ಟ್‌ನ ಗುಂಡಿ ಕಿತ್ತುಹೋದಲ್ಲಿ, ಅದನ್ನು ಹೊಲಿಯುವುದು ಕೂಡಾ ನನಗೆ ಗೊತ್ತಿರಲಿಲ್ಲ. ಕ್ರಮೇಣ ಅವರು ನನ್ನ ಬೆಂಬಲಕ್ಕೆ ನಿಂತರು. ಮನಸ್ಸಿನ ಬೇಸರ, ದುಗುಡ ಕಳೆಯಲು ಎಂಬ್ರಾಯಿಡರಿ ಒಂದು ಅದ್ಭುತವಾದ ಮಾರ್ಗ’’ ಎಂದು 39 ವರ್ಷದ ದಾಸ್ ಹೇಳುತ್ತಾರೆ. ಹೊಲಿದ ವಸ್ತ್ರಗಳಿಂದ ಅದರಲ್ಲೂ ವಿಶೇಷವಾಗಿ ಮಹಿಳೆಯರ ದುಪಟ್ಟಾಗಳಲ್ಲಿರುವ ನೂಲುಗಳನ್ನು ಜಾಗರೂಕತೆಯಿಂದ ಹೊರತೆಗೆಯುವಂತಹ ಕಲೆಯನ್ನು ಕೂಡಾ ಅವರು ಕಲಿತುಕೊಂಡಿದ್ದಾರೆ. ಇದೇ ನೂಲನ್ನು ಅವರು ಬಟ್ಟೆಚಿತ್ರ ಕಲೆಗಳಿಗೆ ಬಳಸಿಕೊಳ್ಳುತ್ತಾರೆ. ದುಪಟ್ಟಾ ಮತ್ತಿತರ ವಸ್ತ್ರಗಳಲ್ಲಿ ಬಳಸಲಾಗುವ ನೂಲು ಅತ್ಯುತ್ಕೃಷ್ಟ ಗುಣಮಟ್ಟವುಳ್ಳದ್ದಾಗಿದ್ದು, ಬಟ್ಟೆಯಲ್ಲಿ ಸೂಕ್ಷ್ಮ ವಿನ್ಯಾಸದ ಚಿತ್ರಗಳನ್ನು ರಚಿಸುವುದಕ್ಕೆ ಅತ್ಯಂತ ಯೋಗ್ಯವಾದುದಾಗಿದೆಯೆಂದವರು ಹೇಳಿದ್ದಾರೆ.

ಕೋಲ್ಕತಾ ಗೌರಿ ಶಂಕರ್ ಗೋಶಾಲಾ ಲೇನ್‌ನಲ್ಲಿರುವ ತನ್ನ ಇಕ್ಕಟ್ಟಾದ ಮನೆಯಲ್ಲಿ ಬಾಪಿ ದಾಸ್, ತನ್ನ ಇಡೀ ಬೇಸಗೆಯ ಸಮಯವನ್ನು ಕಲಾ ಉತ್ಸವದ ಸಿದ್ಧತೆಗಾಗಿಯೇ ಕಳೆದಿದ್ದರು. ‘‘ಇಡೀ ಸಚಿತ್ರಮಯ ಕಥೆಯೊಂದನ್ನು ಹೊಲಿಯುವುದು ಅತ್ಯಂತ ತ್ರಾಸದಾಯಕ ಕೆಲಸವಾಗಿದೆ. ಒಂದು ದೊಡ್ಡ ಕಲಾಕೃತಿಯ ರಚನೆಗೆ ಏನಿಲ್ಲವೆಂದರೂ ಆರು ತಿಂಗಳುಗಳೇ ಬೇಕಾಗುತ್ತವೆ. ಯಾವುದೇ ಒತ್ತಡಗಳಿಲ್ಲದ ಕೈಯಿಂದ ಮಾತ್ರವೇ ಅತ್ಯಂತ ನೈಜವಾದ ಕಲಾಕೃತಿಗಳನ್ನು ಮೂಡಿಸಲು ಸಾಧ್ಯ’’ ಎಂದು ದಾಸ್ ಅಭಿಪ್ರಾಯಿಸುತ್ತಾರೆ.

ಭಾರೀ ಸಮಯವನ್ನು ಬೇಡುವ ಈ ಹವ್ಯಾಸದಿಂದಾಗಿ, ದಾಸ್‌ಗೆ ಆಟೋರಿಕ್ಷಾ ಓಡಿಸಲು ಹೆಚ್ಚು ವೇಳೆ ದೊರೆಯುವುದಿಲ್ಲ. ಕೋಲ್ಕತಾ ಮಹಾನಗರಪಾಲಿಕೆಯ ಉದ್ಯೋಗಿಯಾಗಿ ಅವರಿಗೆ ದೊರೆಯುವ 9 ಸಾವಿರ ರೂ.ಗಳ ಮಾಸಿಕ ವೇತನವನ್ನೇ ಅವರು ತನ್ನ ಹಾಗೂ ತನ್ನ 56 ವರ್ಷದ ತಾಯಿಯ ಜೀವನನಿರ್ವಹಣೆಗೆ ಅವಲಂಬಿಸಿದ್ದಾರೆ.

‘‘ಒಂದು ಸಮಯದಲ್ಲಿ ನಾನು ರಿಕ್ಷಾ ಓಡಿಸಿಯೇ ತಿಂಗಳಿಗೆ 600 ರೂ. ತನಕ ಸಂಪಾದಿಸುತ್ತಿದ್ದೆ. ಇದೀಗ ಹಣಕಾಸು ಬಿಕ್ಕಟ್ಟುಗಳಿರುವ ಹೊರತಾಗಿಯೂ ನಾನು ಕಲೆಯ ಮೇಲೆ ಗಮನಹರಿಸಿದ್ದೇನೆ. ಕೊಚ್ಚಿ-ಮುಝಿರಿಸ್ ಕಲಾಉತ್ಸವ ಮುಗಿದ ಬಳಿಕ ನಾನು ಪುನಃ ಆಟೋರಿಕ್ಷಾ ಓಡಿಸಬೇಕಾಗಬಹುದು. ಭವಿಷ್ಯದ ಬಗ್ಗೆ ನಾನೇನೂ ಹೆಚ್ಚಾಗಿ ಯೋಚಿಸುತ್ತಿಲ್ಲ. ನನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಾನು ದುಡಿದು ಸಂಪಾದಿಸಲೇಬೇಕಾಗಿದೆ’’ ಎಂದು ದಾಸ್ ಹೇಳುತ್ತಾರೆ.

 ಕೋಲ್ಕತಾದಲ್ಲಿ ಜನಿಸಿದ ದಾಸ್ ಹಾಗೂ ಅವರ ಸಹೋದರಿ ಎಳೆಯ ಮಕ್ಕಳಾಗಿದ್ದಾಗಲೇ ತಂದೆ ಅವರನ್ನು ತೊರೆದು ಹೋಗಿದ್ದರು. ತನ್ನ ಇಬ್ಬರು ಮಕ್ಕಳನ್ನು ಬೆಳೆಸುವುದಕ್ಕಾಗಿಯೇ ಅವರ ತಾಯಿ, ಮನೆಕೆಲಸಗಳಿಗೆ ಹೋಗುತ್ತಿದ್ದರು. ‘‘ನಮ್ಮ ತಾಯಿ ಅತ್ಯಂತ ಕಷ್ಟಕರವಾದ ಜೀವನವನ್ನು ಸಾಗಿಸಿದ್ದರು. ಆದರೆ ಅವರೆಂದೂ ನಮಗೆ ಯಾವುದಕ್ಕೂ ಕಡಿಮೆ ಮಾಡಿರಲಿಲ್ಲ’’ ಎಂದು ದಾಸ್ ಹೇಳುತ್ತಾರೆ. ಒಂದನೇ ತರಗತಿಯ ಆನಂತರ, ದಾಸ್ ಉಕ್ಕಿನ ಕಪಾಟುಗಳನ್ನು ನಿರ್ಮಿಸುವ ವರ್ಕ್‌ಶಾಪ್‌ಗೆ ಸೇರಿಕೊಂಡರು. ಆಗ ತನಗೆ ದುಡಿಮೆ ಅನಿವಾರ್ಯವಾಗಿತ್ತೆಂದು ದಾಸ್ ನೆನಪಿಸಿಕೊಳ್ಳುತ್ತಾರೆ.

 2006ರಲ್ಲಿ ದಾಸ್ ಅವರು ಅಂಚೆಶಿಕ್ಷಣದ ಮೂಲಕ ಹತ್ತನೇ ತರಗತಿ ಪೂರ್ಣಗೊಳಿಸಿದರು. ‘‘ಉತ್ತಮ ಜೀವನಸಾಗಿಸಲು ಶಿಕ್ಷಣ ಅತ್ಯಂತ ಅಗತ್ಯವೆಂಬ ಭಾವನೆ ನನ್ನಲ್ಲಿ ಮೂಡಿತು’’ ಎಂದವರು ಹೇಳುತ್ತಾರೆ. ಪ್ರಿಂಟಿಂಗ್ ಪ್ರೆಸ್ ಒಂದರಲ್ಲಿ ಕೆಲಸ ಮಾಡುತ್ತಿರುವ ಗೆಳೆಯನೊಬ್ಬನ ಮೂಲಕ ತನಗೆ ಈ ಬಟ್ಟೆ ಚಿತ್ರಕಲೆಯ ಪರಿಚಯವಾಗಿತ್ತು. ಆವಾಗಿನಿಂದ ನನಗೆ ಈ ಕಲೆಯ ಬಗ್ಗೆ ಆಸಕ್ತಿ ಬೆಳೆಯುತ್ತಲೇ ಹೋಯಿತೆಂದು ದಾಸ್ ನೆನಪಿಸಿಕೊಳ್ಳುತ್ತಾರೆ.

ಕೋಲ್ಕತಾದಲ್ಲಿ ಹಲವಾರು ಪ್ರದರ್ಶನಗಳಲ್ಲಿ ದಾಸ್ ಅವರ ಕಲಾಕೃತಿಗಳು ಪ್ರದರ್ಶಿತವಾಗಿದ್ದು, ಅನೇಕ ಮಂದಿ ಅವುಗಳನ್ನು ಖರೀದಿಸಿದ್ದಾರೆ. ಈ ಪೈಕಿ ಎರಡು ಕಲಾಕೃತಿಗಳನ್ನು ಖ್ಯಾತ ಕಲಾವಿದೆ ಜಯಶ್ರೀ ಬರ್ಮನ್ 2016ರಲ್ಲಿ 50 ಸಾವಿರ ರೂ.ಗೆ ಖರೀದಿಸಿದ್ದರು.

ಕೊಚ್ಚಿಯಲ್ಲಿ ನಡೆಯುವ ಕಲಾ ಉತ್ಸವದಲ್ಲಿ ಬಾಪಿ ದಾಸ್ ಎಂಟು ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಐಡಿ ಪ್ರೂಫ್ ಎಂಬ ಶೀರ್ಷಿಕೆಯ ಬಟ್ಟೆ ಕಲಾಕೃತಿಯಲ್ಲಿ ದಾಸ್ ಅಂಚೆ ಚೀಟಿಯಲ್ಲಿ ತನ್ನ ಭಾವಚಿತ್ರವನ್ನು ಮೂಡಿಸಿದ್ದಾರೆ. ‘ಲಾಸ್ಟ್ ಇನ್ ಟ್ರಾನ್ಸಿಶನ್’ ಕಲಾಕೃತಿಯಲ್ಲಿ ಅವರು ತನಗೆ ಬರೆಯಲಾದ ಅಂಚೆಕಾರ್ಡೊಂದನ್ನು ಮರುಸೃಷ್ಟಿಸಿದ್ದಾರೆ. ಹೀಗೆ ಈ ಎಲ್ಲಾ ಕಲಾಕೃತಿಗಳಲ್ಲಿ ನಾನು ನನ್ನದೇ ಆದ ಅನುಭವಗಳನ್ನು ಹಂಚಿಕೊಂಡಿದ್ದೇನೆ ಎಂದು ದಾಸ್ ಹೇಳುತ್ತಾರೆ. ‘‘ನನ್ನ ಕೆಲಸವನ್ನು ಜನರು ಮೆಚ್ಚಿಕೊಂಡರೆ ನನಗದೇ ಸಂತೋಷ. ಆದರೆ ಆ ಬಗ್ಗೆ ನಾನು ತುಂಬಾ ಭರವಸೆಯಿಟ್ಟು ಕೊಳ್ಳಬಾರದು’’ ಎಂದವರು ವಿನಮ್ರರಾಗಿ ಹೇಳುತ್ತಾರೆ.

Writer - ಆರ್. ಎನ್.

contributor

Editor - ಆರ್. ಎನ್.

contributor

Similar News