ವರ್ಲ್ಡ್ ಟೂರ್ ಫೈನಲ್ಸ್‌ ಬ್ಯಾಡ್ಮಿಂಟನ್

Update: 2018-12-13 18:50 GMT

ಗುವಾಂಗ್‌ರೊ, ಡಿ.13: ಚೈನೀಸ್ ತೈಪೆಯ ವಿಶ್ವ ನಂ.1 ತೈ ಝು ಯಿಂಗ್ ವಿರುದ್ಧ ಸತತ 13 ಸೋಲುಗಳ ಸರಣಿಯನ್ನು ಕಳಚಿರುವ ಭಾರತದ ಪಿ.ವಿ. ಸಿಂಧು ವರ್ಲ್ಡ್ ಟೂರ್ ಫೈನಲ್ಸ್‌ನ ಲೀಗ್ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ್ದಾರೆ.

ಗುರುವಾರ ನಡೆದ ಗುಂಪು ಎ ಪಂದ್ಯದಲ್ಲಿ ಸಿಂಧು 14-21, 21-16, 21-18 ಗೇಮ್‌ಗಳ ಅಂತರದಲ್ಲಿ ಜಯ ಸಾಧಿಸಿದರು.

ಟೂರ್ನಿಯ ಕಳೆದ ಆವೃತ್ತಿಯಲ್ಲಿ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದ ಸಿಂಧು, ಈ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿದರು. 2016ರ ರಿಯೊ ಒಲಿಂಪಿಕ್ಸ್ ಬಳಿಕ ಝು ಯಿಂಗ್ ಅವರು ಸಿಂಧುಗೆ ಭಾರೀ ಸವಾಲಾಗಿದ್ದರು. ಒಂದೇ ಒಂದು ಪಂದ್ಯವನ್ನೂ ಸಿಂಧುಗೆ ಬಿಟ್ಟುಕೊಟ್ಟಿರಲಿಲ್ಲ.

ಸಮೀರ್ ವರ್ಮಗೆ ಭರ್ಜರಿ ಜಯ: ಪುರುಷರ ಸಿಂಗಲ್ಸ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ ಭಾರತದ ಸಮೀರ್ ವರ್ಮ ಇಂಡೋನೇಶ್ಯದ ಟಾಮಿ ಸುಗಿಯಾರ್ತೊ ಅವರನ್ನು ನೇರ ಗೇಮ್ಸ್‌ಗಳಿಂದ ಬಗ್ಗುಬಡಿಯುವ ಮೂಲಕ ಬಿಡಬ್ಲುಎಫ್ ವರ್ಲ್ಡ್ ಟೂರ್ ಫೈನಲ್ಸ್‌ನ ನಾಕೌಟ್ ಹಂತಕ್ಕೆ ಅರ್ಹತೆ ಗಳಿಸುವ ತಮ್ಮ ಆಸೆಯನ್ನು ಜೀವಂತವಾಗಿರಿಕೊಂಡಿದ್ದಾರೆ.

ಗುರುವಾರ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ವಿಶ್ವ ನಂ.14 ಸಮೀರ್, 10ನೇ ಶ್ರೇಯಾಂಕದ ಸುಗಿಯಾರ್ತೊ ಅವರನ್ನು 21-16, 21-7 ಗೇಮ್‌ಗಳ ಅಂತರದಲ್ಲಿ ಮಣಿಸಿದರು. 40 ನಿಮಿಷಗಳಲ್ಲಿ ಆಟ ಕೊನೆಗೊಂಡಿತು. ಸಮೀರ್ ಪಂದ್ಯಾವಳಿಗೆ ಬರುವ ಮುಂಚೆ ಸುಗಿಯಾರ್ತೊ ವಿರುದ್ಧ 1-1 ಹೆಡ್ ಟು ಹೆಡ್ ಗೆಲುವಿನ ದಾಖಲೆ ಹೊಂದಿದ್ದರು. ತಮ್ಮ ಆರಂಭಿಕ ಪಂದ್ಯವನ್ನು ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ ಸಮೀರ್ ಸೋತಿದ್ದರು. ಕೆಂಟೊ ಮೊಮೊಟಾ ಶುಕ್ರವಾರ ಥಾಲೆಂಡ್‌ನ ಕಾಂಟಾಫೊನ್ ವಾಂಗ್‌ಚಾರೊ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News