ಮೆಟ್ರೋ ಪ್ರಯಾಣಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ: ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್

Update: 2018-12-14 17:03 GMT

ಬೆಂಗಳೂರು, ಡಿ.14: ಟ್ರಿನಿಟಿ ವೃತ್ತದಲ್ಲಿನ ಮೆಟ್ರೋ ಪಿಲ್ಲರ್ ದೋಷದ ಬಗ್ಗೆ ಪ್ರಯಾಣಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ. ಮೆಟ್ರೋ ಸಂಚಾರ ಸುರಕ್ಷಿತವಾಗಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ. 

ಟ್ರಿನಿಟಿ ವೃತ್ತದ ಮೆಟ್ರೋ ಪಿಲ್ಲರ್‌ನ ವಯಾಡಕ್ಟ್‌ನಲ್ಲಿ ಬಿರುಕು ಮೂಡಿದ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜನರಿಗೆ ಯಾವುದೇ ಆತಂಕ ಬೇಡ. ಮೆಟ್ರೋ ಸಂಚಾರ ಸುರಕ್ಷಿತವಾಗಿದೆ. ಈ ಬಗ್ಗೆ ನಾನು ಆಶ್ವಾಸನೆ ಕೊಡುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಬೇರೆ ವಯಾಡಕ್ಟ್ ಭಾಗದಲ್ಲಿ ಗ್ಯಾಪ್ ಇರುವ ಬಗ್ಗೆ ಸುದ್ದಿಯಾಗುತ್ತಿದೆ. ಆದರೆ, ಅದರ ಡಿಸೈನ್ ಮಾಡಿರುವುದೇ ಹಾಗೇ. ಇದು ಸಾಮಾನ್ಯವಾಗಿರುವಂತಹದ್ದು ಎಂದು ತಿಳಿಸಿದರು.

ಹನಿಕಾಂಬ್ ಸಮಸ್ಯೆಯಿಂದ ಕಾಂಕ್ರಿಟ್ ಟೊಳ್ಳಾಗಿದೆ ಎಂದು ನಮ್ಮ ಪರಿಶೀಲನೆ ವೇಳೆ ಗೊತ್ತಾಗಿದೆ. ಇದು ಮುನ್ನೆಚ್ಚರಿಕಾ ಕ್ರಮವಾಗಿ ಪಿಲ್ಲರ್‌ಗೆ ಹೆಚ್ಚುವರಿಯಾಗಿ ಸಪೋರ್ಟ್ ಆಗಿ ಕಬ್ಬಿಣದ ಸರಳನ್ನು ಅಳವಡಿಸಲಾಗಿದೆ. ಹೆಚ್ಚುವರಿಯಾಗಿ ಕಬ್ಬಿಣದ ಸರಳನ್ನು ಸಪೋರ್ಟ್ ನೀಡಿದ್ದೇವೆ ಎಂದ ಮಾತ್ರಕ್ಕೆ ಮೆಟ್ರೋ ಸುರಕ್ಷಿತವಾಗಿದೆ ಎಂದಲ್ಲ. ಬದಲಿಗೆ ಇಂದಿನಿಂದ ಆಪರೇಷನ್ ಆರಂಭ ಮಾಡಿದ್ದೇವೆ ಎಂದರು.

ರಾತ್ರಿ ವೇಳೆ ಮೆಟ್ರೋ ಕಾಮಗಾರಿ ನಡೆಸುತ್ತೇವೆ. ಕ್ರಾಸ್ ಬೀಮ್ ನಲ್ಲಿ ಅಲ್ಟ್ರಾಸೋನಿಕ್ ಟೆಸ್ಟ್ ಮಾಡಿದ್ದೇವೆ. ಈಗಾಗಲೇ ಕೆಮಿಕಲ್ ಮಿಶ್ರಿತ ಜೆಲ್ ಹಾಕಿದ್ದು, ಸಂಪೂರ್ಣ ಕೆಲಸದ ಬಗ್ಗೆ ಅಂತಿಮ ರೂಪರೇಷೆ ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ, ಅನುಭವಿ ತಜ್ಞರ ಬಳಿ ಈ ಸಂಬಂಧ ಮಾತುಕತೆ ನಡೆಸಿದ್ದು, ಇನ್ನು ನಾಲ್ಕು-ಐದು ದಿನಗಳಲಿ ಆಕ್ಷನ್ ಪ್ಲಾನ್ ತಯಾರಾಗುತ್ತದೆ. ಅನಂತರ ಅನುಭವಿ ತಜ್ಞರಿಂದಲೇ ಅಂತಿಮ ದುರಸ್ಥಿ ಕಾರ್ಯ ಮಾಡಿಸಲಾಗುತ್ತದೆ ಎಂದು ಹೇಳಿದರು.

ಈಗ ಪೂರ್ವ ಸಿದ್ಧತೆಯಷ್ಟೇ ನಡೆಯುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ದುರಸ್ತಿ ಕಾರ್ಯ ನಡೆಸಲು ಸಜ್ಜಾಗಿದ್ದೇವೆ. ವೀಕೆಂಡ್‌ನಲ್ಲಿ ಅಂತಿಮ ದುರಸ್ತಿ ಕಾರ್ಯ ನಡೆಸುತ್ತೇವೆ. ರಸ್ತೆಯ ಎರಡೂ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಪಿಲ್ಲರ್ ಭಾಗದಲ್ಲಿ ಹೋಗುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಅಲ್ಲದೇ ಕಾಂಕ್ರೀಟ್‌ನಲ್ಲಿ ಸಣ್ಣ ಸಣ್ಣ ರಂಧ್ರಗಳಾಗಿವೆ. ಆ ಗ್ಯಾಪನ್ನು ಪೂರ್ತಿ ಮಾಡಬೇಕಾಗಿದೆ. ಹೀಗಾಗಿ, ಒಂದು ದಿನ ಅಥವಾ ಎರಡು ದಿನ ಮೆಟ್ರೋ ಬಂದ್ ಮಾಡಲಿದ್ದೇವೆ ಎಂದು ತಿಳಿಸಿದರು.

ಏಕಿಷ್ಟು ಸಿದ್ಧತೆ?: ಒಂದು ವಾರದ ಹಿಂದೆ ಬೀಮ್‌ನಲ್ಲಿ ಸಮಸ್ಯೆ ಕಾಣಿಸಿದ್ದರೂ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ. 2012 ರಲ್ಲಿ ಇದೇ ಬೀಮ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಕಾಮಗಾರಿ ಕೈಗೊಂಡು ಸರಿಪಡಿಸಲಾಗಿತ್ತು. ಆದರೆ ಸೂಕ್ತ ಕಾಮಗಾರಿ ಕೈಗೊಳ್ಳದೆ ನಿರ್ಲಕ್ಷ ತೋರಿದ್ದರ ಪರಿಣಾಮವಾಗಿ ಬೀಮ್‌ನಲ್ಲಿ ಕಾಂಕ್ರಿಟ್ ಶಿಥಿಲಗೊಂಡು ದೊಡ್ಡ ಸಮಸ್ಯೆಯಾಗಿದೆ.

ಹೀಗಾಗಿ ಈ ಬಾರಿ ಶಾಶ್ವತವಾಗಿ ಸಮಸ್ಯೆ ಬಗೆಹರಿಯುವಂತೆ ದುರಸ್ತಿ ಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ ಬೀಮ್ ಒಳಗಿನ ಟೊಳ್ಳು, ಅದರ ಪ್ರಮಾಣ ಮೊದಲಾದ ಅಂಶಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಗ್ರೌಟಿಂಗ್ ಕಾಮಗಾರಿ ಮಾಡುವ ತಜ್ಞರನ್ನು ಅಥವಾ ಸಂಸ್ಥೆಯನ್ನು ಕರೆಸಿ ಅವರಿಂದಲೇ ಕಾಮಗಾರಿ ಮಾಡಿಸಬೇಕಿದೆ. ಈ ರೀತಿಯ ಪೂರ್ವಸಿದ್ಧತೆ ಸಹಿತ ಸೂಕ್ತ ದುರಸ್ತಿ ಮಾಡಿದರೆ ಮಾತ್ರ ಸಮಸ್ಯೆಗೆ ಅಂತ್ಯ ಕಾಣಿಸಲು ಸಾಧ್ಯ ಎಂದು ಅವರು ಹೇಳಿದರು.

ಮುಂದಿನ ಶನಿವಾರ ಮತ್ತು ರವಿವಾರ(ಡಿ.22 ಮತ್ತು 23) ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ಆದರೆ, ಮೆಟ್ರೋದಿಂದ ಹೆಚ್ಚುವರಿಯಾಗಿ ಬಸ್ ವ್ಯವಸ್ಥೆ ಮಾಡಲಿದ್ದು, ಮೆಟ್ರೋ ದರದಲ್ಲಿಯೇ ಬಸ್ ದರವೂ ಸೇರಿಸಲಾಗುತ್ತದೆ. ಎಂಜಿ ರಸ್ತೆಯಿಂದ ಇಂದಿರಾನಗರದವರೆಗೂ ಉಚಿತವಾಗಿ ಬಸ್ ಸೇವೆಯನ್ನು ನೀಡಲಾಗುತ್ತದೆ ಎಂದು ಅಜಯ್ ಸೇಠ್ ಮಾಹಿತಿ ನೀಡಿದರು.

ಸಂಖ್ಯೆ ಇಳಿಕೆ:

ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಬಿಟ್ಟಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಪ್ರಯಾಣಿಕರ ಸಂಖ್ಯೆಯೂ ಇಳಿಮುಖಗೊಂಡಿದೆ. ಏಕಾಏಕಿ ಒಂದೇ ದಿನದಲ್ಲಿ ಏಳು ಸಾವಿರ ಪ್ರಯಾಣಿಕರ ಸಂಖ್ಯೆ ಕುಸಿದಿದ್ದು, ಬುಧವಾರ ಈ ಮಾರ್ಗದಲ್ಲಿ 3.88 ಲಕ್ಷ ಮಂದಿ ಪ್ರಯಾಣಿಸಿದ್ದರೆ, ಗುರುವಾರ 3.81 ಲಕ್ಷ ಮಂದಿ ಪ್ರಯಾಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News