ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲ: ಆಯ್ಕೆ ಪ್ರಕ್ರಿಯೆ ಮುಂದೂಡಿಕೆ

Update: 2018-12-14 17:08 GMT

ಬೆಂಗಳೂರು, ಡಿ.14: ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡೆಸಿದ ತಂತ್ರ-ಪ್ರತಿತಂತ್ರದಿಂದಾಗಿ ಶುಕ್ರವಾರ ನಡೆಯಬೇಕಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಆಯ್ಕೆ ಚುನಾವಣೆಯನ್ನು ಮೇಯರ್ ಗಂಗಾಂಬಿಕೆ ಮುಂದೂಡಿದ್ದಾರೆ.

ಅಧ್ಯಕ್ಷರನ್ನು ಆಯ್ಕೆ ಮಾಡಲು ಕಾಂಗ್ರೆಸ್‌ನ ಶಾಸಕ ರಾಮಲಿಂಗಾರೆಡ್ಡಿ, ಜೆಡಿಎಸ್‌ನ ಶಾಸಕ ಗೋಪಾಲಯ್ಯ, ರಾಜ್ಯಸಭಾ ಸದಸ್ಯ ಉಪೇಂದ್ರರೆಡ್ಡಿ ಹರಸಾಹಸ ನಡೆಸಿದ್ದು, ಸದಸ್ಯರ ಮನವೊಲಿಕೆಯ ಕಸರತ್ತು ವಿಫಲವಾಯಿತು. ಹೀಗಾಗಿ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಇಡೀ ಪ್ರಕ್ರಿಯೆಯನ್ನು ಮುಂದೂಡಿದರು.

ನಿರೀಕ್ಷೆಯಂತೆ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಬೇಕಿತ್ತು. ಆದರೆ, ನಗರ ಯೋಜನೆ ಸ್ಥಾಯಿ ಸಮಿತಿಗೆ ಬಿಜೆಪಿ ಉಚ್ಛಾಟಿತ ಸದಸ್ಯ ಭೈರಸಂದ್ರ ವಾರ್ಡ್‌ನ ಸದಸ್ಯ ನಾಗರಾಜ್‌ರನ್ನು ಆಯ್ಕೆ ಮಾಡಲು ಕಾಂಗ್ರೆಸ್ ಮುಂದಾಗಿತ್ತು. ಇದನ್ನು ವಿರೋಧಿಸಿದ ಬಿಜೆಪಿ ಗದ್ದಲ ಉಂಟು ಮಾಡಿತು. ಇದರಿಂದಾಗಿ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಅಲ್ಲದೆ, ಜೆಡಿಎಸ್ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್ ಸ್ಥಾಯಿ ಸಮಿತಿಗೆ ಪಟ್ಟು ಹಿಡಿದಿದ್ದಾರೆ. ಜೆಡಿಎಸ್‌ನಲ್ಲಿ ಸಾಮಾಜಿಕ ನ್ಯಾಯ ಸಮಿತಿ ಸಿಗದಿದ್ದಲ್ಲಿ ಅವರನ್ನು ಬಿಜೆಪಿ ಸೆಳೆಯಲು ಮುಂದಾಗಿದ್ದು, ಕಾಂಗ್ರೆಸ್-ಜೆಡಿಎಸ್‌ಗೆ ತಿರುಗೇಟು ನೀಡಲು ಮುಂದಾಗಿದೆ. ಹೀಗಾಗಿ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ 12 ಗಂಟೆಗೆ ಸಮಯ ನಿಗದಿ ಮಾಡಿದ್ದರೂ ಸಂಜೆವರೆಗೂ ಆಯ್ಕೆ ಪ್ರಕ್ರಿಯೆ ಆರಂಭವಾಗಲಿಲ್ಲ.

ಸಂಭವನೀಯ ಅಧ್ಯಕ್ಷರ ಪಟ್ಟಿ:

*ಮಾರುಕಟ್ಟೆ ಸ್ಥಾಯಿ ಸಮಿತಿ ಫರೀದಾ ಇಷ್ತಿಯಾಕ್(ಕಾಂಗ್ರೆಸ್)

*ಅಪೀಲು ಸ್ಥಾಯಿ ಸಮಿತಿ- ಸುಜಾತ ರಮೇಶ್(ಕಾಂಗ್ರೆಸ್)

*ಬೃಹತ್ ಕಾಮಗಾರಿ ಸ್ಥಾಯಿ ಸಮಿತಿ-ಲಾವಣ್ಯ ಗಣೇಶ್(ಕಾಂಗ್ರೆಸ್)

*ಲೆಕ್ಕಪತ್ರ ಸ್ಥಾಯಿ ಸಮಿತಿ-ವೇಲು ನಾಯಕರ್(ಕಾಂಗ್ರೆಸ್)

*ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ-ಸೌಮ್ಯಶಿವಕುಮಾರ್(ಕಾಂಗ್ರೆಸ್)

*ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ-ಹೇಮಲತಾ ಗೋಪಾಲಯ್ಯ (ಜೆಡಿಎಸ್)

*ವಾರ್ಡ್‌ಮಟ್ಟದ ಸಮಿತಿ-ಉಮೇ ಸಲ್ಮಾ(ಜೆಡಿಎಸ್)

*ಶಿಕ್ಷಣ ಸ್ಥಾಯಿ ಸಮಿತಿ-ಇಮ್ರಾನ್ ಪಾಷ(ಜೆಡಿಎಸ್)

*ನಗರ ಯೋಜನಾ ಸ್ಥಾಯಿ ಸಮಿತಿ-ಚಂದ್ರಪ್ಪ(ಪಕ್ಷೇತರ)

*ಆಡಳಿತ ಮತ್ತು ಸುಧಾರಣ ಸ್ಥಾಯಿ ಸಮಿತಿ-ಆನಂದ್(ಪಕ್ಷೇತರ)

*ಆರೋಗ್ಯ ಸ್ಥಾಯಿ ಸಮಿತಿ-ಮುಜಾಯಿದ್ ಪಾಷಾ(ಎಸ್‌ಡಿಪಿಐ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News