ಶ್ರೀಕಂಠೇಗೌಡಗೆ ಒಲಿಯಲಿದೆ ವಿಧಾನಪರಿಷತ್ ಉಪಸಭಾಪತಿ ಪಟ್ಟ ?

Update: 2018-12-14 17:12 GMT

ಬೆಂಗಳೂರು, ಡಿ.14: ವಿಧಾನಪರಿಷತ್ತಿನ ಸಭಾಪತಿಯಾಗಿ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಕೆ.ಪ್ರತಾಪ್‌ ಚಂದ್ರ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾದ ಬೆನ್ನಲ್ಲೇ, ಉಪಸಭಾಪತಿ ಹಾಗೂ ಸರಕಾರದ ಮುಖ್ಯಸಚೇತಕ ಹುದ್ದೆಯು ಜೆಡಿಎಸ್ ಪಾಲಾಗುವ ಸಾಧ್ಯತೆಗಳು ಹೆಚ್ಚಿವೆ.

ಉಪ ಸಭಾಪತಿಯಾಗಿ ಮತ್ತೊಂದು ಅವಧಿಗೆ ಮರಿತಿಬ್ಬೇಗೌಡ ಮುಂದುವರೆಯಲು ಪ್ರಯತ್ನ ನಡೆಸುತ್ತಿರುವ ನಡುವೆಯೇ, ಹಿರಿಯ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಪರವಾಗಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಜೊತೆಗೆ, ಸರಕಾರದ ಮುಖ್ಯಸಚೇತಕ ಸ್ಥಾನಕ್ಕೆ ಟಿ.ಎ.ಶರವಣರನ್ನು ನೇಮಕ ಮಾಡಲು ಪಕ್ಷದಲ್ಲಿ ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ.

ಸಚಿವ ಸ್ಥಾನಕ್ಕಾಗಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕರನ್ನು ಸಮಾಧಾನ ಪಡಿಸಲು ಸಂಸದೀಯ ಕಾರ್ಯದರ್ಶಿ ಹಾಗೂ ರಾಜಕೀಯ ಕಾರ್ಯದರ್ಶಿ ಹುದ್ದೆಗಳಿಗೂ ಶಾಸಕರನ್ನು ನೇಮಕ ಮಾಡಲು ಸರಕಾರ ಮುಂದಾಗಿದೆ. ಕಾಂಗ್ರೆಸ್ ಪಕ್ಷದ 7 ಹಾಗೂ ಜೆಡಿಎಸ್ ಪಕ್ಷದ 3 ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಗಳನ್ನಾಗಿ ನೇಮಕ ಮಾಡಲು ಚಿಂತನೆ ನಡೆದಿದೆ.

ರಾಜ್ಯ ಸರಕಾರದ ಹೊಸದಿಲ್ಲಿಯ ವಿಶೇಷ ಪ್ರತಿನಿಧಿಯನ್ನಾಗಿ ಈಗಾಗಲೆ ಜೆಡಿಎಸ್ ಸಯ್ಯದ್ ಮೊಹಿದ್ ಅಲ್ತಾಫ್‌ರನ್ನು ನೇಮಕ ಮಾಡಿದೆ. ಕಾಂಗ್ರೆಸ್ ಪಕ್ಷದಿಂದಲೂ ಓರ್ವ ಶಾಸಕರನ್ನು ಈ ಹುದ್ದೆಗೆ ಸಹ ಪ್ರತಿನಿಧಿಯನ್ನಾಗಿ ನೇಮಕ ಮಾಡಲು ನಿರ್ಧರಿಸಲಾಗಿದೆ.

91 ನಿಗಮ, ಮಂಡಳಿಗಳ ಪೈಕಿ ಮೊದಲ ಹಂತದಲ್ಲಿ 30 ಪ್ರಮುಖ ನಿಗಮ, ಮಂಡಳಿಗಳಿಗೆ ನೇಮಕ ಮಾಡಲು ಇತ್ತೀಚೆಗೆ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಪೈಕಿ ಕಾಂಗ್ರೆಸ್ ಪಕ್ಷದ 20 ಹಾಗೂ ಜೆಡಿಎಸ್ ಪಕ್ಷದ 10 ಶಾಸಕರಿಗೆ ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ವಿಸ್ತರಣೆ ವೇಳೆ ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ ಪಾಲಿಸಲು ಕಾಂಗ್ರೆಸ್ ಮುಂದಾಗಿದೆ. ಜೆಡಿಎಸ್ ತನ್ನ ಪಾಲಿನ ಎರಡು ಸ್ಥಾನಗಳಲ್ಲಿ ಒಂದು ಪರಿಶಿಷ್ಟ ಜಾತಿ ಹಾಗೂ ಮತ್ತೊಂದು ಸ್ಥಾನವನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ನೀಡಲು ಉದ್ದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News