ಅಲೋಕ್ ಕುಮಾರ್ ಬಳಿ ಆರೋಪಿಗಳ ಡೈರಿ: ರವಿ ಕೃಷ್ಣಾರೆಡ್ಡಿ

Update: 2018-12-14 17:35 GMT

ಬೆಂಗಳೂರು, ಡಿ.14: ಆ್ಯಂಬಿಡೆಂಟ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಬಳಿ ಒಂದು ಡೈರಿಯಿದ್ದು, ಅದರ ಒಂದಷ್ಟು ಮಾಹಿತಿ ನಮ್ಮ ಬಳಿ ಇದೆ. ಆರೋಪಿಗಳನ್ನು ರಕ್ಷಿಸಲು ಮುಂದಾದರೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಉಗ್ರ ಹೋರಾಟ ಮಾಡುತ್ತದೆ ಎಂದು ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲೋಕ್ ಕುಮಾರ್ ಬಳಿ ಇರುವ ಡೈರಿಯಲ್ಲಿ ಕೆಲ ರಾಜಕಾರಣಿಗಳ ಹೆಸರಿದ್ದು, ಅವುಗಳನ್ನು ಬಹಿರಂಗ ಪಡಿಸುವ ಮೂಲಕ ಭ್ರಷ್ಟರ ಹೆಡೆಮುರಿ ಕಟ್ಟಬೇಕು. ಅಲ್ಲದೆ, ಅವರು ಡಿಜಿಪಿಯನ್ನೂ ಸಂಪರ್ಕಿಸದೆ, ಗೃಹ ಸಚಿವರನ್ನೂ ಭೇಟಿ ಮಾಡದೆ, ಮುಖ್ಯಮಂತ್ರಿಗಳನ್ನು ನೇರವಾಗಿ ಸಂಪರ್ಕಿಸುತ್ತಿರುವುದಾದರೂ ಏಕೆ. ಈ ಹಿನ್ನೆಲೆಯಲ್ಲಿ ಗೃಹ ಇಲಾಖೆ ಅಲೋಕ್ ಕುಮಾರ್‌ಗೆ ಕೂಡಲೇ ನೋಟಿಸ್ ನೀಡಬೇಕೆಂದು ಆಗ್ರಹಿಸಿದರು.

ಆ್ಯಂಬಿಡೆಂಟ್ ಪ್ರಕರಣದ ಪ್ರಮುಖ ಆರೋಪಿ ಫರೀದ್ ಹಾಗೂ ಭ್ರಷ್ಟ ರಾಜಕಾರಣಿಗಳನ್ನು ರಕ್ಷಿಸಲು ಸಂತ್ರಸ್ತರಿಗೆ ಸರಕಾರ ಅನ್ಯಾಯ ಮಾಡುತ್ತಿದ್ದು, ಪ್ರಕರಣವನ್ನು ಮುಚ್ಚಿ ಹಾಕುವ ವ್ಯವಸ್ಥಿತ ಪ್ರಯತ್ನದಿಂದಾಗಿ ತನಿಖೆ ದಾರಿ ತಪ್ಪುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸತ್ಯಾಂಶಗಳನ್ನು ಹೇಳುವವರನ್ನು ಬಂಧಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಅಲ್ಲದೆ, ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಸಯ್ಯದ್ ಫರೀದ್ ಅಹ್ಮದ್‌ನನ್ನು ವಿಚಾರಣೆ ಮಾಡಿದ್ದಾರೆ. ಆದರೆ, ಬಂಧಿಸಿಲ್ಲ. ಗುರುವಾರ ವಿಜಯ್ ಟಾಟಾ ಮನೆಯ ಮೇಲೆ ದಾಳಿ ನಡೆಸಿದ್ದು, ಅವರನ್ನೂ ಬಂಧಿಸಿಲ್ಲ. ಇದು, ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದ್ದು, ಅವರ ಜೊತೆ ಇರುವ ರಾಜಕಾರಣಿಗಳು ಯಾರು? ಅವರನ್ನ ರಕ್ಷಿಸುತ್ತಿರುವವರು ಯಾರು? ರಕ್ಷಿಸಲು ಮುಂದಾಗಿರುವ ಉದ್ದೇಶ ಏನು? ಎಂದು ಪ್ರಶ್ನಿಸಿದರು.

ವಿಜಯ್ ಟಾಟಾಗೆ ಆ್ಯಂಬಿಡೆಂಟ್‌ನಲ್ಲಿರೋದು ಒಂದು ಚಿಕ್ಕ ಮೊತ್ತವಷ್ಟೇ. ಬೇರೆ ಬೇರೆ ಕಡೆಯಿಂದ ಅವರಿಗೆ ಕೋಟಿ ಕೋಟಿ ಹಣ ಬರುತ್ತಿದೆ. ಇನ್ನು, ಆ್ಯಂಬಿಡೆಂಟ್ ಪ್ರಕರಣದಲ್ಲಿ ಜನಾರ್ದನ ರೆಡ್ಡಿಯವರ ಪಾತ್ರವಿಲ್ಲದಿದ್ದರೂ ಬಂಧಿಸಿ, ಪ್ರಕರಣದ ದಿಕ್ಕು ತಪ್ಪಿಸುವ ಮೂಲಕ ಅವರನ್ನು ಬಿಡುಗಡೆ ಮಾಡುತ್ತಾರೆ. ಇದು ನಮ್ಮ ಪೊಲೀಸ್ ವ್ಯವಸ್ಥೆ ಎಂದು ಲೇವಡಿ ಮಾಡಿದರು.

ಆ್ಯಂಬಿಡೆಂಟ್ ಪ್ರಕರಣದ ಹಿನ್ನೆಲೆ: 2016 ರಲ್ಲಿ ಬೆಂಗಳೂರಿನಲ್ಲಿ ಸಯ್ಯದ್ ಫರೀದ್ ಅಹ್ಮದ್ ಪ್ರಾರಂಭಿಸಿದ ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಟ್ ಎಂಬ ಕಂಪನಿಯಲ್ಲಿ ಇಲ್ಲಿಯವರೆಗೂ ಸುಮಾರು 15000 ಕ್ಕೂ ಹೆಚ್ಚು ಅಮಾಯಕರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಬಡವರು, ಕೆಳ ಮಧ್ಯಮ ವರ್ಗದ ಜನ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಬಡವರು, 954 ಕೋಟಿ ರೂ. ಹಣವನ್ನು ತೊಡಗಿಸಿ ವಂಚನೆಗೆ ಒಳಪಟ್ಟಿದ್ದಾರೆ. ಈ ಪ್ರಕರಣದಲ್ಲಿ ರಾಜಕಾರಣಿಗಳು ಶಾಮೀಲಾಗಿರುವ ಆರೋಪ ಕೇಳಿ ಬರುತ್ತಿದ್ದು, ಪ್ರಕರಣದ ತನಿಖೆಯನ್ನು ಸಿಸಿಬಿ ನಡೆಸುತ್ತಿದೆ.

ಬಂಧನ

ಆ್ಯಂಬಿಡೆಂಟ್ ಪ್ರಕರಣದ ಪ್ರಮುಖ ಆರೋಪಿ ಫರೀದ್ ರಕ್ಷಣೆಗೆ ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ನಿಂತಿದ್ದಾರೆ. ಇದರಿಂದ ತನಿಖೆ ಹಳ್ಳಹಿಡಿಯುತ್ತಿದೆ. ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ವರ್ಗಾಯಿಸುವಂತೆ ಆಗ್ರಹಿಸಿದ್ದಕ್ಕೆ ಜಯೀದ್ ಖಾನ್ ಹಾಗೂ ಸಿರಾಜುದ್ದೀನ್ ಎಂಬುವವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ರಕ್ಷಣೆ ಕೊಟ್ಟರೆ ಹಣ ನೀಡುವುದಾಗಿ ಅಲೋಕ್ ಕುಮಾರ್ ಫರೀದ್‌ಗೆ ಬೇಡಿಕೆ ಇಟ್ಟಿದ್ದರು. ಮಾಲಕನ ಜೊತೆಗೂಡಿ ಪ್ರಕರಣವನ್ನು ಮುಚ್ಚಿ ಹಾಕಲು ಅಲೋಕ್ ಮುಂದಾಗಿದ್ದಾರೆ. ಆರೋಪಿಯೊಂದಿಗೆ ಭಾಗಿಯಾಗಿ ಫರೀದ್‌ಗೆ ರಾಜ ಮರ್ಯಾದೆ ಕೊಡುತ್ತಿದ್ದಾರೆ. ಹಣದ ಆಸೆಗಾಗಿ ಅಲೋಕ್ ಪ್ರಕರಣವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ದೂರುದಾರರು ಬುಧವಾರವಷ್ಟೇ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News