150 ಕೋಟಿ ರೂ. ಗೂ ಹೆಚ್ಚು ಸಹಾಯ ಧನ: ಇಂದಿರಾ ಕ್ಯಾಂಟೀನ್ ಅವ್ಯವಹಾರ ತನಿಖೆಗೆ ಎನ್.ಆರ್.ರಮೇಶ್ ಆಗ್ರಹ

Update: 2018-12-14 17:18 GMT

ಬೆಂಗಳೂರು, ಡಿ. 14: ಇಂದಿರಾ ಕ್ಯಾಂಟೀನ್‌ನಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದ್ದು, ಇದನ್ನು ಉನ್ನತ ಮಟ್ಟದ ತನಿಖೆ ಅಥವಾ ಸಿಐಡಿಗೆ ವಹಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿರುವ 189 ಇಂದಿರಾ ಕ್ಯಾಂಟಿನ್‌ಗಳಲ್ಲಿ 103 ಕ್ಯಾಂಟೀನ್‌ಗಳನ್ನು ಚೆಫ್ ಕಾರ್ಟ್ ಸಂಸ್ಥೆ ಹಾಗೂ 86 ಕ್ಯಾಂಟಿನ್‌ಗಳನ್ನು ರಿವಾರ್ಡ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ನಗರದ ಎಲ್ಲ ಕ್ಯಾಂಟೀನ್‌ಗಳಲ್ಲಿ ದಿನಕ್ಕೆ ಮೂರು ಸಾವಿರಕ್ಕೂ ಅಧಿಕ ಜನರು ಉಪಾಹಾರ ಸೇವಿಸುತ್ತಿದ್ದಾರೆ ಎಂದು ನಕಲಿ ಬಿಲ್ ಸೃಷ್ಟಿ ಮಾಡಿ ಸರಕಾರದ ಸಹಾಯ ಧನವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಹೀಗಾಗಿ, ಇದನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

ಸಿದ್ಧರಾಮಯ್ಯ ನೇತೃತ್ವದ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 9 ಅಡುಗೆ ಮನೆ ಹಾಗೂ 24 ಇಂದಿರಾ ಕ್ಯಾಂಟೀನ್‌ಗಳನ್ನು ನಿರ್ಮಾಣ ಮಾಡದ ಕಂಪೆನಿಗೆ 11 ಕೋಟಿ 72 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಕೆಲಸವೇ ಆಗದೆ ಇಷ್ಟೊಂದು ಮೊತ್ತದ ಹಣವನ್ನು ಬಿಡುಗಡೆ ಮಾಡಿದ ಉದಾಹರಣೆಗಳು ಎಲ್ಲೂ ಇಲ್ಲ. ಹೀಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಚೆಫ್ ಕಾರ್ಟ್ ಕಂಪನಿ ತನ್ನ ನಿರ್ವಹಣೆಯಲ್ಲಿರುವ 103 ಕ್ಯಾಂಟೀನ್‌ಗಳಲ್ಲಿ ಪ್ರತಿ ತಿಂಗಳು ಸರಾಸರಿ 1,51,950 ಮಂದಿ ಬೆಳಗಿನ ಉಪಾಹಾರ, 13,99,650 ಮಂದಿ ಮಧ್ಯಾಹ್ನದ ಊಟ ಹಾಗೂ 6,42,450 ಮಂದಿ ರಾತ್ರಿ ಊಟ ಮಾಡುತ್ತಿದ್ದಾರೆ ಎಂದು ವರದಿ ನೀಡಿದೆ. ರಿವಾರ್ಡ್ ಸಂಸ್ಥೆಯ 86 ಕ್ಯಾಂಟೀನ್‌ಗಳಲ್ಲಿ ಪ್ರತಿ ತಿಂಗಳು ಸರಾಸರಿ 1,21,250 ಮಂದಿ ಬೆಳಗಿನ ಉಪಾಹಾರ, 10,12,150 ಮಂದಿ ಮಧ್ಯಾಹ್ನ ಊಟ ಹಾಗೂ 5,13,050 ಮಂದಿ ರಾತ್ರಿಯ ಊಟ ಮಾಡುತ್ತಾರೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ದೂರಿದರು.

ಎರಡು ಕಂಪನಿಗಳ 189 ಕ್ಯಾಂಟೀನ್‌ಗಳಲ್ಲಿ ಪ್ರತಿ ತಿಂಗಳು 2,73,200 ಮಂದಿ ಬೆಳಗಿನ ಉಪಾಹಾರ, 24,11,800 ಮಂದಿ ಮಧ್ಯಾಹ್ನದ ಊಟ, 11,55,550 ಮಂದಿ ರಾತ್ರಿ ಊಟ ಮಾಡುತ್ತಾರೆ ಹಾಗೂ ಸರಾಸರಿ ತಿಂಗಳಿಗೆ 62 ಲಕ್ಷ 70 ಸಾವಿರ ಮಂದಿ ಊಟ ಸೇವಿಸುತ್ತಿದ್ದಾರೆ ಎಂದು ನಕಲಿ ಬಿಲ್ ಸೃಷ್ಟಿಸಿ ಹಗಲು ದರೋಡೆ ಮಾಡುತ್ತಿದ್ದಾರೆ. ಈ ಎರಡೂ ಸಂಸ್ಥೆಗಳು ಪಾಲಿಕೆಗೆ 6,82,81,373 ರೂ. ಪ್ರತಿ ತಿಂಗಳು ಸಹಾಯ ಧನದ ರೂಪದಲ್ಲಿ ಪಡೆಯುತ್ತಿದ್ದು, ಇಂದಿರಾ ಕ್ಯಾಂಟೀನ್ ಆರಂಭವಾದ ಇಲ್ಲಿಯವರೆಗೆ 150 ಕೋಟಿ ರೂ. ಗೂ ಹೆಚ್ಚು ಮೊತ್ತದ ಸಹಾಯ ಧನ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News